ಬಿಜೆಪಿ ಯಾವತ್ತೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ : ಬಿ.ವೈ.ವಿಜಯೇಂದ್ರ

Update: 2025-03-23 14:58 IST
Photo of press meet
  • whatsapp icon

ಕಲಬುರಗಿ : 'ಬಿಜೆಪಿ ಯಾವತ್ತೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ, ಆದರೆ ಹಿಂದೂಗಳಿಗೆ ಅವಮಾನ ಮಾಡುವ ನಿಲುವನ್ನು ಸಹಿಸಲ್ಲʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್ ಪ್ರಕರಣ ಮತ್ತು 18 ಶಾಸಕರ ಅಮಾನತ್ತನ್ನು ಬಿಜೆಪಿ ವಿರೋಧಿಸುತ್ತದೆ, ಅಲ್ಲದೆ ಕಾಂಗ್ರೆಸ್ ಮಾಡುತ್ತಿರುವ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣವನ್ನು ಖಂಡಿಸುತ್ತದೆ, ಇದರ ವಿರುದ್ಧ ಬಿಜೆಪಿ ಹೋರಾಡುತ್ತಿದ್ದು, ಜೆಡಿಎಸ್ ಕೂಡ ಬೆಂಬಲಿಸುತ್ತಿದೆ ಎಂದರು.

ಹನಿಟ್ರ್ಯಾಪ್ ಪ್ರಕರಣವು ಆಡಳಿತ ಪಕ್ಷದಲ್ಲಿ ಸಿಎಂ ಗಾದಿಗೆ ನಡೆಯುತ್ತಿರುವ ಪೈಪೋಟಿಗೆ ಸುತ್ತುವರೆದ ಪ್ರಕರಣವಾಗಿದೆ. ಸಿದ್ದರಾಮಯ್ಯ ಅವರಂತಹ ಅನುಭವಿ ಮುಖ್ಯಮಂತ್ರಿಯಿಂದ ಇಂತಹ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ. ನಾವು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ ಅವರೊಂದಿಗೆ ಚರ್ಚಿಸಿದ್ದೇವೆ. ಬೆಂಗಳೂರಿಗೆ ಹೋದ ನಂತರ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ಶಾಸಕರ ಅಮಾನತ್ತಿನ ಬಗ್ಗೆ ಮಾತನಾಡಿದ ಅವರು, 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತ್ತು ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ. ಈ ಅವಧಿಯು ಕೇವಲ ಸಭಾಧ್ಯಕ್ಷರ ಅಧಿಕಾರದಲ್ಲಿ ಸೀಮಿತವಾಗಿರಬೇಕಾಗಿತ್ತು. ಅಲ್ಲದೆ, ಪುರಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಹಾಕಲು ನಿರ್ಬಂಧ ಹೇರಿರುವುದು ಸಂವಿಧಾನ ವಿರೋಧಿ. ಈ ನಿರ್ಧಾರವು ಆಯಾ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಅಮಾನತ್ತು ಹಿಂಪಡೆಯಲು ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ ವಿಜಯೇಂದ್ರ ಅವರು, ಸಮಸ್ಯೆ ಪರಿಹಾರಕ್ಕೆ ಸಭಾಧ್ಯಕ್ಷರೇ ಸ್ಪಷ್ಟತೆ ನೀಡಬೇಕು. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News