ತರಾತುರಿಯಲ್ಲಿ ಒಳಮೀಸಲಾತಿ ಜಾರಿ ಬೇಡ : ಸುಭಾಷ್ ಪವಾರ್ ಫೌಜಿ
ಕಲಬುರಗಿ : ಸರಕಾರ ತರಾತುರಿಯಲ್ಲಿ ರಾಜ್ಯದಲ್ಲಿ ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೊಳಿಸಬಾರದು. ವೈಜ್ಞಾನಿಕವಾಗಿ ಸಮುದಾಯದ ಸರ್ವೆ ನಡೆದಿಲ್ಲ. ಈಗಲಾದರೂ ವೈಜ್ಞಾನಿಕವಾಗಿ ಸರ್ವೆ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಸುಭಾಷ್ ಪವಾರ್ ಫೌಜಿ ಅವರು ಸರಕಾರವನ್ನು ಒತ್ತಾಯಿಸಿದರು.
ಆಳಂದ ಪಟ್ಟಣದಲ್ಲಿ ಲಂಬಾಣಿ, ಕೊಂಚಕೊರಮ ಮತ್ತು ಭೂವಿ ಸಮುದಾಯ ಸಭೆಯಲ್ಲಿ ಅವರು ಮಾತನಾಡಿದರು.
ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೆ ತಂದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಾನಿಯಾಗಬಹುದು ಎಂದು ಅವರು ಎಚ್ಚರಿಸಿದರು. ದೇಶದಲ್ಲೇ ಲಂಬಾಣಿ, ಕೊಂಚಕೊರವ ಭೋವಿ, ಜನಾಂಗದವರೇ ಬಡವರಿದ್ದೇವೆ. ನಾವು ದುಡಿದು ತಿನ್ನುವ ಜನರಾಗಿದ್ದು, ನಮ್ಮ ಮೇಲೆ ಮೀಸಲಾತಿ ಪ್ರಹಾರ ಮಾಡದೆ ನ್ಯಾಯ ಒದಗಿಸಲು ಸರಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಚಿಂಚೋಳಿಯ ಸುನಿಲ್ ಮಹಾರಾಜ್ ಅವರು ಮಾತನಾಡಿ, ನಮ್ಮ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾದರೆ ಸಹಿಸುವುದಿಲ್ಲ, ಸಮುದಾಯದ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಒಳಮೀಸಲಾತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶ್ಯಾಮ್ ಪವಾರ್ ಮಾತನಾಡಿ, ಒಳ ಮೀಸಲಾತಿ ವಿರುದ್ಧ ಕಾನೂನು ಹೋರಾಟಕ್ಕೆ ಸಮುದಾಯ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ತಿಪ್ಪಣ್ಣಪ್ಪ ಒಡೆಯರ್, ಪಿ.ಜಿ.ರಾಠೋಡ, ಗಣಪತಿ ರಾಠೋಡ, ಬಂಜಾರಾ ಕ್ರಾಂತಿದಳ ಅಧ್ಯಕ್ಷ ರಾಜು ಜೆ.ಚವ್ಹಾಣ, ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ, ನ್ಯಾಯವಾದಿ ಸಂಜಯ ನಾಯಕ, ಗಂಗಾರಾಮ ಪವಾರ, ಕೋಟೇಶ ರಾಠೋಡ, ಮಾನು ಪವಾರ, ಬೋಜು ಆಡೆ, ಜಯರಾಮ ರಾಠೋಡ, ಅವಿನಾಶ ರಾಠೋಡ ಭೂವಿ ಸಮುದಾಯ ಅಧ್ಯಕ್ಷರು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.