ಗ್ಯಾರಂಟಿ ಅನುಷ್ಠಾನದ ಜೊತೆಗೆ ಅಭಿವೃದ್ದಿ ಕಾರ್ಯಕ್ಕೂ ಹಣ ಮೀಸಲು : ಡಾ.ಶರಣ ಪ್ರಕಾಶ್ ಪಾಟೀಲ್
ಕಲಬುರಗಿ: ರಾಜ್ಯದ ಜನರಿಗೆ ಚುನಾವಣಾ ಪೂರ್ವ ನೀಡಿದ ವಾಗ್ದಾನದಂತೆ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೂ ಹಣ ಮೀಸಲಿಟ್ಟಿದ್ದೇವೆ ಎಂಬುದಕ್ಕೆ ನಮ್ಮ ಅಭಿವೃದ್ಧಿ ಕೆಲಸಗಳೇ ಸಾಕ್ಷಿಯಾಗಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಶನಿವಾರ ಸೇಡಂ ವಿಧಾನಸಭಾ ಕ್ಷೇತ್ರದ ಚಿಂಚೋಳಿ ತಾಲೂಕಿನ ಈರಗಪಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೆಗಾ-ಮ್ಯಾಕ್ರೋ ಕ್ರಿಯಾ ಯೋಜನೆಯಡಿಯಲ್ಲಿ 9.95 ಕೋಟಿ ರೂ. ವೆಚ್ಚದ ಕೊರಡಂಪಳ್ಳಿ ಗ್ರಾಮದಿಂದ ಬುರಗಪಳ್ಳಿ (ವಾಯಾ-ಈರಗಪಳ್ಳಿ) ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಚಿಂಚೋಳಿ ತಾಲೂಕಿನ 32 ಹಳ್ಳಿ ಸೇಡಂ ಮತ ಕ್ಷೇತ್ರದಲ್ಲಿ ಬರುತ್ತವೆ. ಈ ಹಳ್ಳಿಗಳಲ್ಲಿ ಕಳೆದ ಒಂದು ವರ್ಷದಲ್ಲಿ ಹಲವಾರು ಕೆಲಸ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈರಗಪಳ್ಳಿ ಗ್ರಾಮದಲ್ಲಿಯೇ ಕಳೆದ 1 ವರ್ಷದಲ್ಲಿ 55 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಇದುವೇ ಅಭಿವೃದ್ಧಿ ಕಾರ್ಯಗಳಿಗೆ ಕೈಗನ್ನಡಿಯಾಗಿದೆ. ವಿರೋಧ ಪಕ್ಷಗಳಂತೆ ನಾವು ಸುಖಾ ಸುಮ್ಮನೆ ಸುಳ್ಳು ಭರವಸೆ ನೀಡುವವರಲ್ಲ. ನಮ್ಮ ಮಾತು ಶಾಸನವಿದ್ದಂತೆ, ನುಡಿದಂತೆ ನಡೆಯುತ್ತೇವೆ ಎಂದರು.
17 ಕೋಟಿ ರೂ. ವೆಚ್ಚದಲ್ಲಿ ಕೊಂಡಂಪಳ್ಳಿ- ಗಡಿಕೇಶ್ವಾರ- ಹೊಡೆಬೀರನಳ್ಳಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇತ್ತೀಚೆಗೆ 13 ಕೋಟಿ ರೂ. ವೆಚ್ಚದಲ್ಲಿ ನಿಡಗುಂದಾ- ಹಲ್ಕೋಡಾ-ಪೋತಂಗಲ್- ಜಟ್ಟೂರ ರಸ್ತೆಗೆ ಅಡಿಗಲ್ಲು ಹಾಕಿದ್ದೇವೆ. ಮುಂದಿನ ದಿನದಲ್ಲಿ ಛತ್ರಸಾಲ-ಭಕ್ತಂಪಳ್ಳಿ ರಸ್ತೆಯನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ವೇಗ ನೀಡಿದ್ದೇವೆ ಎಂದರು.
ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಈ ಭಾಗಕ್ಕೆ 371ಕಾಯ್ದೆ ವರದಾನವಾಗಿ ಬಂದಿದೆ. ಅದರಂತೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನದಿಂದ ಜಿಲ್ಲೆ ಸೇರಿ ಪ್ರದೇಶದಾದ್ಯಂತ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿವೆ ಎಂದ ಅವರು, ನಮ್ಮದು ಬಡ ಜನರ ಕಲ್ಯಾಣಕ್ಕೆ ಯೋಜನೆ ರೂಪಿಸುವ ಬಡಜನರ ಸರ್ಕಾರವಾಗಿದೆ. ಅದರೆ ಕೇಂದ್ರದಲ್ಲಿ ಶ್ರೀಮಂತರ, ಉಳ್ಳವರ ಹಿತ ಕಾಯುವ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ, ಗ್ರಾಮಸ್ಥರು ಸಹಕರಿಸಬೇಕು :
ಇಂದಿಲ್ಲಿ 9.95 ಕೋಟಿ ರೂ. ವೆಚ್ಚದ ಕೊರಡಂಪಳ್ಳಿ ಗ್ರಾಮದಿಂದ ಬುರಗಪಳ್ಳಿ (ವಾಯಾ-ಈರಗಪಳ್ಳಿ) ಗ್ರಾಮದ ವರೆಗೆ 7.50 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ 10 ವರ್ಷಗಳ ಕಾಲ ರಸ್ತೆ ದುರಸ್ತಿಗೆ ಬಾರದಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಕಾಮಗಾರಿ ಪೂರ್ಣಕ್ಕೆ ಗ್ರಾಮಸ್ಥರು, ರಸ್ತೆ ಬದಿಯಲ್ಲಿರುವ ಹೊಲದ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಹೊಲಿಗೆ ಯಂತ್ರ ವಿತರಣೆ:
ಇದೇ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2022-23ನೇ ಸಾಲಿಗೆ ಆಯ್ಕೆಗೊಂಡ ನಾಲ್ಕು ಜನ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ವಿತರಿಸಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಇದ್ದರು.
5 ಲಕ್ಷ ರೂ. ಚೆಕ್ ವಿತರಣೆ:
ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಈರಗಪಳ್ಳಿ ಗ್ರಾಮದ ರೈತ ಚಂದ್ರಪ್ಪ ಪೂಜಾರಿ ಅವರ ಪತ್ನಿ ಸಾಬಮ್ಮ ಅವರಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರದ ಚೆಕ್ಕನ್ನು ಸಚಿವರು ವಿತರಿಸಿದರು. ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಇದ್ದರು.
ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕರ್ಚಖೇಡ್ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬುಮಿಯಾ ಮೋಯಿನ್ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮದ ಹಿರಿಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.