ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಅಭಿವೃದ್ದಿಯಾಗಬೇಕಿದೆ : ಮಲ್ಲಿಕಾರ್ಜುನ ಖರ್ಗೆ

Update: 2025-03-08 17:26 IST
Photo of Program
  • whatsapp icon

ಕಲಬುರಗಿ : ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದ್ದು, ಈ ಕ್ಷೇತ್ರಗಳ ಅಭಿವೃದ್ದಿ ಅದರಲ್ಲೂ ಶೈಕ್ಷಣಿಕ ಅಭಿವೃದ್ದಿಯಾಗಬೇಕು. ಇದಕ್ಕೆ ಈ ಭಾಗದ ಸಂಸದರು ಹಾಗೂ ಶಾಸಕರು ವಿಶೇಷ ಒತ್ತು ನೀಡಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಡಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಲ್ಯಾಣ ಪಥ ಯೋಜನೆಗೆ ಅಡಿಗಲ್ಲು ನೆರವೇರಿಸಿ‌ ಅವರು ಮಾತನಾಡಿದರು.

ಕಕ ಭಾಗದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಟ್ಟು 1,166 ಕಿಮಿ ಉದ್ದದ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆರ್ಟಿಕಲ್ 371 J ಜಾರಿಯಾಗಿರುವುದಕ್ಕೆ ಉತ್ತರ ಭಾರತದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋನಿಯಾಗಾಂಧಿ ಅವರ ಇಚ್ಚೆಯಂತೆ ಈ ಭಾಗಕ್ಕೆ ಈ ಸವಲತ್ತು ಸಿಗುವಂತಾಗಿದೆ. ದೇಶದ ಯಾವ ಕಡೆಗೆ ಇಂತಹ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಕೆಲ ರಾಜ್ಯಗಳಿಗೆ‌ ಕೊಟ್ಟಿದ್ದಾರೆ. ಆದರೆ ರಾಜ್ಯದ ಭಾಗಕ್ಕೆ ಕೊಟ್ಟಿಲ್ಲ ಎಂದರು.

" ಕಕ ಭಾಗಕ್ಕೆ ವಾರ್ಷಿಕ 5,000 ಕೋಟಿ ರೂ ಅನುದಾನ ನೀಡಲಾಗುತ್ತಿದೆ ಎನ್ನುವ ಡಿಸಿಎಂ ಮಾತಿಗೆ ಲಘುಹಾಸ್ಯದ ಧಾಟಿಯಲ್ಲೇ ಉತ್ತರಿಸಿದ ಖರ್ಗೆ ಅವರು ಸ್ವಾಮಿ, ಐದು ಸಾವಿರ ಕೋಟಿ ಅಲ್ಲ, ಲಕ್ಷ ಕೋಟಿ ಕೊಟ್ಟರೂ ನಿಮ್ಮಷ್ಟು ನಾವು ಅಭಿವೃದ್ದಿ ಆಗುವುದಿಲ್ಲ. ನಮ್ಮ ಭಾಗ ನಿಮ್ಮಷ್ಟೆ ಅಭಿವೃದ್ಧಿಯಾಗಬೇಕೆಂದರೆ ನಿಮ್ಮಷ್ಟೇ ಸಮಾನವಾದ ಅನುದಾನ ನಮಗೂ ಕೊಡಬೇಕು. ಸರ್ಕಾರದ ಯಾವುದೇ ಯೋಜನೆ ಮೈಸೂರಿನಿಂದ ಪ್ರಾರಂಭವಾಗಿ ದಾವಣಗೆರೆಗೆ ಬಂದು ನಿಂತುಬಿಡುತ್ತದೆ, ಬಳ್ಳಾರಿಯವರೆಗೂ ತಲುಪುವುದಿಲ್ಲ" ಎಂದರು.

ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಯನ್ನು ಜಾರಿಗೊಳಿಸಲು ಶ್ರಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶ್ಲಾಘಿಸಿದ ಖರ್ಗೆ ಅವರು, ಈ ಯೋಜನೆಗಳ ಅಡಿಯಲ್ಲಿ ರಾಜ್ಯದ ರಸ್ತೆಗಳು ಅಭಿವೃದ್ದಿ ಹೊಂದಲಿವೆ ಎಂದು ಆಶಿಸಿದರು.

ಸತತ 16 ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ನವರನ್ನು ಕೊಂಡಾಡಿದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅತ್ಯಂತ ಉತ್ತಮ ಬಜೆಟ್ ಎಂದರು. ಡಿಕೆ ಶಿವಕುಮಾರ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವಿಬ್ಬರು ಜೊತೆಯಾಗಿ ಅಭಿವೃದ್ದಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ನಾನು ಶಾಸಕನಾಗಿ, ಸಚಿವನಾಗಿ, ಲೋಕಸಭೆ ಸದಸ್ಯನಾಗಿ, ರಾಜ್ಯಸಭಾ ಸದಸ್ಯನಾಗಿ ಈಗ ಎಐಸಿಸಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವುದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ ಎಂದು ಸ್ಮರಿಸಿದ ಖರ್ಗೆ, ನೀವು ( ಮತದಾರರು) ಒಮ್ಮೊಮ್ಮೆ ದಾರಿ ತಪ್ಪುತ್ತೀರಿ ಅದು ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕಿದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸ್ಥಾಪನೆಗೆ ಒತ್ತಿ ಹೇಳಿದ ಖರ್ಗೆ, ಬೀದರ್, ಕಲಬುರಗಿ ಹಾಗು ಬಳ್ಳಾರಿಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ಕೊಡಬೇಕು. ಈ ಮಾತು ಶಿವಕುಮಾರ್ ಅವರಿಗೆ ಯಾಕೆ ಹೇಳುತ್ತಿದ್ದೇನೆ ಎಂದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರು ಜೊತೆಯಾಗಿ ಹೋದರೆ ಮಾತ್ರ ನಮ್ಮ ಕೆಲಸ ಆಗುತ್ತದೆ. ಹಳೆ ಮೈಸೂರು ಹಾಗೂ ಮಲೆನಾಡಿನ ಜನರು ಅರ್ಜಿ ಕೊಟ್ಟು ಯಾಕೆ ಕೆಲಸ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಆದರೆ, ನಮ್ಮ ಭಾಗದ ಜನರು ಯಾಕೆ ಕೆಲಸ ಆಗಿಲ್ಲ ಎಂದು ಕೈಮುಗಿಯುತ್ತಾರೆ ಅಷ್ಟೊಂದು ಮುಗ್ಧರು. ಅಲ್ಲದೆ ನಿಮಗೆ ಶಕ್ತಿ ತುಂಬಿದ್ದೇ ನಮ್ಮ ಭಾಗದ ಜನರು. ನಿಮಗೆ ಶಕ್ತಿ ತುಂಬಿದವರಿಗೆ ನೀವು ಕೆಲಸ ಮಾಡಿ. ಎಲ್ಲ ಕೆಲಸಗಳನ್ನು ಮೈಸೂರಿನಿಂದ ಪ್ರಾರಂಭ ಮಾಡಬೇಡಿ. ಕಲ್ಯಾಣದಿಂದ ಪ್ರಾರಂಭಿಸಿ ನಿಮ್ಮ ಕಲ್ಯಾಣವಾಗುತ್ತದೆ. ಕಲ್ಯಾಣದಿಂದ ಕೆಲಸ ಪ್ರಾರಂಭಿಸಿದರೆ ಅದು ಕೊಳ್ಳೆಗಾಲದವರೆಗೆ ಹೋಗುತ್ತದೆ ಆದರೆ ಮೈಸೂರಿನಿಂದ ಪ್ರಾರಂಭಿಸಿದ ಕೆಲಸ ಬೆಂಗಳೂರಿಗೆ ಬಂದು ನಿಲ್ಲುತ್ತಿದೆ ಎಂದರು.

ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳಿಗೆ ಅದರಲ್ಲೂ ನರೇಗಾ ಯೋಜನೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜನ ಖರ್ಗೆ, ಮಹಾತ್ಮಾ ಗಾಂಧಿ ಹೆಸರಲ್ಲಿ ಪ್ರಾರಂಭಿಸಿದ ಯೋಜನೆಗೂ ಅನುದಾನ ನೀಡುತ್ತಿಲ್ಲ ಎಂದರು.

ಇದಕ್ಕೂ ಮುನ್ನ, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಶುಭಾಶಯ ತಿಳಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕಾಂಗ್ರೆಸ್ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿಯೇ ಶಕ್ತಿ, ಗೃಹಲಕ್ಷ್ಮೀ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

" ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371 J ಜಾರಿಗೆ ತರುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿದ್ದಾರೆ‌. ಅದರ ಪರಿಣಾಮ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಶಿಕ್ಷಣ ಹಾಗೂ ಉದ್ಯೋಗ ದಲ್ಲಿ ಮೀಸಲಾತಿ ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಕೆಲಸ ಪಡೆದುಕೊಳ್ಳುತ್ತಿದ್ದಾರೆ" ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಮಡಿಲಿಗೆ ಹಾಕಿದ್ದೀರಿ ನಿಮಗೆ ಧನ್ಯವಾದಗಳು. ನಿಮ್ಮ ಋಣವನ್ನು ನಾವು ತೀರಿಸುತ್ತೇವೆ ಎಂದ ಡಿಸಿಎಂ, ವಿಧಾನಸೌಧ ನೋಡಿದ ತಕ್ಷಣ ಕೆಂಗಲ್ ಹನುಮಂತಯ್ಯನವರನ್ನು ನೆನಪಿಸಿಕೊಂಡಂತೆ ಕಲಬುರಗಿ ಯ ಇ ಎಸ್ ಐ ಆಸ್ಪತ್ರೆ ನೋಡಿದ ಕೂಡಲೇ ಖರ್ಗೆ ಅವರು ನೆನಪಾಗುತ್ತಾರೆ ಎಂದರು.

ಕಲ್ಯಾಣದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಪ್ರಾರಂಭವಾಗಲಿದೆ. ದೇವರು ವರ ಅಥವಾ ಶಾಪ ಕೊಡಲ್ಲ ಅವಕಾಶ ನೀಡುತ್ತಾನೆ. ಕಾಂಗ್ರೆಸ್ ಪಕ್ಷಕ್ಕೆ ಭಗವಂತ ನೀಡಿದ ಅವಕಾಶವನ್ನು ಬಳಸಿಕೊಂಡು ಸರ್ಕಾರ ಎಲ್ಲ ವರ್ಗದ ಜನ ಹಿತ ಕಾಪಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಬದ್ದತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡ ಶಿವಕುಮಾರ, ಅವರನ್ನು ಸ್ಮರಿಸಿಕೊಳ್ಳಬೇಕಿದೆ. ಖರ್ಗೆ ಸಾಹೇಬರ ಕೊಡುಗೆಯನ್ನು ಕೂಡಾ ನಾವು ಸ್ಮರಿಸಿಕೊಳ್ಳಬೇಕಿದೆ. ಜೇವರ್ಗಿ ಕ್ಷೇತ್ರದ ಮಲ್ಲಾಬಾದ್ ಏತನೀರಾವರಿ ಯೋಜನೆಯ ಜಾರಿಗಾಗಿ ಶಾಸಕ ಅಜಯ್ ಸಿಂಗ್ ಹಾಗೂ ಎಂಪಿ ರಾಧಾಕೃಷ್ಣ ದೊಡ್ಡಮನಿ ಒತ್ತಾಯಿಸಿದ್ದರು. ಆದಷ್ಟು ಬೇಗ ಯೋಜನೆಗೆ ನಾನೇ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ದಿಪರ ಚಿಂತನೆಯನ್ನು ಕೊಂಡಾಡಿದ ಡಿಸಿಎಂ, ಕಲ್ಯಾಣಪಥ ಹಾಗೂ ಪ್ರಗತಿ ಪಥ ಯೋಜನೆಯ ಮೂಲಕ ರಸ್ತೆಗಳ ಅಭಿವೃದ್ದಿಗೆ ನಿಂತಿರುವುದು ಅಭಿವೃದ್ದಿಯ ವಿಷಯದಲ್ಲಿ ಅವರ ಬದ್ಧತೆ ತೋರಿಸುತ್ತಿದೆ ಎಂದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ್ ಪಾಟೀಲ್, ರಹೀಮ್ ಖಾನ್, ಎಂಪಿ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ ವೈ ಪಾಟೀಲ, ಬಿ.ಆರ್.ಪಾಟೀಲ್‌, ಅಜಯ್ ಸಿಂಗ್, ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು, ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಶರಣು ಸಲಗಾರ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಎ.ವಸಂತ ಕುಮಾರ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News