ಈಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-03-30 17:40 GMT

ಕಲಬುರಗಿ : ಈಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ. ಹಾಗಾಗಿ, ವಿರೋಧಪಕ್ಷಗಳಿಗೆ ಆಗಾಗ ಲವ್ ಲೆಟರ್ ಕಳುಹಿಸುತ್ತಿರುತ್ತದೆ. ಇದು ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಐಟಿ ಇಲಾಖೆ 14 ಲಕ್ಷ ದೇಣಿಗೆಯ ಅಸೆಸ್ಮೆಂಟ್ ಸಿಗುತ್ತಿಲ್ಲ ಎಂದು 1823.08 ಕೋಟಿ ರೂ. ಗಳ ತೆರಿಗೆ ಡಿಮ್ಯಾಂಡ್ ನೋಟಿಸ್ ಕೊಟ್ಟಿದ್ದಾರೆ. ಯಾವುದೇ ಅಸೆಸ್ಮೆಂಟ್ ಆರ್ಡರ್ ಇಲ್ಲದೆ ಯಾವ ಆಧಾರದ ಮೇಲೆ ನೋಟಿಸ್ ನೀಡಿದ್ದಾರೆ ಗೊತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ಆರ್ ಟಿ ಆ್ಯಕ್ಟ್ ಸೆಕ್ಷನ್ 13 ರ ಅಡಿಯಲ್ಲಿ ರಿಯಾಯಿತಿ ಇರುತ್ತದೆ. ಯಾರಾದರೂ ವ್ಯಕ್ತಿ ದಾನದ ರೂಪದಲ್ಲಿ ಹಣ ಕೊಟ್ಟರೆ ಫಾರಂ 24 ರ ಅಡಿಯಲ್ಲಿ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು. ನಂತರ ಚುನಾವಣಾ ಆಯೋಗ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ. ಹಾಗೆ ಅಧಿಕೃತವಾಗಿ ಪ್ರಕಟಿಸಿದ ಮಾಹಿತಿಯ ಬಗ್ಗೆ ನೋಟಿಸ್ ಜಾರಿ ಮಾಡಿರುವುದು ಅಚ್ಚರಿಯಾಗಿದೆ ಎಂದರು.

ಯಡಿಯೂರಪ್ಪ ಸಿಎಂ ಅಗಿದ್ದಾಗ ಡೈರಿ‌ ಸಿಕ್ಕಿತ್ತಲ್ಲವೇ? ಹಾಗೂ ಈಶ್ವರಪ್ಪ ಮನೆಯಲ್ಲಿ ಹಣ ಎಣಿಸುವ ಮಷಿನ್ ಸಿಕ್ಕಿತ್ತಲ್ಲ ಅದೇನಾಯ್ತು. ತನಿಖೆಗಳು ಯಾಕೆ ನಡೆಸಲಿಲ್ಲ. ಬಿಜೆಪಿಯೂ ಕೂಡಾ ದೇಣಿಗೆ ಸ್ವೀಕರಿಸಿದೆ. ಆ ಬಗ್ಗೆ ಯಾಕೆ ನೋಟಿಸ್ ನೀಡಲಿಲ್ಲ ಎಂದು ಆಕ್ಷೇಪಿಸಿದರು.

ಕೇಜ್ರೀವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕರನ್ನು ಬಂಧನ ಮಾಡಿರುವುದಕ್ಕೆ ಜರ್ಮನ್, ಅಮೇರಿಕಾ ಹಾಗೂ ಯುನೈಟೆಡ್ ನೇಷನ್ ನವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು‌ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭವಾಗಿದೆ. ಆಂತರಿಕ‌ ಸರ್ವೆ ಪ್ರಕಾರ 200 ಸೀಟು‌ ಬರಲ್ಲ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ‌ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News