ಕಲಬುರಗಿ | ಜಿಲ್ಲಾ ಕಸಾಪದಿಂದ ಅದ್ಧೂರಿಯಾಗಿ ನಡೆದ ಜನಪದ ಸಾಹಿತ್ಯ ಸಮ್ಮೇಳನ

Update: 2024-11-10 15:04 GMT

ಕಲಬುರಗಿ : ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಸಾಹಿತ್ಯದಿಂದ ಸಂಸ್ಕಾರಯುತ ಜೀವನ ಕಟ್ಟಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಗರ ಅಪರಾಧ ವಿಭಾಗದ ಆರಕ್ಷಕ ನಿರೀಕ್ಷಕರೂ ಆದ ಜನಪದ ವಿದ್ವಾಂಸ ಜ್ಯೋತಿರ್ಲಿಂಗ ಹೊನ್ನಕಟ್ಟಿ ಹೇಳಿದರು.

ಸಂಗೀತ ಕಲಾವಿದ ಭಗವಂತಪ್ಪ ಹೂಗಾರ ದೇಸಾಯಿ ಕಲ್ಲೂರ ವೇದಿಕೆಯಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಹಮ್ಮಿಕೊಂಡಿರುವ 'ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲ ಆಧುನಿಕ ಭರಾಟೆ ಹಾಗೂ ಒತ್ತಡದ ಬದುಕಿನಲ್ಲಿ ಬದುಕು ನಡೆಸುತ್ತಿದ್ದೇವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಎದುರಾದ ಪರಿಸ್ಥಿತಿಯ ನಡುವೆ ಸಂಸ್ಕಾರ, ಸಂಬoಧಗಳನ್ನು ಗಟ್ಟಿಗೊಳಿಸಲು ಜನಪದ ಸಾಹಿತ್ಯ ಹಾಗೂ ಕಲೆಗಳು ತುಂಬ ಅವಶ್ಯವಾಗಿದೆ ಎಂದರು.

ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಶೋಭಾದೇವಿ ಚೆಕ್ಕಿ, ಜನಪದ ಕಲೆಗಳು ಇಂದು ನಮ್ಮ ಜೀವನ ಕಟ್ಟಿಕೊಟ್ಟು ಜೀವಂತಿಕೆಯಿಂದ ಇಟ್ಟಿದೆ. ನಾವು ಎಷ್ಟೇ ಸಾಧನೆ ಮಾಡಿದರೂ ಅದಕ್ಕೆ ಪೂರಕವಾದ ಸಾಹಿತ್ಯವೇ ಜನಪದವಾಗಿದೆ. ಇಂದು ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ನಶಿಸಿ ಹೋಗುತ್ತಿವೆ. ಇದಕ್ಕೆ ಬದಲಾದ ಜೀವನ ಶೈಲಿಯೂ ಕಾರಣವಾಗಿದೆ. ಕಣ್ಮರೆಯಾಗುತ್ತಿರುವ ಜನಪದ ಕಲೆ ಮತ್ತು ಸಾಹಿತ್ಯ ಉಳಿಸಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಜಾನಪದ ಮರೆಯಾಗುತ್ತಿದ್ದು, ಇದನ್ನು ಉಳಿಸಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ರೀತಿಯ ಪ್ರಯತ್ನಗಳು ನಡೆಯಬೇಕಿದೆ. ಜಾನಪದದ ನಮ್ಮ ಭಾರತೀಯ ಸಂಸ್ಕೃತಿಯ ಅಡಿಗಲ್ಲಾಗಿದೆ. ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕಾದರೆ ಜಾನಪದ ಉಳಿಯಬೇಕು. ಹಾಗಾಗಿ ನಮ್ಮ ಬದುಕಿನ ಜೀವಾಳವಾದ ಜಾನಪದ ಸಂಪತ್ತನ್ನು ಉಳಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ನಿರಂತರ ಕೈಂಕರ್ಯ ಸಲ್ಲಿಸುತ್ತಿದೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ಗೌರವಾಧ್ಯಕ್ಷ ಕಾಶಿನಾಥ ಪಲ್ಲೇರಿ, ಕಾರ್ಯಾಧ್ಯಕ್ಷ ಬಿ.ಎನ್. ಪುಣ್ಯಶೆಟ್ಟಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಗಣೇಶ ಚಿನ್ನಾಕಾರ, ಶಿಲ್ಪಾ ಜೋಶಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಬಾಬುರಾವ ಪಾಟೀಲ, ಶರಣಬಸಪ್ಪ ನರೂಣಿ, ನಾಗಪ್ಪ ಸಜ್ಜನ್, ಎಸ್.ಕೆ. ಬಿರಾದಾರ, ಸುಮಾ ಚಿಮ್ಮನಚೋಡಕರ್, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಪ್ರಭು ಫುಲಾರಿ, ಪ್ರಭುಲಿಂಗ ಮೂಲಗೆ, ಪ್ರಿಯಾಂಕಾ ಪಾಟೀಲ ಇತರರು ಉಪಸ್ಥಿತರಿದ್ದರು.

ಹಿರಿಯ ಲೇಖಕಿ ಡಾ. ವಿಶಾಲಾಕ್ಷಿ ಕರೆಡ್ಡಿ ಸಮಾರೋಪ ನುಡಿಗಳನ್ನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ. ಸಂದೀಪ, ಆಕಾಶವಾಣಿ ಕೇಂದ್ರದ ಉದ್ಘೋಷಕಿ ಶಾರದಾ ಜಂಬಲದಿನ್ನಿ ವೇದಿಕೆ ಮೇಲಿದ್ದರು.

ತಮ್ಮ ಸಾಹಿತ್ಯದ ಮೂಲಕ ಜನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವ ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಹನುಮಂತರಾವ ದೊಡ್ಡಮನಿ, ಬಾಬುರಾವ ಜಮಾದಾರ, ಡಾ.ಸುರೇಂದ್ರಕುಮಾರ ಕೆರಮಗಿ, ಡಾ.ಸಂಗೀತಾ ಹಿರೇಮಠ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News