ಕಲಬುರಗಿ | ತನ್ನಾಸೆಯಂತೆ ಅಂತಿಮ ದಿನಗಳನ್ನು ಮನೆಯಲ್ಲಿ ಕಳೆದ 93 ವಯಸ್ಸಿನ ವೃದ್ಧೆ ಖೈದಿ ನಿಧನ
ಕಲಬುರಗಿ : ನವೆಂಬರ್ ಕೊನೆಯ ವಾರದಲ್ಲಿ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರ ಕಾಳಜಿಯಿಂದ ಪೆರೋಲ್ ಪಡೆದಿದ್ದ 93 ವರ್ಷದ ವೃದ್ಧೆ ನಾಗಮ್ಮ ಮನೆಗೆ ತೆರಳಿದ್ದ ಕೆಲವೇ ದಿನಗಳ ಬಳಿಕ ನಿಧನರಾಗಿದ್ದಾರೆ.
ನ.16ರಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭ ವೃದ್ಧೆ ಖೈದಿ ನಾಗಮ್ಮ ಅವರು ತಮ್ಮ ಸ್ವ ಕಾರ್ಯಗಳನ್ನು ಮಾಡಿಕೊಳ್ಳಲಾರದ ಸ್ಥಿತಿಯಲ್ಲಿ, ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದ ಸ್ಥಿತಿಯನ್ನು ಕಂಡು ಉಪಲೋಕಾಯುಕ್ತರು ಮರುಗಿದ್ದರು. ಕಾನೂನು ಸೇವಾ ಪ್ರಾಧಿಕಾರಕ್ಕೆ ಮಹಿಳೆಯನ್ನು ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಉಪಲೋಕಾಯುಕ್ತರು ಸಲಹೆ ನೀಡಿದ್ದರು.
ಉಪಲೋಕಾಯುಕ್ತರ ಸಲಹೆಯಂತೆ ಕಾನೂನು ಸೇವಾ ಪ್ರಾಧಿಕಾರದಿಂದ ವೃದ್ಧೆ ಖೈದಿಯನ್ನು ಬಿಡುಗಡೆಗೊಳಿಸಲು ಉಚ್ಛ ನ್ಯಾಯಾಲಯದಲ್ಲಿ ರಿವಿವ್ಯೂ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರ ಮೇರೆಗೆ ನ್ಯಾಯಾಲಯದ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗಿದ್ದರಿಂದ ಕಾರಗೃಹ ಅಧಿಕಾರಿಗಳು ವೃದ್ದೆ ಖೈದಿಯನ್ನು ತಾತ್ಕಲಿಕವಾಗಿ ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರು.
ತನ್ನಾಸೆಯಂತೆ ತನ್ನ ಕೊನೆಯ ದಿನಗಳನ್ನು ಮನೆಯಲ್ಲೇ ಕಳೆಯಬೇಕೆಂದಿದ್ದ ವೃದ್ಧೆ ಕೈದಿಯ ಬಿಡುಗಡೆಗೆ ಉಪಲೋಕಾಯುಕ್ತರು ಈಚೆಗೆ ಹರ್ಷ ವ್ಯಕ್ತಪಡಿಸಿದ್ದರು. ಪೆರೋಲ್ ಮೇಲೆ ಮನೆಗೆ ತೆರಳಿದ್ದ ವೃದ್ಧೆ ತನ್ನಾಸೆಯಂತೆ ತನ್ನ ಕೊನೆಯ ದಿನಗಳನ್ನು ಕಳೆದು ಶುಕ್ರವಾರ ಮೃತರಾಗಿದ್ದಾರೆ.
ಸೊಸೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಾಗಮ್ಮ ಆರೋಪಿಯಾಗಿದ್ದರು. ಸೊಸೆ ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ 26 ವರ್ಷದಿಂದ ಐಪಿಸಿ ಸೆಕ್ಷನ್ 498 ಅಡಿ ನಾಗಮ್ಮ ಹಾಗೂ ಕುಟುಂಬಸ್ಥರ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ಪ್ರಕರಣದಲ್ಲಿ ನಾಗಮ್ಮ ಜೈಲುಪಾಲಾಗಿದ್ದರು.