ಕಲಬುರಗಿ | ಪಶುಪಾಲನಾ ಇಲಾಖೆಯ ಜಿಲ್ಲಾ ಕಚೇರಿಗೆ ಸಿಇಓ ದಿಢೀರ್ ಭೇಟಿ: ಪರಿಶೀಲನೆ

ಕಲಬುರಗಿ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಗುರುವಾರ ಕಲಬುರಗಿ ನಗರದ ಪಶುಪಾಲನಾ ಇಲಾಖೆಯ ಜಿಲ್ಲಾ ಕಚೇರಿಗೆ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಎಲ್ಲಾ ವಿಭಾಗಗಳಲ್ಲಿನ ಎಕ್ಸ್ ರೇ ಕೋಣೆ, ಶಸ್ತ್ರಚಿಕಿತ್ಸೆ ಕೋಣೆ, ಚಿಕಿತ್ಸಾ ಕೋಣೆ, ಪ್ರಯೋಗಾಲಯ ಹಾಗೂ ಇತರೆ ವಿಭಾಗಗಳನ್ನು ಪರಿವೀಕ್ಷಣೆ ಮಾಡಿ ಸೂಪರ್ ಸ್ಪೆಶಾಲಿಟಿ ಪಾಲಿಕ್ಲಿನಿಕ್ ನಲ್ಲಿ ಜಾನುವಾರುಗಳಿಗೆ ನೀಡುವ ಚಿಕಿತ್ಸೆ ಹಾಗೂ ಇತರ ಸೌಲಭ್ಯ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಅವರು ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ತಮ್ಮ ಜಾನುವಾರುಗಳೊಂದಿಗೆ ಬಂದ ರೈತರೊಂದಿಗೆ ಮಾತನಾಡಿದರು. ರೈತರು ತಂದಿರುವ ಜಾನುವಾರುಗಳನ್ನು ಕೂಡಲೇ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸ್ಥಳದಲ್ಲಿದ್ದ ಪಶು ಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಭೇಟಿ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.