ಕಲಬುರಗಿ | ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು, ಕಬ್ಬು ಬೆಳೆಗಾರರೊಂದಿಗೆ ಡಿ.ಸಿ ಸಭೆ

Update: 2024-11-08 16:16 GMT

ಕಲಬುರಗಿ : ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ಇದೀಗ ಕಟಾವಿಗೆ ಬಂದಿದ್ದು, ರೈತರಿಂದ ಕಬ್ಬು ಖರೀದಿ ಮುನ್ನ ಪ್ರತಿ ಟನ್ಗೆ ನೀಡಲಾಗುವ ದರ, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ನ.11 ರಿಂದ 30 ರೊಳಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಗಡುವು ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಮುಖಂಡರುಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಎಲ್ಲಾ ರೈತರಿಂದ ಸಾಧ್ಯವಾಗದಿದ್ದರು ಕನಿಷ್ಠ ಪಕ್ಷ ಆಸಕ್ತ ರೈತರಿಂದ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡೆ ರೈತರಿಂದ ಕಬ್ಬು ಖರೀದಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ 4 ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಕೂಡಲೆ ಪಾವತಿಸಬೇಕು. ಸೋಮವಾರದೊಳಗೆ ಬಾಕಿ ಪಾವತಿ ಸಂಬಂಧ ಲಿಖಿತ ಹೇಳಿಕೆ ಸಲ್ಲಿಸಬೇಕು. ಕಟಾವಿಗೆ ಟೋಕನ್ ನೀಡಿದ ಕೂಡಲೆ ಒಂದೆರಡು ದಿನದಲ್ಲಿ ಕಟಾವು ಮಾಡಿಕೊಂಡು ಹೋಗಬೇಕು. ಕಟಾವಿನ ಸಂದರ್ಭದಲ್ಲಿ ಸಣ್ಣ-ದೊಡ್ಡ ರೈತ ಎಂದು ತಾರತಮ್ಯ ಮಾಡದೆ ಕಟಾವು ಮಾಡಬೇಕು. ಕಬ್ಬು ಕಾರ್ಖಾನೆಗೆ ತಂದು ತೂಕ ಮಾಡಿದ ನಂತರವೇ ಕಾರ್ಖಾನೆಯೊಳಗೆ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ತೂಕದಲ್ಲಿ ರೈತರಿಗೆ ಮೋಸ ಮಾಡಬಾರದೆಂದು ತಿಳಿಸಿದ ಜಿಲ್ಲಾಧಿಕಾರಿಗಳು ಕಬ್ಬಿನ ಹಣ 15 ದಿನದಲ್ಲಿಯೇ ರೈತರಿಗೆ ಪಾವತಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಇರುವ 4 ಕಾರ್ಖಾನೆಗಳ ಜೊತೆಗೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್, ಹಂದನೂರ ಮತು ಕಲಬುರಗಿ ತಾಲೂಕಿನ ಹೊಳಕುಂದಾ, ಮಹಾಗಾಂವ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಈಗಾಗಲೇ ಜಿಲ್ಲೆಯಿಂದ ಕಬ್ಬು ಆಯುಕ್ತರಿಗೆ ಕಳುಹಿಸಲಾಗಿದೆ. ಮುಂದಿನ ದಿನದಲ್ಲಿ ಈ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾದಲ್ಲಿ ವ್ಯಾಪರ ಸ್ಪರ್ಧೆ ಏರ್ಪಟ್ಟು ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಡಿ.ಸಿ. ಅವರು ತಿಳಿಸಿದರು.

ಶೆಲ್ಟರ್,ಕ್ಯಾಂಟೀನ್ ಸ್ಥಾಪಿಸಿ :

ಸಭೆಯಲ್ಲಿ ರೈತ ಮುಖಂಡ ಮೌಲಾಮುಲ್ಲಾ ಮಾತನಾಡಿ, ಕೆಲವೊಮ್ಮೆ ರೈತ ತನ್ನ ಮಡದಿ, ಮಕ್ಕಳೊಂದಿಗೆ ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಹೋಗುವಾಗ ಅಲ್ಲಿಯೆ ರಾತ್ರಿ ಕಳೆಯಬೇಕಾಗುತ್ತದೆ. ಹೀಗಾಗಿ ರಾತ್ರಿ ಕಳೆಯಲು ಸೂಕ್ತ ಶೆಡ್, ಕಾರ್ಖಾನೆ ಸಮೀಪ ಲಘು ಉಪಹಾರಕ್ಕಾಗಿ ಕ್ಯಾಂಟಿನ್ ತೆರೆಯಬೇಕೆಂದು ಮನವಿ ಮಾಡಿದರು. ಇದಕ್ಕೆ ಡಿ.ಸಿ. ಸಮ್ಮತ್ತಿಸಿ ಕೂಡಲೇ ಕಾರ್ಖಾನೆಯವರು ಶೆಲ್ಟರ್, ಕ್ಯಾಂಟೀನ್ ಸ್ಥಾಪಿಸುವಂತೆ ಸೂಚಿಸಿದರು.

ಕಾನೂನು ಕ್ರಮದ ಎಚ್ಚರಿಕೆ :

ಸಭೆಯಲ್ಲಿ ಪ್ರಸ್ತಾಪವಾದ ಕಬ್ಬು ಕಟಾವಿನಲ್ಲಿ ತಾರತಮ್ಯ, ಪ್ರತಿ ಕಂಪನಿಯ ಪ್ರತ್ಯೇಕ ದರ, ತೂಕದಲ್ಲಿ ಮೋಸ, ತಡವಾಗಿ ಪಾವತಿ, ಹಳೇ ಪಾವತಿ ಬಾಕಿ ಕುರಿತು ಕಾರ್ಖಾನೆಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು, ಅನ್ನ ನೀಡುವ ರೈತನ ವಿಷಯದಲ್ಲಿ ಕಾರ್ಖಾನೆಗಳು ಉದಾರ ಭಾವನೆ ಹೊಂದಬೇಕು ಎಂದರು. ಹಳೇ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ ಅವರು, ಸೋಮವಾರ ಆಯಾ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು, ಮಾಲೀಕರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಆಯೋಜಿಸಿ ಎಂದು ಆಹಾರ ಇಲಾಖೆ ಉಪನಿರ್ದೇಶಕ ಭೀಮರಾವ್ ಅವರಿಗೆ ನಿರ್ದೇಶನ ನೀಡಿದರು.

ರೈತರ ಬೇಡಿಕೆಗಳೇನು? :

ಬಾಕಿ ಇರುವ ಹಣ ಕೂಡಲೆ ಪಾವತಿಸಬೇಕು, ಕಬ್ಬು ಕಟಾವಿನಲ್ಲಿ ತಾರತಮ್ಯ ಮಾಡಬಾರದು, ನಾಲ್ಕು ಕಂಪನಿಗಳು ಒಂದೇ ದರ ನಿಗದಿ ಮಾಡಬೇಕು, ಕಂಪನಿಯಿಂದ ಕಟಾವು ಮತ್ತು ರೈತರು ಸ್ವಯಂ ಕಟಾವು ಮಾಡಿದಲ್ಲಿ ಪ್ರತ್ಯೇಕ ದರ ನೀಡಬೇಕು, ಟೋಲ್ ಗೇಟ್ ಪಾವತಿಯಿಂದ ವಿನಾಯಿತಿ ನೀಡಬೇಕು, ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಗೇಟ್ ಬಳಿ ತೂಕ ಮಾಡಿಯೇ ಕಬ್ಬು ತೆಗೆದುಕೊಳ್ಳಬೇಕು. ಹಣ ಪಾವತಿ ಮತ್ತು ಬಾಕಿ ಕುರಿತು ಎಸ್.ಎಂ.ಎಸ್ ಕಳುಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಸಿ. ಮತ್ತು ಕಾರ್ಖಾನೆ ಪ್ರತಿನಿಧಿಗಳ ಮಂದೆ ರೈತ ಮುಖಂಡರು ಬೇಡಿಕೆ ಇಟ್ಟರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾವ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಆಳಂದ ತಹಶೀಲ್ದಾರ್ ಅಣ್ಣಾರಾವ ಪಾಟೀಲ, ಅಫಜಲಪೂರ ತಹಶೀಲ್ದಾರ್ ಸಂಜೀವಕುಮಾರ ದಾಸರ್, ಯಡ್ರಾಮಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ದಿ. ಉಗಾರ್ ಶುಗರ್ ವಕ್ಸ್ ಲಿ. ಕಾರ್ಖಾನೆಯ ಮಾಣಿಕರಾವ ಗಡಾದೆ ಸೇರಿದಂತೆ ಅನೇಕ ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News