ಉಪ ಲೋಕಾಯುಕ್ತರ ಪ್ರವಾಸ ಹಿನ್ನೆಲೆ ; ಬಾಕಿ ಕಡತ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ
ಕಲಬುರಗಿ : ರಾಜ್ಯದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನ.15 ರಿಂದ 17ರವರೆಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಾರ್ವಜನಿಕರ ಅಹವಾಲು ಆಲಿಸುವುದರಿಂದ ಕೂಡಲೇ ಇಲಾಖಾವಾರು ಬಾಕಿ ಕಡತವನ್ನು ನ.14ರೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನ.15 ರಂದು ಸಾರ್ವಜನಿಕರ ಅಹವಾಲು ಆಲಿಕೆ ಮತ್ತು ನ.16 ರಂದು ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸುತ್ತಾರೆ. ನ.17 ರಂದು ವಿವಿಧ ಸರಕಾರಿ ಕಚೇರಿ, ಅಂಗನವಾಡಿ, ಶಾಲೆ, ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ ಎಂದರು.
ಮೂರು ದಿನಗಳ ಉಪ ಲೋಕಾಯಕ್ತರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ 7 ಸಮಿತಿ ರಚಿಸಿದ್ದು, ಆಯಾ ಸಮಿತಿಗೆ ನೀಡಲಾದ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನ.15 ರಿಂದ 17ರವರೆಗೆ ನಡೆಯುವ ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಎಲ್ಲಾ ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ., ಪಿ.ಡಿ.ಓ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಜರಿರಬೇಕು ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕಂದಾಯ ಉಪ ಅಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಸೇರಿ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.