ಕಲಬುರಗಿ | ದೇಶಕ್ಕೆ ಡಾ.ಮನಮೋಹನ್ ಸಿಂಗ್ ಕೊಡುಗೆ ಅಪಾರ: ಪ್ರೊ.ಬಟ್ಟು ಸತ್ಯನಾರಾಯಣ
ಕಲಬುರಗಿ : ʼಭಾರತದ ಆರ್ಥಿಕತೆಗೆ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರವಾಗಿದೆʼ ಎಂದು ಕರ್ನಾಟಕ ಕೇಂದ್ರೀಯ ವಿವಿಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಆಳಂದ ತಾಲ್ಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಕುರಿತು ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು.
1991ರ ಆರ್ಥಿಕ ಬಿಕ್ಕಟ್ಟನ್ನು ಅವರು ಹಣಕಾಸು ಸಚಿವರಾಗಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆ ಸಮಯದಲ್ಲಿ ನಾವು ಕೇವಲ ಎರಡು ವಾರಗಳ ಆಮದುಗಳಿಗೆ ಸಾಕಾಗುವಷ್ಟು ಅತ್ಯಲ್ಪ ವಿದೇಶಿ ವಿನಿಮಯವನ್ನು ಹೊಂದಿದ್ದೇವು. ನಾವು ನಮ್ಮ ಚಿನ್ನವನ್ನು ಇಂಗ್ಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ಬ್ಯಾಂಕ್ಗಳಿಗೆ ಮಾರಾಟ ಮಾಡಿದ್ದೇವು. ಅಂತಹ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಅವರು ಭಾರತದ ಹಣಕಾಸು ಸಚಿವರಾಗಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಹಲವಾರು ಆರ್ಥಿಕ ಸುಧಾರಣೆಗಳನ್ನು ಪರಿಚಯಿಸಿದರು ಎಂದರು.
ಆರ್ಥಿಕ ಸುಧಾರಣೆಗಳಿಂದಾಗಿ ಇಂದು ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಈ ಸುಧಾರಣೆಗಳು ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡಿವೆ. ಇಂದು ನಾವು ದೇಶದ ಅತ್ಯುತ್ತಮ ಅರ್ಥಶಾಸ್ತ್ರಜ್ಞರೊಬ್ಬರನ್ನು ಕಳೆದುಕೊಂಡಿದ್ದೇವೆ. ಇದರಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರು ವಿತ್ತ ಸಚಿವರಾಗಿ ಮಾತ್ರವಲ್ಲದೆ ಎರಡು ಅವಧಿಗೆ ಪ್ರಧಾನ ಮಂತ್ರಿಯಾಗಿ ಮತ್ತು ವಿವಿಧ ಹುದ್ದೆಗಳಲ್ಲಿ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ.ಆರ್.ಆರ್.ಬಿರಾದಾರ್, ಪ್ರೊ.ಚನ್ನವೀರ ಆರ್.ಎಂ, ಪ್ರೊ.ಬಸವರಾಜ ಡೋಣೂರ, ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಜಿ.ಆರ್.ಅಂಗಡಿ, ಪ್ರೊ.ಸುನೀತಾ ಮಂಜನಬೈಲ್, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಗಣೇಶ ಪವಾರ, ಡಾ.ಪಿ.ಎಸ್.ಕಟ್ಟಿಮನಿ, ಪ್ರೊ.ಪಾಂಡುರoಗ ಪತ್ತಿ, ಪ್ರೊ. ಪ್ರೊ.ಹನುಮೆಗೌಡ, ಪ್ರೊ.ವೀರೇಶ ಕಸಬೇಗೌಡ, ಉಪಕುಲಸಚಿವರಾದ ಡಾ. ರವೀಂದ್ರ ಪಂಡಿತ್ ಮತ್ತು ಡಾ.ಅಜರುದ್ದೀನ್, ಎಲ್ಲಾ ಡೀನ್ರು, ಮುಖ್ಯಸ್ಥರು, ಅಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.