ಕಲಬುರಗಿ | ಕಲ್ಯಾಣ ಕರ್ನಾಟಕ ಭಾಗವು ಅಸಮತೋಲನ ಅಭಿವೃದ್ಧಿ; ಡಾ. ಅಜಯ್ ಸಿಂಗ್

Update: 2025-03-21 19:33 IST
ಕಲಬುರಗಿ | ಕಲ್ಯಾಣ ಕರ್ನಾಟಕ ಭಾಗವು ಅಸಮತೋಲನ ಅಭಿವೃದ್ಧಿ; ಡಾ. ಅಜಯ್ ಸಿಂಗ್

ಡಾ.ಅಜಯ್ ಧರ್ಮಸಿಂಗ್

  • whatsapp icon

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅನೇಕ ಕಾರಣಗಳಿಂದಾಗಿ ಪ್ರಾದೇಶಿಕ ಅಸಮತೋಲನ ರೋಗದಿಂದ ನರಳುತ್ತಿದೆ, ಈ ಪ್ರದೇಶ ಮದ್ದರಿಯಬೇಕಂದರೆ ಅಭಿವದ್ಧಿಗೆ ಹೆಚ್ಚಿನ ಹಣ ಈ ಭಾಗಕ್ಕೆ ಕೊಡಲೇಬೇಕು. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಕ್ಷೇತ್ರಲ್ಲಿ ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಕಲ್ಯಾಣ ನಾಡಲ್ಲಿ ಹೆಚ್ಚಿನ ಕೆಲಸಗಳಾಗಬೇಕಿದೆ ಎಂದು ಶಾಸಕ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.

ಕಳೆದೊಂದು ದಶಕದಲ್ಲಿ ಕೆಕೆಆರ್‌ಡಿಬಿಗೆ ಹೆಚ್ಚಿನ ಹಣ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಕಾಂಗ್ರೆಸ್ ಪಕ್ಷವೇ ಊರುಗೋಲಾಗಿ ನಿಂತಿದೆ ಎಂದು ಹೇಳಿದ್ದಾರೆ. ಬಜೆಟ್ ಮೇಲಿನ ಚರ್ಚೆಯ ಸದನ ಕಲಾಪದಲ್ಲಿ ಸುದೀರ್ಘವಾಗಿ ಮಾತನಾಡಿರುವ ಡಾ.ಅಜಯ್ ಸಿಂಗ್, ತಮ್ಮ ಮಾತಲ್ಲಿ ಕಲ್ಯಾಣ ನಾಡಿನ ಪ್ರಗತಿ ವಿಗತಿಯ ಅಂಕಿ ಸಂಖ್ಯೆ ಸಮೇತ ಚಿತ್ರಣ ನೀಡಿದ್ದಲ್ಲದೆ ನಮ್ಮ ಭಾಗಕ್ಕೇ ಹೆಚ್ಚಿಗೆ ಹಣ ಯಾಕೆ ಬೇಕು ಎಂಬುದಕ್ಕೆ ಸಕಾರಣಗಳಿವೆ ಎಂದು ಪ್ರಾದೇಶಿಕ ಅಸಮತೋಲನ ಈ ಭೂಭಾಗವನ್ನ ಹೇಗೆ ಕಾಡುತ್ತಿದೆ ಎಂಬುದನ್ನೂ ಸದನದಲ್ಲಿ ವಿವರಿಸುವ ಯತ್ನ ಮಾಡಿದರು.

ಇದಲ್ಲದೆ ಸದನದಲ್ಲಿ ತಮ್ಮ ಹೇಳಿಕೆಗೆ ಟಾಂಗ್ ನೀಡಲು ಯತ್ನಿಸಿದ ಬಿಜೆಪಿಯವರಿಗೆ ಸದನದಲ್ಲೇ ಮಾತಿನಲ್ಲಿ ಕಟ್ಟಿ ಹಾಕಿದ ಡಾ.ಅಜಯ್ ಸಿಂಗ್ ಕೇಂದ್ರ ಸರ್ಕಾರ ಯಾಕೆ ನಮ್ಮ ಹಿಂದುಳಿದ ಬಾಗಕ್ಕೆ ಅನುದಾನ ಕೊಡಬಾರದು? ನಾವು 2 ಬಾರಿ ಪತ್ರ ಬರೆದು ಮನವಿ ಮಾಡಿದ್ದೇವೆ. ಕೇಂದ್ರವೂ ನಮಗ 10 ಸಾವಿರ ಕೋಟಿ ರೂ. ಅನುದಾನ ನೀಡಲಿ. ಇದಕ್ಕಾಗಿ ಪಕ್ಷಭೇದ ಮರೆತು ನಾವೆಲ್ಲರೂ ಕೇಂದ್ರಕ್ಕೆ, ಪ್ರಧಾನಿ ಗಮನ ಸೆಳೆಯಲು ನಿಯೋಗ ಹೋಗೋಣವೆಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕೆಕೆಆರ್ಡಿಬಿಗೆ 1 ಸಾವಿರ ಕೋಟಿ ರೂ. ನಿಂದ 5 ಸಾವಿರ ಕೋಟಿ ರೂ. ವರೆಗೂ ಅಭಿವೃದ್ಧಿ ಅನುದಾನ ನೀಡಿದ್ದೇ ಕಾಂಗ್ರೆಸ್ ಪಕ್ಷ. ಹಿಂದುಳಿದ ನೆಲದಲ್ಲಿ ಪ್ರಗತಿಯ ಪೈರು ಹಸಿರು ಚಿಗುರಬೇಕೆಂಬ ನಮ್ಮ ಬದ್ಧತೆ ಸದಾ ಇದ್ದೇ ಇದೆ ಎಂಬುದಕ್ಕೆ ಈ ಅನುದಾನವೇ ಕನ್ನಡಿ ಎಂದರು.

ಕಲ್ಯಾಣ ನಾಡಿಗೇಕೆ ಈ ಪ್ರಮಾಣದಲ್ಲಿ ಅನುದಾನವೆಂದು ಕೇಳೋರಿಗೆ ಡಾ.ಅಜಯ್ ಸಿಂಗ್ ಸದನದಲ್ಲೇ ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆಗಳ ವಿಚಾರದಲ್ಲಿ ವಿಭಾಗವಾರು ಅಂಕಿ ಸಂಖ್ಯೆ ವಿವರಿಸುತ್ತ ಕಲಬುರಗಿ ಸೇರಿದಂತಿರುವ ಕಲ್ಯಾಣ ನಾಡಲ್ಲೇ ಎಲ್ಲ ವಿಬಾಗಗಳಿಗಿಂತ ಕಮ್ಮಿ ಮೂಲ ಸವಲತ್ತಿರೋದು. ನಾವು ರಾಜ್ಯದ ಬೇರೆ ಬಾಗಗಳಿಗೆ ಸರಿಸಮನಾಗಿ ಪ್ರಗತಿ ಹೊಂದೋದು ಬೇಡವೆ? ಅದಕ್ಕಾಗಿ 5 ಸಾವಿರ ಕೋಟಿಯಲ್ಲ 1 ಲಕ್ಷ ಕೋಟಿ ರೂ. ಕೊಟ್ಟರೂ ಸಾಲದೆಂದು ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿಕೆ ನೀಡಿದ್ದಿದೆ. ಹೀಗಾಗಿ ಕಲ್ಯಾಣದ ಅಭಿವೃದ್ಧಿ ವೇಗಕ್ಕೆ ಹೆಚ್ಚಿನ ಹಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

4 ಲಕ್ಷ ಕೋಟಿಗೂ ಅಧಿಕ ಮೊತ್ತದ ಬಜೆಟ್ ಗಾತ್ರವಿದೆ. ಮತ್ತೆ ಕೆಕೆಆರ್ಡಿಬಿಗೆ 5 ಸಾವಿರ ಕೋಟಿ ರೂ. ಘೋಷಣೆಯಾಗಿದ್ದು, ಇದು ಹಿಂದುಳಿದ ನೆಲದ ಸಮಗ್ರ ಪ್ರಗತಿಗೆ ವರವಾಗಲಿದೆ. ಒಟ್ಟು ಅನುದಾನದಲ್ಲಿ ಶೇ. 25 ರಷ್ಟು ಶಿಕ್ಷಣ ರಂಗಕ್ಕೆ ಮೀಸಲಿಟ್ಟು ಅಕ್ಷರ ಅವಿಷ್ಕಾರ ಯೋಜನೆ ರೂಪಿಸಲಾಗಿದ್ದು ಹಿಂದುಳಿದ ನೆಲದಲ್ಲಿನ ಶಿಕ್ಷಣ ಕ್ರಾಂತಿಗೆ ಇದು ವರವಾಗಲಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ 200 ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸುವ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆಯಾಗಿದೆ. ಕೆಕೆಆರ್ಡಿಬಿ ವತಿಯಿಂದ 23,000 ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ.ಅಜಯ್ ಸಿಂಗ್ ಸದನದ ಗಮನ ಸೆಳೆದರು.

ಗ್ಯಾರಂಟಿ ಯೋಜನೆಗಳಿಗೆ ಮತ್ತೆ 51 ಸಾವಿರ ಕೋಟಿಗೂ ಹೆಚ್ಚಿನ ಹಣ ಮೀಸಲಿಡಲಾಗಿದೆ. ಗ್ಯಾರಂಟಿಯ ಜೊತೆಗೇ ಪ್ರಗತಿಗೂ ಬದ್ಧ ಎಂಬುದಕ್ಕೆ ಇಲ್ಲಿನ ಬೆಳವಣಿಗೆಗಳೇ ಕನ್ನಡಿ . ಕೆಕೆಆರ್ ಡಿಬಿಗೆ ಕಳೆದ 3 ವರ್ಷಗಳಿಂದ 13 ಸಾವಿರ ಕೋಟಿ ರೂ. ಹಣ ಬಂದಿದೆ. ಈ ಬಾರಿ ಮತ್ತೆ 5 ಸಾವಿರ ಕೋಟಿ ರು ಘೋಷಣೆಯಾಗಿರೋದು ಇಲ್ಲಿನ ಪ್ರಗತಿಗೆ ವರವಾಗಲಿದೆ ಎಂದು ಡಾ. ಅಜಯ್ ಸಿಂಗ್ ಸದನದ ಗಮನ ಸೆಳೆದರು.

ಆರೋಗ್ಯ ಅವಿಷ್ಕಾರಕ್ಕೆ 873 ಕೋಟಿ ರೂಪಾಯಿ :

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಆರೋಗ್ಯ ಅವಿಷ್ಕಾರದಡಿಯಲ್ಲಿ 873 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಆರೋಗ್ಯ ಅಭಿವೃದ್ದಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು 24 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 7 ಹೊಸ ನಗರ ಆರೋಗ್ಯ ಕೇಂದ್ರಗಳು, 10

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ, 4 ಹೊಸ ನಗರ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಲಾಗುತ್ತಿದೆ. ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಗೆ, ನಿಮ್ಹಾನ್ಸ್ ಮಾದರಿ ಕೇಂದ್ರ, ಡಯಾಬೆಟಾಲಜಿ ಸಂಸ್ಥೆಗೆ ನೆರವು ನೀಡಲಾಗುತ್ತಿದೆ. ಇದರಿಂದ ಆರೋಗ್ಯ ರಂಗದಲ್ಲಿನ ಮೂಲ ಸವಲತ್ತು ಹೆಚ್ಚಲಿದೆ ಎಂದು ಡಾ. ಅಜಯ್ ಸಿಂಗ್ ಪ್ರತಿಪಾದಿಸಿದರು.

ರಾಜ್ಯದ ಪ್ರಗತಿ ಹಾಗೂ ಪ್ರಾದೇಶಿಕ ಅಸಮಾನತೆ ಅಸಮತೋಲನ ಅಧ್ಯಯನಕ್ಕೆ ಪ್ರೊ. ಗೋವಿಂದರಾವ ಅಧ್ಯಕ್ಷತೆಯ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮೀತಿ ರಚನೆಯಾಗಿದ್ದು ಅಧ್ಯಯನ ಶುರುವಾಗಿದೆ. ಸದರಿ ಸಮೀತಿ ವರದಿ ಆಧರಿಸಿ ಪ್ರಾದೇಶಿಕ ಅಸಮತೋಲನನಿವಾರಣೆಗೆ ಕ್ರಮ ಕೈಗೊಳ್ಳೋದಾಗಿ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕಲ್ಯಾಣ ನಾಡಿನ ಪ್ರಗತಿಗೆ ಬದ್ಧವಾಗಿದೆ ಎಂದು ಕೆಕೆಆರ್ ಡಿಬಿ ಅಧ್ಯಕ್ಷರಾದ ಡಾ.ಅಜಯ್ ಧರ್ಮಸಿಂಗ್ ಸದನದಲ್ಲಿ ವಿಸ್ತೃತ ಯೋಜನೆಗಳನ್ನೆಲ್ಲ ವಿವರಿಸುತ್ತ ಗಮನ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News