ಕಲಬುರಗಿ ಕಸಾಪದಿಂದ ವಿಭಿನ್ನ-ವೈವಿಧ್ಯಮಯ ಕಾರ್ಯಕ್ರಮ

Update: 2024-10-28 05:04 GMT

ಕಲಬುರಗಿ: ಕನ್ನಡ ಭಾಷೆಯನ್ನು ಕೇವಲ ನವೆಂಬರಗೆ ಸೀಮಿತಗೊಳಿಸದೆ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳೂ ಸಹ ನಿತ್ಯವಾಗಿರುವಂತೆ, ಕನ್ನಡ ನಾಡು-ನುಡಿ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ವಿಭಿನ್ನ ಪ್ರಯೋಗದೊಂದಿಗೆ ವಿಶೇಷತೆಗಳಿಂದ ಕೂಡಿದ ಕಾರ್ಯಕ್ರಮಗಳನ್ನು ನವೆಂಬರ್ ತಿಂಗಳಾದ್ಯಂತ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ರವಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿ ನೀಡಿದ ತೇಗಲತಿಪ್ಪಿ, ಇಂಥ ಕಾರ್ಯಕ್ರಮಗಳು ರೂಪಿಸುವ ಮೂಲಕ ಕನ್ನಡ ರಾಜ್ಯೋತ್ಸವದ ದೀಪ ಹಚ್ಚುವ ಮೂಲಕ ಜಿಲ್ಲೆಯಾದ್ಯಂತ ಕನ್ನಡ ಕ್ರಾಂತಿ ಮೊಳಗಿಸುವ ಮಹತ್ತರ ಕಾರ್ಯ ನಿರಂತರವಾಗಿ ಪರಿಷತ್ತು ಮಾಡತ್ತಿದೆ ಎಂದು ಅವರು ವಿವರಿಸಿದರು.

ಅ.30 ರಂದು ಬೆಳಗ್ಗೆ 10.15 ಕ್ಕೆ ಜಗತ್ ವೃತ್ತದಿಂದ ಕನ್ನಡ ಭವನದ ವರೆಗೆ ನಡೆಯುವ ಕನ್ನಡ ಜಾಗೃತಿ ಜಾಥಾ ಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಚಾಲನೆ ನೀಡಲಿದ್ದು, ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ನವೆಂಬರ್ 3 ರಂದು ಬೆಳಗ್ಗೆ 10.45 ನಗರದ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರದ ಹದಿನಾರು ಜನ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರ ಆಯೋಜಿಸಲಾಗಿದ್ದು, ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರವೀಂದ್ರ ಢಾಕಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಲೇಖಕಿ ಡಾ. ಇಂದುಮತಿ ಪಿ ಪಾಟೀಲ ಉಪಸ್ಥಿತರಿರುವರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.

12 ರ ಬೆಳಗ್ಗೆ 10.45 ಕ್ಕೆ ನಗರದ ಎಸ್ ಎಸ್ ತೆಗನೂರ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾದ ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಕುರಿತು ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಮೇಯರ್ ಯಲ್ಲಪ್ಪ ನಾಯ್ಕೋಡಿ ಸಮಾರಂಭ ಉದ್ಘಾಟಿಸಲಿದ್ದು, ಶರಣ ಚಿಂತಕ ಪ್ರೊ. ಸಂಜಯ ಮಾಕಲ್ ವಿಚಾರ ಮಂಡನೆ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ ತೆಗನೂರ ಅಧ್ಯಕ್ಷತೆ ವಹಿಸಲಿದ್ದಾರೆ.

16 ರಂದು ಸಾಯಂಕಾಲ 5.30 ಕ್ಕೆ ಕನ್ನಡ ಭವನದಲ್ಲಿನ ಸಾಹಿತ್ಯ ಮಂಟಪದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ, ಶರಣು ದೇಸಾಯಿ, ಜ್ಯೂ. ಡಾ. ರಾಜಕುಮಾರ ಖ್ಯಾತಿಯ ಹೇಮಂತ್ ಮಾಲಗತ್ತಿ, ಜ್ಯೂ. ರವಿ ಬೆಳಗೆರೆ ಖ್ಯಾತಿಯ ಹಣಮಂತ ಶೇರಿ ಅವರಿಂದ ರಾಜ್ಯೋತ್ಸವಕ್ಕೆ ಹಾಸ್ಯದ ಹಬ್ಬ ಎಂಬ ನಕ್ಕಾಂವ ಗೆದ್ದಾಂವ ಎಂಬ ವಿಶೇಷ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಲಬುರಗಿ ಸಹಾಯಕ ಆಯುಕ್ತರಾದ ಸಾಹಿತ್ಯ ಎಂ ಆಲದಕಟ್ಟಿ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ.

20 ರಂದು ಬೆಳಗ್ಗೆ 10.45 ಕ್ಕೆ ಕನ್ನಡ ಭವನದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸ್ಪರ್ಧೆಯ ಮೂಲಕ ಪ್ರಬಂಧ ಸ್ಪರ್ಧೆ ಹಾಗೂ ರಸ ಪ್ರಶ್ನೆ ಕಾರ್ಯಕ್ರಮಗಳು ಜರುಗಲಿವೆ. ಕೆ.ಎ. ಎಸ್. ಅಧಿಕಾರಿ ಆಶಪ್ಪ ಪಿ ಅವರು ಉದ್ಘಾಟಿಸಲಿದ್ದಾರೆ.

26 ರ ಬೆಳಗ್ಗೆ 10.45 ಕ್ಕೆ ಮಕ್ಕಳೋತ್ಸವ ಎಂಬ ಚಿಣ್ಣರ ಸಂಭ್ರಮವನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಭಾಗವಹಿಸಲಿದ್ದಾರೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ್ ಉದ್ಘಾಟಕರಾಗಿ ಆಗಮಿಸಲಿದ್ದಾರೆ.

29 ರ ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿನ ಕಲಾ ಸೌಧದಲ್ಲಿ ಒಂದು ವಾರದ ವರೆಗೆ ಮಹಿಳಾ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಚಾಲನೆ ಕೊಡಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ಡಾ. ರೆಹಮಾನ್ ಪಟೇಲ್ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News