ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ: ಮಾಣಿಕ್ ಗೌಡ ಪಾಟೀಲ
ಕಲಬುರಗಿ : ಸಚಿನ್ ಆತ್ಮಹತ್ಯೆ ಅತ್ಯಂತ ನೋವಿನ ಸಂಗತಿ. ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಆದರೆ ಸಚಿನ್ ಪಾಂಚಾಳ ಅವರ ಆತ್ಮಹತ್ಯೆಗೆ ರಾಜಕೀಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಎಳೆದು ತರುತ್ತಿರುವುದು ಮಾತ್ರ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಮಾಣಿಕ್ಗೌಡ ಪಾಟೀಲ ತಿಳಿಸಿದ್ದಾರೆ.
ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆದ ನಂತರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು. ಆದರೆ ಪ್ರಕರಣದಲ್ಲಿ ಸಂಬಂಧವಿಲ್ಲದ ಸಚಿವರ ಹೆಸರು ಎಳೆದು ತರುವುದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿ ಸಾವಿನ ಮನೆಯಲ್ಲೂ ಕೀಳು ರಾಜಕೀಯ ಮಾಡುತ್ತಿದೆ. ಈ ಹಿಂದೆ ಬಿಜೆಪಿಯ ಪಕ್ಷದ ಒಬ್ಬ ಮುಖಂಡ ಹಾಗೂ ಗುತ್ತಿಗೆದಾರ ಡೆತ್ ನೋಟಲ್ಲಿ ಈಶ್ವರಪ್ಪನವರ ಹೆಸರು ಬರೆದಿದ್ದ. ಆತ ಬಿಜೆಪಿ ಪಕ್ಷದವನಾಗಿದ್ದ. ಆದರೆ ಇಲ್ಲಿ ಸಚಿವರ ಹೆಸರು ಇಲ್ಲದಿದ್ದರೂ ಬೀದರ್ನ ಸಚಿನ್ ಪಾಂಚಾಳ ಅವರ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರಣರಾಗಿದ್ದಾರೆ ಎಂದು ಬಿಜೆಪಿಯವರು ರಾಜಕೀಯವಾಗಿ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಅವರ ಸಾಕಷ್ಟು ಹಗರಣಗಳನ್ನು ಪ್ರಿಯಾಂಕ್ ಖರ್ಗೆ ಅವರು ಬಯಲಿಗೆ ಎಳೆದಿದ್ದಾರೆ. ಬಿಜೆಪಿಗೆ ತೀಕ್ಷಣವಾದ ಉತ್ತರವನ್ನು ನೀಡಿದ್ದಾರೆ. ಇದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕೆ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದರು.
ಬಿಜೆಪಿಯವರ ಷಡ್ಯಂತ್ರ ಫಲಿಸುವುದಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನೀಡುತ್ತಿರುವ ಪರಿಣಾಮವಾಗಿ ಅವರ ರಾಜಕೀಯ ಏಳಿಗೆಯನ್ನು ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಗತ್ಯವಿಲ್ಲ ಎಂದಿದ್ದಾರೆ.