ಕಲಬುರಗಿ: ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿ ಪ್ರವೇಶಕ್ಕೆ ನಿರ್ಬಂಧ ಆರೋಪ; ಆಡಳಿತ ಮಂಡಳಿ ವಿರುದ್ಧ ಆಕ್ರೋಶ

Update: 2024-03-24 09:14 GMT

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರೀಯ ವಿಶ್ವ ವಿದ್ಯಾಲಯವು ಸಂಶೋಧನಾ ವಿದ್ಯಾರ್ಥಿಗಳಿಗೆ ವಿನಾ ಕಾರಣ ವಿವಿಯೊಳಗೆ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಘಟನೆ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ನಂದಕುಮಾರ್ ಅವರನ್ನು ವಿವಿಯ ಆವರಣದೊಳಗೆ ಪ್ರವೇಶಿಸಬಾರದೆಂದು ವಿವಿಯ ಆಡಳಿತ ಮಂಡಳಿ ಅಲ್ಲಿನ ಸೆಕ್ಯೂರಿಟಿಗಳಿಗೆ ಆದೇಶಿಸಿದ್ದಾರೆ. ಇದಲ್ಲದೇ 2018ರಲ್ಲಿ ಪ್ರವೇಶ ಪಡೆದು, ಪಿಎಚ್‌ಡಿ ಮುಗಿಸದ ವಿದ್ಯಾರ್ಥಿಗಳ ಪ್ರವೇಶವನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಕನ್ನಡವಿಭಾಗದ ನಂದಪ್ಪ, ಗಡ್ಡೆಪ್ಪ ಶರಣಪ್ಪ, ಜೀವ ವಿಜ್ಞಾನ ವಿಭಾಗದ ಪೂಜಾಕುಮಾರಿ, ಭೌತವಿಜ್ಞಾನ ವಿಭಾಗದ ರಿಧಿ ಸೇನಗುಪ್ತಾ ಸೇರಿದಂತೆ 12 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ತಿಳಿದುಬಂದಿದೆ.‌

ನಂದಕುಮಾರ್ ಅವರು ಎಂದಿನಂತೆ ಶನಿವಾರ ತರಗತಿಗೆ ತೆರಳುವಾಗ ಸೆಕ್ಯೂರಿಟಿ ಗಾರ್ಡ್ ಗಳು ಅವರನ್ನು ತಡೆದು ನಿಲ್ಲಿಸಿ, ನಿಮಗೆ ವಿವಿಯ ಆವರಣದೊಳಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ ಎನ್ನಲಾಗಿದೆ. ‌ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕುರಿತು ಅವರು ಪ್ರಶ್ನಿಸಿದಾಗ ನಮಗೆ ಗೊತ್ತಿಲ್ಲ, ಮೇಲಿನವರನ್ನು ಕೇಳಿ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆಂದು ನೊಂದ ವಿದ್ಯಾರ್ಥಿ ವಾರ್ತಾ ಭಾರತಿಯೊಂದಿಗೆ ತನ್ನ ಅಳಲು ತೋಡಿಕೊಂಡಿದ್ದಾರೆ.

ನಿಮ್ಮನ್ನು ಒಳಗೆ ಬಿಡಬೇಡಿ ಎಂದು ಮೇಲಿಂದ ಆದೇಶ ಬಂದಿದೆ. ಅದಕ್ಕೆ ಬಿಡುವುದಿಲ್ಲ ಎಂದು ಸಿಬ್ಬಂದಿ ಹೇಳಿದಾಗ, ಕೆಲಹೊತ್ತು ಸಿಬ್ಬಂದಿ ಮತ್ತು ವಿದ್ಯಾರ್ಥಿಯ ನಡುವೆ ವಾ‌ಗ್ವಾದ ನಡೆದಿದೆ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ನನ್ನನ್ನು ಬಿಡುತ್ತಿಲ್ಲ. ನಾನೇನು ಟೆರರಿಸ್ಟ್, ನಕ್ಸಲ್ ಅಥವಾ ದಲಿತ ಎನ್ನುವ ಕಾರಣಕ್ಕೆ ವಿವಿಯಲ್ಲಿ ನನ್ನ ಪ್ರವೇಶ ನಿಷೇಧಿಸಲಾಗಿದೆಯೇ ಎಂದು ವಿವಿಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಂದಕುಮಾರ ಅವರು ವಿವಿಯಲ್ಲಿ ಸರಸ್ವತಿ ಪೂಜೆ ಹಾಗೂ ಎಬಿವಿಪಿ ಸಂಘಟನೆಯಿಂದ ಹೊರಗಿನ ಜನರನ್ನು ಕರೆಸಿ ಕಾರ್ಯಕ್ರಮ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News