ಕಲಬುರಗಿ | ಅಸ್ಪೃಶ್ಯತೆ ಅಳಿಸಲು ಸಾಮಾಜಿಕ ಜಾಗೃತಿ ಮುಖ್ಯ : ಯಲ್ಲಪ್ಪ ನಾಯ್ಕೋಡಿ

Update: 2025-04-02 23:16 IST
Photo of Program
  • whatsapp icon

ಕಲಬುರಗಿ : ಶತಮಾನಗಳಿಂದ ಸಮಾಜದಲ್ಲಿ ಬೇರೂರಿದ ಅಸ್ಪೃಶ್ಯತೆ ಮಾನವ ಸಮುದಾಯಕ್ಕೆ ಅಂಟಿದ ಕಳಂಕ. ಇದನ್ನು ಕಿತ್ತು ಹಾಕಲು ಜನರಿಗೆ ಶಿಕ್ಷಣದ ಅರಿವು ಮತ್ತು ಸಾಮಾಜಿಕ ಜಾಗೃತಿ ಮುಖ್ಯ ಎಂದು ಮಹಾನಗರ ಸಭೆಯ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಮಾಯಾ ವೆಲಫರ್ ಸೂಸೈಟಿ ಇವರ ಸಹಯೋಗದಲ್ಲಿ ಏರ್ಪಡಿಸಿದ ʼಅಸ್ಪೃಶ್ಯತೆ ನಿವಾರಣೆಯ ವಿಚಾರ ಸಂಕಿರಣʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯರಲ್ಲಿ ಮೇಲು ಕೀಳು ಎಂಬ ಭಾವನೆಗಳು ನಿರ್ಮಾಣಗೊಂಡು ಅಸ್ಪೃಶ್ಯತೆ ಸಮಸ್ಯೆ ಎದುರಾಯಿತು. ಡಾ.ಅಂಬೇಡ್ಕರವರು ತಮ್ಮ ಜೀವನವೇ ತ್ಯಾಗ ಮಾಡಿ ಜಾತಿಯ ಅಸಮಾನತೆ ತೊಲಗಿಸಲು ನಿರಂತರ ಹೋರಾಟ ನಡೆಸಿ ಇಂದು ನಮಗೆ ನೆಮ್ಮದಿ ಬದುಕು ಕಟ್ಟಿ ಕೊಟ್ಟಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧಮ್ಣಣ ಎಚ್.ಧನ್ನಿ ಅವರು ಅಸ್ಪೃಶ್ಯತೆ ಮತ್ತು ಸಾಮಾಜಿಕ ಜೀವನ ಕುರಿತು ಉಪನ್ಯಾಸ ಭಾಷಣ ಮಾಡಿ, ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರವರು ತಮ್ಮ ಅಧಿಕಾರ, ಅಂತಸ್ತು ಬಿಟ್ಟು ಜಾತಿ ವಿರುದ್ಧ ಸಮರವನ್ನೆ ಸಾರಿದರು. ಶಿಕ್ಷಣ ಸಂಘಟನೆ ಮತ್ತು ಹೋರಾಟಗಳ ಮೂಲಕ ಅಸ್ಪೃಶ್ಯತೆ ಹೋಗಲಾಡಿಸಲು ಮುಂದಾದರು. ನಮಗೆ ಲಿಂಗ ತಾರತಮ್ಯ ಅಳಿಸಲು ಸಂವಿಧಾನಬದ್ಧ ಹಕ್ಕುಗಳು ಕೊಟ್ಟು ಸಮಸಮಾಜವನ್ನು ತರಲು ಪ್ರಯತ್ನಿಸಿದರು. ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಾಮಾಜಿಕ ಸಮಾನತೆ ಸಾಧಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಮಾಯಾ ವೆಲಫರ್ ಸೂಸೈಟಿ ಅಧ್ಯಕ್ಷ ವೀರಣ್ಣ ಬೆಣ್ಣೆಶಿರೂರ ಅಧ್ಯಕ್ಷತೆ ವಹಿಸಿದರು. ಮುಖಂಡ ಶರಣಗೌಡ ಎ.ಪಾಟೀಲ, ನ್ಯಾಯವಾದಿಗಳಾದ ಧರ್ಮಣ್ಣ ಜೈನಾಪೂರ, ನಾಗೇಂದ್ರ ಕೋರೆ, ಪ್ರಕಾಶ ಕೋಟ್ರೆ, ಗೋಪಾಲರಾವ ತೆಲಂಗೆ, ಮಾಳಪ್ಪ ನಾಗಲಗಾಂವ, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದರು.

ಕಲಾವಿದರಾದ ಎಂ.ಎನ್.ಸುಗಂಧಿ ರಾಜಾಪೂರ ಮತ್ತು ಅಣ್ಣಪ್ಪ ದೊಡ್ಡಮನಿ ಅವರು ಅಂಬೇಡ್ಕರ್ ಕುರಿತಾದ ಕ್ರಾಂತಿಗೀತೆಗಳನ್ನು ಹಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News