ಕಲಬುರಗಿ | ಉರ್ದು ಮುಸ್ಲಿಂರ ಭಾಷೆಯಲ್ಲ : ಬಸವರಾಜ ಕೋಡಗುಂಟಿ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಚಲಿತದಲ್ಲಿರುವ ಉರ್ದು ಭಾಷೆಯು ಮುಸ್ಲಿಂರ ಭಾಷೆಯಲ್ಲ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಬಸವರಾಜ ಕೋಡಗುಂಟಿ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ 'ಹೈದರಾಬಾದ್ ಸಂಸ್ಥಾನದ ಭಾಷಿಕ ಪರಿಸರ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಈ ಹಿಂದೆ ಹೈದರಾಬಾದ್ ಸಂಸ್ಥಾನದಲ್ಲಿ ಹಲವಾರು ಭಾಷೆಗಳು ಬದುಕಿದ್ದವು ಮತ್ತು ಪರಸ್ಪರ ಬೆರೆತು ಬದುಕಿವೆ ಎಂಬುದನ್ನು ಅವರು ಹೇಳಿದರು.
ಮಧ್ಯಯುಗದಲ್ಲಿ ಬಹಮನಿಗಳ ಕಾಲದಲ್ಲಿ ಪರ್ಶಿಯನ್ ಭಾಷೆ ಮಾತಾಡುವ ಅಧಿಕಾರ ವರ್ಗ ಮತ್ತು ಕನ್ನಡ ಮಾತನಾಡುವ ಸ್ಥಳೀಯ ಜನಸಮುದಾಯಗಳ ನಡುವಿನ ಸಂಪರ್ಕದಲ್ಲಿ ಹುಟ್ಟಿದ ಪಿಜಿನ್ ಉರ್ದು ಆಗಿದ್ದು, ಆನಂತರ ಭಾಷೆಯಾಗಿ ಬೆಳೆದಿದೆ. ಮುಂದೆ ಇದು ಹೈದರಾಬಾದ್ ಸಂಸ್ಥಾನದಲ್ಲಿ ಆಡಳಿತ ಭಾಷೆಯಾಗಿದ್ದ ಪರ್ಶಿಯನ್ ಭಾಷೆಯನ್ನು ಪಲ್ಲಟಿಸಿ ಅಧಿಕಾರದ ಭಾಷೆಯಾಯಿತು ಎಂದು ಅವರು ಹೇಳಿದರು.
ಹೈದರಾಬಾದ್ ಸಂಸ್ಥಾನದಲ್ಲಿ ಕನ್ನಡ ಭಾಷೆಯ ಹಲವಾರು ಪತ್ರಿಕೆಗಳು ಬರುತ್ತಿದ್ದವು. ಯಾದಗಿರಿಯಲ್ಲಿ ಒಂದು ಮುದ್ರಣ ಸಂಸ್ಥೆ, ಸಂಸ್ಕೃತ ಕಾಲೇಜು ಇದ್ದವು. ಕನ್ನಡ ಮಾಧ್ಯಮದ ಹಲವಾರು ಶಾಲೆಗಳು ಇದ್ದವು, ಕಲಬುರಗಿಯ ಮಹತ್ವದ ಶಿಕ್ಷಣ ಸಂಸ್ಥೆಗಳಿಗೆ ನಿಜಾಮರು ಸಹಾಯಧನವನ್ನು ನೀಡಿದ್ದರು.
ಈ ಪರಿಸರದಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚಾಗಿದ್ದು, ಮರಾಠರ ಕಾಲದ ವ್ಯಾಪಾರ ಕಾರಣಕ್ಕಾಗಿ ಸೊಲ್ಲಾಪುರ, ಬೀದರ್ ಮತ್ತು ಕಲಬುರಗಿ ಪ್ರದೇಶಗಳಲ್ಲಿ ಬಹುಸಂಖ್ಯಾತ ಶ್ರೀಮಂತ ಕನ್ನಡ ಮನೆಮಾತಿನವರು ಮರಾಠಿ ಮನೆಮಾತಿಗೆ ಪಲ್ಲಟಗೊಳ್ಳುತ್ತಾರೆ. ಇದರಿಂದ ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತದೆ. ಈ ದಾಖಲೆಯನ್ನು ಹೈದರಾಬಾದ್ ಸಂಸ್ಥಾನದ ಜನಗಣತಿ ತೋರಿಸುತ್ತದೆ ಎಂದು ಹೇಳಿದರು.