ಕಲಬುರಗಿ | ಆಸ್ಪತ್ರೆಯಲ್ಲಿ ಮಹಿಳೆ ಮೃತ್ಯು; ವೈದ್ಯರ ನಿರ್ಲಕ್ಷ್ಯ ಆರೋಪ

ಕಲಬುರಗಿ : ನಗರದ ಕುಸನೂರ ರಸ್ತೆಯಲ್ಲಿರುವ ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಜ್ಯೋತಿ ಪರಶುರಾಮ ಕಟ್ಟಿಮನಿ ಅವರ ಸಾವಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ಮಾದಿಗ ಸಮಾಜ ಮುಖಂಡರು ಆರೋಪಿಸಿದ್ದಾರೆ.
ಅವರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ರಿಗೆ ಸಲ್ಲಿಸಿ, ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾ.3 ರಂದು, ಡಾ.ಚಂದ್ರಿಕಾ ಅವರ ಮೇಲ್ವಿಚಾರಣೆಯಲ್ಲಿ ಜ್ಯೋತಿ ಅವರನ್ನು ಹೆರಿಗೆಗಾಗಿ ದಾಖಲಿಸಲಾಯಿತು. ಮಾ.4ರಂದು ಬೆಳಿಗ್ಗೆ 10 ಗಂಟೆಗೆ ಸೀಜೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಮಾ.5ರ ಬೆಳಗಿನ ಜಾವ, ಜ್ಯೋತಿ ಅವರಲ್ಲಿ ತೀವ್ರ ರಕ್ತಸ್ರಾವ, ಹೊಟ್ಟೆನೋವು, ಬೆನ್ನುನೋವು ಮತ್ತು ಉಸಿರಾಟ ತೊಂದರೆ ಉಂಟಾಯಿತು. ಕುಟುಂಬದವರು ಮತ್ತು ಸಿಬ್ಬಂದಿ ವೈದ್ಯರಿಗೆ ತಕ್ಷಣವೇ ಮಾಹಿತಿ ನೀಡಿದರೂ, ಚಿಕಿತ್ಸೆ ನೀಡಲು ನಾಲ್ಕರಿಂದ ಐದು ಗಂಟೆಗಳ ಕಾಲ ವಿಳಂಬ ಮಾಡಲಾಯಿತು. ಈ ಮಧ್ಯೆ, ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಚಿಕಿತ್ಸೆ ನೀಡದೇ ವಿಳಂಬ ಮಾಡಿದ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವೈದ್ಯರ ಹುದ್ದೆ ಕುರಿತು ಗಂಭೀರ ಪ್ರಶ್ನೆಗಳು :
ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಚಂದ್ರಿಕಾ ಖಾಸಗಿ ಸುರಕ್ಷಾ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಒಬ್ಬ ವೈದ್ಯ ಇಬ್ಬರು ಸೇವಾ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುವುದು ಹೇಗೆ ಸಾಧ್ಯ? ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಮುಖ್ಯ ಒತ್ತಾಯಗಳು :
ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದರಿಂದ, ಡಾ.ಚಂದ್ರಿಕಾ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸುರಕ್ಷಾ ಆಸ್ಪತ್ರೆಯ ಪರವಾನಗಿ ರದ್ದುಪಡಿಸಿ, ಆಸ್ಪತ್ರೆಯನ್ನು ಶಾಶ್ವತವಾಗಿ ಮುಚ್ಚಬೇಕು. ಮೃತಳ ಕುಟುಂಬಸ್ಥರು ನ್ಯಾಯಕ್ಕಾಗಿ ದೂರು ನೀಡಿದಾಗ, ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಆಘಾತಕರ. ಈ ಪ್ರಕರಣವನ್ನು ತಕ್ಷಣವೇ ರದ್ದುಪಡಿಸಬೇಕು. ಎಂ.ಬಿ.ನಗರ ಠಾಣೆಯ ಪೊಲೀಸ್ ಪಿಐ ಶಿವಾನಂದ ವಾಲಿಕರ್ ಬಂಧನ ಹಾಗೂ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡ ಮಹಾಂತಪ್ಪ ಐಹೊಳೆ ಸಾಲೇಗಾಂವ, ಸಂಜುಕುಮಾರ ಡಿ. ಐಹೊಳೆ, ಸಿದ್ಧ ಎಲೆನಾವದಗಿ, ಲಕ್ಕಪ್ಪ ಜವಳಿ, ವಿಠ್ಠಲ ಎಂ. ಜವಳಿ, ಮಲ್ಲಪ್ಪ ಎಂ. ದೊಡ್ಡಮನಿ, ಸಿದ್ಧರಾಮ ಮಾಂಗ, ಸಾತಪ್ಪ ಸಂಗೊಳಗಿ, ಅರಿದಾಸ ಹಜಾರೆ, ಹಣಮಂತ ದವಳಕರ್, ಜೆಟೆಪ್ಪ, ರಾಜೇಂದ್ರ ಕಟ್ಟಿಮನಿ, ಸುನಿಲ ಬಂಡಾರೆ, ಯಲ್ಲಾಲಿಂಗ ಭಂಡಾರೆ ಮತ್ತಿತರರು ಉಪಸ್ಥಿತರಿದ್ದರು.