ಅನಧಿಕೃತ ಸ್ವತ್ತುಗಳ ಮಾಲಕರು ತಮ್ಮ ದಾಖಲೆಗಳನ್ನು ಸಲ್ಲಿಸಿ, 7 ದಿನದಲ್ಲಿಯೇ ಇ-ಖಾತಾ ಪಡೆಯಿರಿ; ಡಿ.ಸಿ.ಫೌಝಿಯಾ ತರನ್ನುಮ್

ಕಲಬುರಗಿ : ರಾಜ್ಯದಲ್ಲಿನ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಇ-ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳ ಮಾಲಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ 7 ದಿನದಲ್ಲಿಯೇ ಇ-ಖಾತಾ ಪಡೆಯಬಹುದಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಅನಧೀಕೃತ ಸ್ವತ್ತುಗಳ ಮಾಲಕರು ತಮ್ಮ ಸ್ವತ್ತಿನ ಕಂದಾಯವನ್ನು ಪಾವತಿಸಿ ಇ-ಖಾತಾವನ್ನು ಪಡೆಯಬಹುದಾಗಿದೆ. ಇದರಿಂದ ಬಹಳ ದಿನಗಳಿಂದ ಅನಧಿಕೃತ ಸ್ವತ್ತುಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದ್ದು, ಸ್ವತ್ತಿನ ಮಾಲಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅನಧೀಕೃತ ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಕೊನೆಯ ದಿನ 2025ರ ಮೇ 10 ಇರುತ್ತದೆ. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
“ಎ” ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳಾದ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ ವಿಭಾಗ ಪತ್ರಗಳು/ ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು, ಪತ್ರಗಳು/ ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು.
“ಬಿ”ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳಾದ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕ ಸಾಬೀತುಪಡಿಸುವ ದಿ.10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಲಗತ್ತಿಸಿ ಸಲ್ಲಿಸಬೇಕು.
ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆಯಾ ಸ್ಥಳೀಯ ಸಂಸ್ಥೆಗಳ ಕಚೇರಿಯ ನೋಟೀಸ್ ನಲ್ಲಿ ಸಹಾಯವಾಣಿ ಸಂಖ್ಯೆ ಮತ್ತು ಅರ್ಜಿ ಸ್ವೀಕರಿಸಲು ನೇಮಿಸಿದ ಸಿಬ್ಬಂದಿಯ ಹೆಸರು ಪ್ರಚುರಪಡಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.