ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಹೊಸ ಕ್ರಮ ಜಾರಿ : ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ

Update: 2024-10-23 11:21 GMT

ಕಲಬುರಗಿ : ನಗರದಲ್ಲಿ ಸುಗಮ ಮತ್ತು ಸುರಕ್ಷತೆಯ ಸಂಚಾರ ವ್ಯವಸ್ಥೆ ಕೈಗೊಳ್ಳುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಾದ ಸಮಗ್ರ ಸಂಚಾರ ನಿರ್ವಹಣೆ ವ್ಯವಸ್ಥೆ (ಐಟಿಎಂಎಸ್) ಮೂಲಕ ಇ - ಚಲನ್ ಮುಂದಿನ 10 ದಿನಗಳಲ್ಲಿ ಜಾರಿ ಮಾಡುವ ಉದ್ದೇಶ ಇದೆ ಎಂದು ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಹೇಳಿದರು.

ಕಲಬುರಗಿ ಆಕಾಶವಾಣಿಯಲ್ಲಿ ಬುಧವಾರ ನಡೆಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಿಗ್ನಲ್ ವ್ಯವಸ್ಥೆ ಇದ್ದರೂ ನಿಯಮ ಉಲ್ಲಂಘನೆ ಮಾಡಿ ಸಂಚರಿಸುತ್ತಿರುವ ಮತ್ತು ಅಕ್ರಮ ಪಾರ್ಕಿಂಗ್, ಸೀಟ್ ಬೆಲ್ಟ್ ಧರಿಸದಿರುವುದು, ಸಮವಸ್ತ್ರ ಮುಂತಾದ ನಿಯಮ ಉಲ್ಲಂಘನೆಯ ತಡೆಗಾಗಿ ಸಿಸಿ ಕ್ಯಾಮೆರಾ ಕಣ್ಗಾವಲಿನೊಂದಿಗೆ ಐಟಿಎಂಎಸ್ ಆಧುನಿಕ ತಾಂತ್ರಿಕ ವ್ಯವಸ್ಥೆಯಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ವಾಹನ ಸವಾರರ ಮನೆಗೆ ದಂಡ ಪಾವತಿಯ ರಶೀದಿ ಇ - ಚಲನ್ ಕಳುಹಿಸಿಕೊಡಲಾಗುವುದು. ಪೊಲೀಸರು ನೋಡಿಲ್ಲ ಎಂದು ತಪ್ಪಿಸಲು ಇನ್ನು ಮುಂದೆ ಸಾಧ್ಯವಿಲ್ಲ. ವಾಹನ ಸವಾರರು ಜಾಗೃತರಾಗಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ದಂಡ ಪಾವತಿ ಖಚಿತ ಎಂದು ಎಚ್ಚರಿಕೆ ನೀಡಿದರು.

ಭಾರತದಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ 20 ಸಾವಿರ ಜನರು ಸಾವನ್ನಪ್ಪುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಇದ್ದು ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರತಿ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು "ಜನ ಸಂಪರ್ಕ ಸಭೆ", "ತೆರೆದ ಮನೆ" ಮೂಲಕ ಸಾರ್ವಜನಿಕರಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ನೇರ ಫೋನ್ - ಇನ್ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಸಿದ್ದಣ್ಣ ಬಿ. ನಡೆಸಿಕೊಟ್ಟರು. ಫೋನ್ ಇನ್ ಸಂವಾದದಲ್ಲಿ ಕಲಬುರಗಿಯ ಸುಭಾಷ್ ಪೂಜಾರಿ, ಮುಹಮ್ಮದ್ ತಬ್ರೇಜ್, ನಾಗರಾಜ್ ಚೌದರಿ, ವೆಂಕಟರೆಡ್ಡಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ್, ಆನಂದ ಕುಲಕರ್ಣಿ ಸುಲೇಪೇಟ್, ಬಿ.ವಿ ಕುಲಕರ್ಣಿ, ಮಹೇಶ್ ಪಾಟೀಲ್, ಉಮೇಶ್, ಮರಿಯಪ್ಪ ಗೋಪನವರ್, ಸಚಿನ್, ಬಸವರಾಜ ಕುಂಬಾರ್ ಸೇರಿ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News