ದೀಪಾವಳಿ ಹಬ್ಬ ಪೂರ್ವಭಾವಿ ಸಭೆ | ಪಟಾಕಿ ಅಂಗಡಿ ಪರವಾನಿಗೆ ನೀಡುವ ಮುನ್ನ ಸ್ಥಳ ಪರಿಶೀಲನೆ ಅಗತ್ಯ : ಫೌಝಿಯಾ ತರನ್ನುಮ್

Update: 2024-10-22 17:32 GMT

ಕಲಬುರಗಿ : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿ ತೆರೆಯಲು ಪರವಾನಿಗೆ ನೀಡುವ ಮುನ್ನ ಸುರಕ್ಷತೆ ದೃಷ್ಠಿಯಿಂದ ಸ್ಥಳ ಪರಿಶೀಲಿಸಿಯೇ ಪರವಾನಿಗೆಗೆ ಶಿಫಾರಸ್ಸು ಮಾಡಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚಿಸಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಪರವಾನಿಗೆ ನೀಡುವ ಮುನ್ನ ಅಂಗಡಿಗಳು ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಂಡಿದ್ದಾರೆಯೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕಳೆದ ವರ್ಷ ಅತ್ತಿಬೆಲೆ ದುರಂತ ನಮ್ಮ ಕಣ್ಣ ಮುಂದಿದ್ದು, ಇಂತಹ ಯಾವುದೇ ಲೋಪಕ್ಕೆ ಇಲ್ಲಿ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಕಲಬುರಗಿ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತರು ಮತ್ತು ಜಿಲ್ಲೆಯ ಇತರೆ ಭಾಗದಲ್ಲಿ ಪಟಾಕಿ ಅಂಗಡಿ ಪರವಾನಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ ಮಟ್ಟದಲ್ಲಿ ಪಟಾಕಿ ಅಂಗಡಿಗಳನ್ನು ತೆರೆದ ಪ್ರದೇಶದಲ್ಲಿ ಮತ್ತು ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರು ಹೆಚ್ಚು ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿ ಪಟಾಕಿಗಳ ಬಾಕ್ಸ್ ಗಳ ಮೇಲೆ CSIR-NEERI-INDIA ಈ ಲೇಬಲ್ ಹೊಂದಿರುವ ಪಟಾಕಿಗಳನ್ನು ಮಾತ್ರ ಮಾರಾಟ, ಸಂಗ್ರಹಣೆಗೆ ಅವಕಾಶವಿದೆ. ಇದನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳು ಅದನ್ನು ಜಪ್ತಿ ಮಾಡಿಕೊಳ್ಳಬೇಕು. ಪಟಾಕಿಗಳನ್ನು ದಿನದಲ್ಲಿ ಮಾತ್ರ ಮಾರಾಟ ಮಾಡಬೇಕು. ಪಟಾಕಿ ಅಂಗಡಿಗಳ ಮಾಲೀಕರು ಯಾವುದೇ ಕಾರಣಕ್ಕೂ ಪಾಲಕರ ಸಮಕ್ಷಮ ಇಲ್ಲದೆ 18 ವರ್ಷದೊಳಗಿನ ಮಕ್ಕಳಿಗೆ ಪಟಾಕಿ ನೀಡುವಂತಿಲ್ಲ. ಈ ಬಗ್ಗೆ ಮಾರಾಟಗಾರರ ಸಭೆ ಕರೆದು ತಿಳುವಳಿಕೆ ನೀಡಿ ಎಂದು ಪೊಲೀಸ್, ತಹಶೀಲ್ದಾರರಿಗೆ ಡಿ.ಸಿ. ಸೂಚಿಸಿದರು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಇದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.

ಪಟಾಕಿ ಅಂಗಡಿ ಹೇಗಿರಬೇಕು?:

ಪಟಾಕಿ ಅಂಗಡಿ 10*10 ಅಳತೆಯಲ್ಲಿ ಎರಡು ಬದಿಯಲ್ಲಿ ಮುಕ್ತವಾಗಿ ಓಡಾಡುವಂತೆ ಜಿಂಕ್ ಶೀಟ್‌ನಿಂದ ಕೂಡಿರಬೇಕು. 400 ಲೀಟರ್ ನೀರು ಸಾಮರ್ಥ್ಯದ ಎರಡು ಬ್ಯಾರೆಲ್ ಇಟ್ಟುಕೊಳ್ಳಬೇಕು ಮತ್ತು 4 ಬಕೆಟ್ ಹೊಂದಿರಬೇಕು. ಹೆಚ್ಚಿನ ಪಟಾಕಿ ವಸ್ತುಗಳ ಸಂಗ್ರಹಣೆ ಮಾಡಬಾರದು. ಪ್ರತಿ ಅಂಗಡಿಗಳ ನಡುವೆ 15 ಮೀಟರ್ ಅಂತರ ಇರಬೇಕು. ಸುರಕ್ಷತೆ ದೃಷ್ಠಿಯಿಂದ ಪಟಾಕಿ ಅಂಗಡಿಗಳು ಬೆಂಕಿ ನಂದಿಸುವ ಉಪಕರಣಗಳನ್ನು ಇಟ್ಟುಕೊಳ್ಳಬೇಕೆಂದು ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ಸಾಹಿತ್ಯ, ಹೆಚ್ಚುವರಿ ಎಸ್.ಪಿ ಶ್ರೀನಿಧಿ, ಡಿ.ಸಿ.ಪಿ ಪ್ರವೀಣ ಎಚ್. ನಾಯಕ್ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News