ಬಿ.ಎಲ್.ಸಂತೋಷ್ ಈ ಬಾರಿ ಯಾರ ನಾಯಕತ್ವ ಮುಗಿಸುತ್ತಾರೋ? : ಪ್ರಿಯಾಂಕ್ ಖರ್ಗೆ

Update: 2024-05-04 17:49 GMT

ಕಲಬುರಗಿ: ಆರೆಸ್ಸೆಸ್ ಮುಖಂಡ ಬಿ.ಎಲ್.ಸಂತೋಷ್ ಕಲಬುರಗಿಗೆ ಬಂದಿದ್ದಾರಂತೆ. ಕೋಮು ದ್ವೇಷ, ರಾಜಕೀಯ ದ್ವೇಷ ಇರುವ ಕಡೆ ಅವರು ಬಂದು ಹೋಗುವುದು ಸ್ವಾಭಾವಿಕ. ಬಂದಿದ್ದಾರೆ ಎಂದರೆ ಕಡ್ಡಿ ಗೀರಿಯೆ ಹೋಗುತ್ತಾರೆ. ಕಳೆದ ಬಾರಿ ಲಿಂಗಾಯತ ನಾಯಕತ್ವ ಮುಗಿಸಿದ್ದರು. ಈಗ ಯಾರ ನಾಯಕತ್ವ ಮುಗಿಸುತ್ತಾರೋ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಆರಗ ಜ್ಞಾನೇಂದ್ರ, ನಳೀನ್ ಕುಮಾರ್ ಕಟೀಲ್, ಸುನಿಲ್ ಕುಮಾರ್ ಹಾಗೂ ಅಂಗಾರ ಅವರಿಗೆ ಎಬಿವಿಪಿಯವರು ಧಿಕ್ಕಾರ ಹಾಕಿದ್ದರು ಎಂದರು.

ಕುಕ್ಕರ್ ಹಾಗೂ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳು ತರಬೇತಿ ಪಡೆದುಕೊಂಡಿದ್ದೆ ತೀರ್ಥಹಳ್ಳಿಯಲ್ಲಿ. ಆರೆಸ್ಸೆಸ್ ನವರು ರಾಜಕೀಯಕ್ಕೆ ಬರುವ ಹಾಗಿದ್ದರೆ ನೇರವಾಗಿ ಬರಲಿ ಸುಮ್ಮನೆ ಇಲ್ಲಿ ಬಂದು ಕಡ್ಡಿ ಗೀರುವುದು ಬೇಡ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಯುಪಿಎ ಸರಕಾರ ಇಲ್ಲದೆ ಹೋಗಿದ್ದರೆ 371(ಜೆ) ಜಾರಿ ಆಗುತ್ತಿರಲಿಲ್ಲ: ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಇಲ್ಲದೆ ಹೋಗಿದ್ದರೆ, ಕಲಬುರಗಿಯಲ್ಲಿ ರಾಹುಲ್ ಗಾಂಧಿ ಮಾತು ಕೊಟ್ಟಿರದಿದ್ದರೆ, ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಸದಸ್ಯರಾಗದೆ ಇದ್ದಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಂ 371(ಜೆ) ಜಾರಿ ಮಾಡುವುದು ಅಸಾಧ್ಯವಾಗಿರುತ್ತಿತ್ತು ಎಂದು ಪ್ರಿಯಾಂಕ್ ಖರ್ಗೆ ಸ್ಮರಿಸಿದರು.

ಕೋಲಿ, ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಿ: ಬಿಜೆಪಿಯವರೇ ಈಗ ನಿಮಗೆ ಸಂಖ್ಯಾಬಲ ಇದೆ, ಕೋಲಿ ಹಾಗೂ ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಿ. ಎನ್‍ಆರ್‍ಸಿ, ಸಿಎಎ, ತ್ರಿವಳಿ ತಲಾಖ್ ಜಾರಿಗೊಳಿಸಿದ ವಿಶ್ವಗುರುವಿಗೆ ಇದು ಅಸಾಧ್ಯವೆ? ಎಂದು ಅವರು ಪ್ರಶ್ನಿಸಿದರು.

371(ಜೆ) ಜಾರಿಗೆ ಬಂದು ಈ ಹತ್ತು ವರ್ಷದ ಅವಧಿಯಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ ಇದುವರೆಗೆ 29,257 ಮೂಲಭೂತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 29,785 ಮಂದಿ ಪದೋನ್ನತಿ ನೀಡಲಾಗಿದೆ. ಜೊತೆಗೆ, ಸರಕಾರಿ ನೌಕರಿಯಲ್ಲಿ ನೇರ ನೇಮಕಾತಿಯಡಿಯಲ್ಲಿ(ರಾಜ್ಯ ಹಾಗೂ ಸ್ಥಳೀಯ ವೃಂದಗಳಲ್ಲಿ) ಗುರುತಿಸಲ್ಪಟ್ಟ ಹುದ್ದೆಗಳು-1,09,416. ಇವುಗಳ ಪೈಕಿ 79,990 ಹುದ್ದೆಗಳನ್ನು ತುಂಬಲಾಗಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News