ಎಪ್ರಿಲ್ 16 ರಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಸಚಿವ ಡಾ. ಶರಣಪ್ರಕಾಶ ಪಾಟೀಲ

Update: 2025-04-13 23:29 IST
ಎಪ್ರಿಲ್ 16 ರಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಸಚಿವ ಡಾ. ಶರಣಪ್ರಕಾಶ ಪಾಟೀಲ
  • whatsapp icon

ಕಲಬುರಗಿ: ಕಲಬುರಗಿ ಜಿಮ್ಸ್ ಆಸ್ಪತ್ರೆಯ 8 ರಿಂದ 10ನೇ ಮಹಡಿಯಲ್ಲಿ 116 ಕೋಟಿ ರೂ. ವೆಚ್ಚದಲ್ಲಿ‌ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಜೊತೆಗೆ 492 ಕೋಟಿ ರೂ. ಮೊತ್ತದ ವಿವಿಧ 9 ಕಾಮಗಾರಿಗಳಿಗೆ ಎಪ್ರಿಲ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ರವಿವಾರ ಕಲಬುರಗಿ ನಗರದ ಕೆ.ಸಿ.ಟಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯಸಭೆ‌ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಗಮಿಸಲಿದ್ದಾರೆ.‌ ಅಂದು ಮೊದಲು ಬೆಳಿಗ್ಗೆ 11.30 ಗಂಟೆಗೆ ಉದ್ಯೋಗ ಮೇಳ, ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಮತ್ತು ವಿವಿಧ ಅಭಿವೃದ್ಸಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸುವ ಕಾರ್ಯಕ್ರಮ ಜರುಗಲಿದೆ ಎಂದ ಅವರು, ಕಿದ್ವಾಯಿ ಆಸ್ಪತ್ರೆಯಲ್ಲಿನ ಅತ್ಯಾಧುನಿಕ ಬ್ರಾಕಿಥೆರಪಿ ಸೇವೆಗೆ ಸಹ ಇದೇ ಸಂದರ್ಭದಲ್ಲಿ ಸಿ.ಎಂ. ಅವರು ಚಾಲನೆ ನೀಡಲಿದ್ದಾರೆ ಎಂದರು.

ಜಿಮ್ಸ್ ಅಸ್ಪತ್ರೆ ಆವರಣದ ಕ್ಯಾನ್ಸರ್ ಆಸ್ಪತ್ರೆ ಪಕ್ಕದಲ್ಲಿ ನಡೆಯುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ 92 ಕೋಟಿ ರೂ. ವೆಚ್ಚದ ತಾಯಿ ಮತ್ತು ಮಕ್ಕಳ ಅಸ್ಪತ್ರೆ, 92 ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ‌ ಮಕ್ಕಳ ಆಸ್ಪತ್ರೆಯ ಶಾಖೆ, 76 ಕೋಟಿ ರೂ.‌ ವೆಚ್ಚದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 200 ಹಾಸಿಗೆಯ ವಿಸ್ತರಣಾ ಕಟ್ಟಡ, 51 ಕೋಟಿ ರೂ. ವೆಚ್ಚದ ಮಲ್ಟಿ ಸ್ಕಿಲ್‌ ಡೆವಲೆಪ್ ಮೆಂಟ್ ಸೆಂಟರ್, 21 ಕೋಟಿ ರೂ. ವೆಚ್ಚದ ಸರ್ಕಾರಿ ಐ.ಟಿ.ಐ(ಪುರುಷ) ಉನ್ನತ್ತಿಕರಣ ಕಾಮಗಾರಿ, 50 ಕೋಟಿ ರೂ. ವೆಚ್ಚದ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, 53 ಕೋಟಿ ರೂ. ವೆಚ್ಚದ ಜಿ.ಟಿ.ಟಿ.ಸಿ. ಕ್ಟಡ ಕಾಮಗಾರಿ, 23 ಕೋಟಿ ರೂ. ವೆಚ್ಚದ ಆರೋಗ್ಯ ಭವನ ಹಾಗೂ 34 ಕೋಟಿ ರೂ. ವೆಚ್ಚದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಆಡಿಟೋರಿಯಂ ಸಭಾಂಗಣ ನಿರ್ಮಾಣ‌ ಸೇರಿದಂತೆ ಒಟ್ಟಾರೆ 492 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುತ್ತಿದೆ ಎಂದರು.

ಇದಲ್ಲದೆ‌ ಮುಂದಿನ ಮೂರು ತಿಂಗಳಲ್ಲಿ ನಿಮ್ಹಾನ್ಸ್ ಶಾಖಾ ಕಚೇರಿ ಹಾಗೂ ಡಯಮಾಬಿಟಾಲೋಜಿ ಸೆಂಟರ್ ಸಹ ಕಲಬುರಗಿಯಲ್ಲಿ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಒಟ್ಟಾರೆಯಾಗಿ ಕಲಬುರಗಿ ಕೇಂದ್ರವನ್ನಾಗಿಸಿ ರಿಜಿನಲ್ ಮೆಡಿಕಲ್ ಹಬ್ ಮಾಡುವ ನಿಟ್ಟಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.

ಶೇ.90ರಷ್ಟು ಹುದ್ದೆ ಭರ್ತಿ:

ಕಲ್ಯಾಣ ಕರ್ನಾಟಕ ಭಾಗದಲ್ಲಿ 5,500 ಪ್ರಾಥಮಿಕ ಶಾಲೆ ಶಿಕ್ಷಕರ ಭರ್ತಿ ಮಾಡಲಾಗುತ್ತಿದೆ.‌ ಇದಾದ ನಂತರ ಮತ್ತೆ 5 ಸಾವಿರ ಶಿಕ್ಷಕರನ್ನು ಭರ್ತಿ ಮಾಡಲಾಗುವುದು. ಇನ್ನು 371 ಮೀಸಲಾತಿಯಂತೆ ಸ್ಥಳೀಯರಿಂದ ಹುದ್ದೆ ಭರ್ತಿ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ 371ಜೆ ಪರಿಣಾಮಕಾರಿ ಅನುಷ್ಠಾನ‌ ಸಚಿವ‌ ಸಂಪುಟ ಉಪ ಸಮಿತಿ ಸಭೆಯಲ್ಲಿ ಲೋಕಲ್ ಕೇಡರ್ ಹುದ್ದೆಗಳನ್ನು ಹಣಕಾಸು ಇಲಾಖೆ ಅನುಮತಿ ಇಲ್ಲದೆ ನೇಮಕ ಮಾಡಿಕೊಳ್ಳಲು ಕಾಯ್ದೆಯಲ್ಲಿಯೆ ಅವಕಾಶ ನೀಡಿದ್ದು, ಅದರಂತೆ ಇಲಾಖೆಗಳು ನೇಮಕಾತಿ ಚುರುಕುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಲ್ಯಾಣ ಕರ್ನಾಟಕ ಭಾಗದ ಶೇ.90ರಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News