ಬೆಂಬಲ ಬೆಲೆ ತೊಗರಿ ಖರೀದಿ; ಏ.25ರ ವರೆಗೆ ನೋಂದಣಿಗೆ ಕಾಲಾವಧಿ ವಿಸ್ತರಣೆ: ಬಿ.ಫೌಝಿಯಾ ತರನ್ನುಮ್

ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದು, ರೈತರ ಹಿತದೃಷ್ಠಿಯಿಂದ ತೊಗರಿ ಖರೀದಿಗೆ ನೊಂದಣಿಯನ್ನು ಏ.25ರ ವರೆಗೆ ಮತ್ತು ಭೌತಿಕ ತೊಗರಿ ಖರೀದಿಗೆ ಮೇ 1ರ ವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ಪ್ರತಿ ಕ್ವಿಂಟಾಲ್ ರೂ.7,550 ನಿಗದಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ 450 ರೂ. ಪ್ರತಿ ಕ್ವಿಂಟಾಲಿಗೆ ಸೇರಿಸಿ ಒಟ್ಟು ಪ್ರತಿ ಕ್ವಿಂಟಾಲಿಗೆ 8,000 ರೂ. ದರ ನಿಗದಿಪಡಿಸಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 189 ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ತೊಗರಿ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯ ರೈತ ಭಾಂದವರು ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಮಾರಾಟಕ್ಕಾಗಿ ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ಹೆಸರು ನೊಂದಾಯಿಸಿಕೊಂಡು ತೊಗರಿ ಉತ್ಪನ್ನವನ್ನು ಮಾರಾಟ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
1.85 ಲಕ್ಷ ತೊಗರಿ ಖರೀದಿ :
ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ 6.27 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 50 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿದೆ. ಏಪ್ರಿಲ್ 1ರ ವರೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಲಬುರಗಿ ಸಂಸ್ಥೆಯು 24,123 ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಯು 10,206 ಸೇರಿ ಒಟ್ಟಾರೆ 34,329 ರೈತರು ತೊಗರಿ ಮಾರಾಟಕ್ಕೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 12,556 ರೈತರಿಂದ 1,85,740 ಕ್ವಿಂಟಲ್ ತೊಗರಿ ರೈತರಿಂದ ಖರೀದಿಸಲಾಗಿದೆ. ಇದರಲ್ಲಿ 1,643 ರೈತರಿಗೆ ಡಿ.ಬಿ.ಟಿ ಮೂಲಕ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.