ಮಸಣ ಕಾರ್ಮಿಕರಿಗೆ, ದೇವದಾಸಿ ಮಹಿಳೆಯರಿಗೆ ಪಿಂಚಣಿಗೆ ಆಗ್ರಹಿಸಿ ಜ.22ಕ್ಕೆ ವಿಧಾನಸೌಧ ಚಲೋ : ಸುಧಾಮ ಧನ್ನಿ

Update: 2025-01-20 21:32 IST
Photo of Sudham Dhanni
  • whatsapp icon

ಕಲಬುರಗಿ : ಮಸಣ ಕಾರ್ಮಿಕರು, ದೇವದಾಸಿ ಮಹಿಳೆಯರ ಗಣತಿ ಮಾಡಿ ಪಿಂಚಣಿ, ನಿರಾಶ್ರಿತ ದಲಿತರಿಗೆ ಮನೆ ನಿವೇಶನ ನೀಡಲು, ಭೂ ಒಡೆತನ ಯೋಜನೆ ಜಾರಿಗಾಗಿ, ದಲಿತ ಬಡ ರೈತರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೊರವೆಲ್ ಮಂಜೂರು ಮಾಡಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ-ಬೆಂಗಳೂರು ನೇತೃತ್ವದಲ್ಲಿ ಜ.22 ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸುಧಾಮ ಧನ್ನಿ ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ದಲಿತರಿಗಾಗಿ ಖರ್ಚು ಮಾಡಿದ ಎಸ್.ಸಿ.ಪಿ./ಟಿ.ಎಸ್.ಪಿ. ಹಣ 2 ಲಕ್ಷ 75 ಸಾವಿರ ಕೋಟಿ ರೂ. ಗಳ ಬಗ್ಗೆ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕು. ಇಷ್ಟು ಹಣ ಖರ್ಚು ಮಾಡಿದರೂ ದಲಿತರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ. ದಲಿತರ ಮಾನವ ಅಭಿವೃದ್ಧಿ ಮೇಲ್ವರ್ಗದವರ ಸಮಾನವಾಗಿದೆಯೇ? ಎಂಬುದರ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಈ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ.

ರಾಜ್ಯದಲ್ಲಿ ಶೇ.24.71 ರಷ್ಟು ದಲಿತರಿದ್ದಾರೆ. ಇವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಬಲರನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಮುಂಬರುವ ಬಜೆಟ್ನಲ್ಲಿ ಆದ್ಯತೆಯ ಮೇರೆಗೆ ದಲಿತರ ಶ್ರೇಯೋಭಿವೃದ್ಧಿಗೆ ಹಣ ಮೀಸಲಿಡಬೇಕೆಂದು ಈ ವಿಧಾನಸೌಧ ಚಲೋ ಮೂಲಕ ಒತ್ತಾಯಿಸಲಾಗುವುದು.

ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯ ಹಣ ದುರ್ಬಳಕೆ ಮಾಡಕೂಡದು. ದಲಿತ ಕುಟುಂಬದ ಫಲಾನುಭವಿಗಳಿಗೆ ನೇರವಾಗಿ ತಲುಪಿಸಬೇಕು, ದಲಿತರಿಗಾಗಿ ಮಸಣ ಭೂಮಿ, ಸಮುದಾಯ ಭವನ ಪ್ರತಿ ಗ್ರಾಮಕ್ಕೆ ಮಂಜೂರು ಮಾಡಬೇಕು. ದಲಿತರ ಮೇಲಿನ ದೌರ್ಜನ್ಯ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯ ಅಸ್ತಿತ್ವಕ್ಕೆ ತರಬೇಕೆಂದು ಈ ವಿಧಾನಸೌಧ ಚಲೋ ಮುಖಾಂತರ ಆಗ್ರಹಿಸಲಾಗುವುದು.

ಜ.22 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಹೊರಡುವ ಈ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ದಲಿತರು- ಪ್ರಗತಿಪರರು, ಮಸಣ ಕಾರ್ಮಿಕರು, ದೇವದಾಸಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಧನ್ನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಮ ಹರವಾಳ, ಪಾಂಡುರಂಗ ಮಾವಿನಕರ, ಪೀರಪ್ಪ ಯಾತನೂರ, ಚಂದಮ್ಮ ಗೋಳಾ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News