ಮಡಿಕೇರಿ: ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಆಸರೆ
ಮಡಿಕೇರಿ: ಧರ್ಮದ ವಿಚಾರದಲ್ಲಿ ಪರಸ್ಪರ ಕಿತ್ತಾಡುತ್ತಾ ಹಗೆ ಸಾಧಿಸುತ್ತಾ ಕೋಮು ಸೌಹಾರ್ದತೆ ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಮಸೀದಿ ಆಡಳಿತ ಮಂಡಳಿಯೊಂದು ಅಯ್ಯಪ್ಪ ವ್ರತಧಾರಿಗಳಿಗೆ ಆಸರೆ ನೀಡುವ ಮೂಲಕ ಸಾಮರಸ್ಯ ಮೆರೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ 5 ಮಂದಿ ಅಯ್ಯಪ್ಪ ವ್ರತಧಾರಿಗಳು ಮೋಟಾರ್ ಬೈಕ್‍ನಲ್ಲಿ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದರು. ರಾತ್ರಿ ವಿರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಎಡತ್ತರ ಗ್ರಾಮ ತಲುಪಿದ ಇವರುಗಳಿಗೆ ಮಳೆಯ ನಡುವೆ ಕಾಡುಗಳಿಂದ ಕೂಡಿದ, ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮುಂದಕ್ಕೆ ಸಾಗಿದಾಗ ಅಲ್ಲಿ ಲಿವಾಉಲ್ ಹುದಾ ಜುಮಾ ಮಸೀದಿ ಹಾಗೂ ಮದರಸ ಕಾಣಸಿಕ್ಕಿದೆ. ಅಲ್ಲಿಗೆ ತೆರಳಿದ ಇವರುಗಳು ತಂಗಲು ಅವಕಾಶ ಕೇಳಿದ್ದಾರೆ.
ಈ ಸಂದರ್ಭ ಮಸೀದಿಯ ಅಧ್ಯಕ್ಷ ಉಸ್ಮಾನ್, ಖತೀಬ್ ಖಮರುದ್ದೀನ್ ಅನ್ವಾರಿ ಹಾಗೂ ಮಸೀದಿಯ ಪದಾಧಿಕಾರಿಗಳು ವ್ರತಧಾರಿಗಳ ಕೋರಿಕೆಗೆ ಸ್ಪಂದಿಸಿ ಎಲ್ಲಾ ಸೌಕರ್ಯವನ್ನು ಒದಗಿಸಿ ಮಸೀದಿ ಬಳಿಯಲ್ಲೇ ಪೂಜೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ರಾತ್ರಿ ತಂಗಲು ಮದರಸದಲ್ಲಿ ಅವಕಾಶ ಕಲ್ಪಿಸಿದ್ದಾರೆ.
ಬಳಿಕ ಅಲ್ಲಿಯೇ ತಂಗಿದ್ದ ವ್ರತಧಾರಗಳಾದ ಕಲಮೇಶ್ ಗೌರಿ, ಭೀಮಪ್ಪ ಸನಾದಿ, ಶಿವಾನಂದ ನವೇದಿ, ಗಂಗಾಧರ್ ಬಾಡಿಗೆ, ಸಿದ್ದರೋದ್ ಸನಾದಿ ಇವರುಗಳು ಮುಂಜಾನೆ ನಿತ್ಯದ ಪೂಜೆ ನೆರವೇರಿಸಿ ಮಸೀದಿಯವರಿಗೆ ಧನ್ಯವಾದ ಸಲ್ಲಿಸಿ ಶಬರಿಮಲೆಯತ್ತ ಸಾಗಿದರು.
ಎಡತ್ತರ ಮಸೀದಿಯಲ್ಲಿ ಯಾವುದೇ ಭಕ್ತರಿಗೆ ಜಾತಿ ಧರ್ಮದ ಭೇದವಿಲ್ಲದೆ ಇಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದೇವೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇದೆ. ಯಾತ್ರೆಗೆ ತೆರಳುವವರು ರಾತ್ರಿ ವೇಳೆ ಇಲ್ಲಿಯೇ ಉಳಿದುಕೊಂಡು ಬೆಳಿಗ್ಗೆ ಯಾತ್ರೆ ಕೈಗೊಳ್ಳಬಹುದು. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಇಲ್ಲಿ ಕಲ್ಪಿಸಿಕೊಡುತ್ತೇವೆ. ಎಲ್ಲಾ ದೇವರು ಒಂದೇ, ನಮಗೂ ಕೂಡ ನೀವು ಪ್ರಾರ್ಥಿಸಿ ಎಂದು ಎಡತ್ತರ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಹೇಳಿದರು.
ಈ ಸಂದರ್ಭ ತಿತಿಮತಿ ಮಸೀದಿಯ ಕಾರ್ಯದರ್ಶಿ ರಫೀಕ್ ದಾರಿಮಿ ಹಾಗೂ ಅಶ್ರಫ್ ಇದ್ದರು.