ಸೋಮವಾರಪೇಟೆ : ಸರ್ವೇಯರ್ ಲೋಕಾಯುಕ್ತ ಬಲೆಗೆ
Update: 2024-02-20 16:57 GMT
ಮಡಿಕೇರಿ: ಲಂಚ ಸ್ವೀಕಾರದ ಆರೋಪದಡಿ ಸೋಮವಾರಪೇಟೆ ಸರ್ವೇ ಇಲಾಖೆಯ ಸರ್ವೇಯರ್ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಂಚ ಪಡೆದ ಆರೋಪ ಎದುರಿಸುತ್ತಿರುವ ಸರ್ವೇಯರ್ ಮಾದೇಗೌಡ ಎಂಬುವವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ಅವರ ನೇತೃತ್ವದ ತಂಡ ಸರ್ವೇ ಇಲಾಖೆ ಕಚೇರಿಗೆ ದಾಳಿ ನಡೆಸಿತು. ಈ ಸಂದರ್ಭ ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಮಾದೇಗೌಡ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದರು ಎನ್ನಲಾಗಿದೆ.
ಶನಿವಾರಸಂತೆ ಹೆಮ್ಮನೆ ಜಮೀನಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿ ಅಕ್ರಂ ಪಾಷ ಎಂಬುವವರಿಂದ ರೂ.5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ರೂ.1 ಸಾವಿರ ಮೊದಲೇ ಪಡೆಯಲಾಗಿತ್ತು, ಉಳಿದ 4 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತರು ದಾಳಿ ನಡೆಸಿದರು ಎಂದು ಹೇಳಲಾಗಿದೆ.