ಬಿಜೆಪಿಯವರು ಟ್ವೀಟ್ ಮಾಡುವುದನ್ನು ಬಿಟ್ಟು ಚರ್ಚೆಗೆ ಬರಲಿ : ಸಚಿವ ರಾಮಲಿಂಗಾರೆಡ್ಡಿ

Update: 2024-09-30 15:11 GMT

ಕೊಪ್ಪಳ: ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಗೆ ರಾಜ್ಯ ಸರಕಾರದಿಂದ 1,600 ಕೋಟಿ ರೂ. ಬರಬೇಕಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳಿಗೆ ಸರಕಾರದಿಂದ 7,625 ಕೋಟಿ ರೂ.ಹಣ ಬಾಕಿ ಬರಬೇಕಿದೆ ಎಂದು ಬಿಜೆಪಿಯವರು ಟ್ವೀಟ್ ಮಾಡಿದ್ದಾರೆ. ಅವರಿಗೆ ಏನೂ ಕೆಲಸವಿಲ್ಲ, ತಿಳುವಳಿಕೆಯೂ ಕಡಿಮೆ. 2023ರಲ್ಲಿ ನಮಗೆ ಅಧಿಕಾರದಿಂದ ಕೆಳಗಿಳಿಯುವ ವೇಳೆ ಬಿಜೆಪಿಯವರು 5,900 ಕೋಟಿ ರೂ.ಸಾಲ ಇಟ್ಟು ಹೋಗಿದ್ದರು ಎಂದು ತಿಳಿಸಿದರು.

ಅಂದು ಬಿಎಂಟಿಸಿ ಹೊರತುಪಡಿಸಿ ಒಂದು ಬಸ್ ಖರೀದಿ ಮಾಡಿರಲಿಲ್ಲ. ಆದರೆ, ನಮ್ಮ ಸರಕಾರ ಬಂದ ಮೇಲೆ 6,300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ. 9ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮಾಡಬೇಕಾದ ಕೆಲಸ ನಾವು ಮಾಡುತ್ತೇವೆ. ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಪ್ರತಿಪಕ್ಷ ಬಿಜೆಪಿಯವರು ಟ್ವಿಟ್ ಮಾಡುವುದನ್ನು ಬಿಟ್ಟು ಎದುರು ಬಂದು ಚರ್ಚೆ ಮಾಡಲಿ. ‘ಶಕ್ತಿ ಯೋಜನೆ’ಯಿಂದ ಇಲಾಖೆ ದಿವಾಳಿಯಾಗಲಿದೆ ಎಂದು ಹೇಳಿದ್ದರು. ಆದರೆ, ಇಂದು ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ. ಬಿಜೆಪಿಯವರ ರೀತಿ ನಾವು ಬೇಕಾಬಿಟ್ಟಿ ಮಾತನ್ನಾಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News