ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಜಾಮೀನು
ಹೊಸದಿಲ್ಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 1 ಲಕ್ಷ ರೂ. ಬಾಂಡ್‌ನ ಮೇಲೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಕೇಜ್ರಿವಾಲ್ ಅವರ ಜಾಮೀನು ಆದೇಶಕ್ಕೆ 48 ಗಂಟೆಗಳ ತಡೆ ನೀಡುವಂತೆ ಜಾರಿ ನಿರ್ದೇಶನಾಲಯ (ಈಡಿ) ಮಾಡಿದ ಮನವಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತು.
ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 21ರಿಂದ ಕಾರಾಗೃಹದಲ್ಲಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭ ತನ್ನ ಪಕ್ಷದ ಪರ ಪ್ರಚಾರದಲ್ಲಿ ತೊಡಗಲು ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ಕಳೆದ ತಿಂಗಳು ಅಲ್ಪಾವಧಿಗೆ ಜಾಮೀನು ನೀಡಿತ್ತು.
ಪ್ರಾಸಿಕ್ಯೂಷನ್ ಹಾಗೂ ಪ್ರತಿವಾದಿ ವಕೀಲರ ವಾದ, ಪ್ರತಿವಾದವನ್ನು ಆಲಿಸಿದ ಬಳಿಕ ವಿಶೇಷ ನ್ಯಾಯಾಧೀಶರಾದ ನಿಯಾಯ್ ಬಿಂದು ಅವರು ಈ ಆದೇಶ ನೀಡಿದರು. ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಬುಧವಾರ ಜುಲೈ 15ರ ವರೆಗೆ ವಿಸ್ತರಿಸಲಾಗಿತ್ತು.
ದಿಲ್ಲಿ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಆಪ್, ‘‘ಸತ್ಯಕ್ಕೆ ತೊಂದರೆ ನೀಡಬಹುದು, ಸೋಲಿಸಲಾಗುವುದಿಲ್ಲ’’ ಎಂದು ಹೇಳಿದೆ. ‘‘ಸತ್ಯಮೇವ ಜಯತೇ’’ ಎಂದು ಆಪ್ ನಾಯಕಿ ಆತಿಶಿ ಪ್ರತಿಕ್ರಿಯಿಸಿದ್ದಾರೆ.
‘‘ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಕೇಜ್ರಿವಾಲ್ ಅವರಿಗೆ ಜಾಮೀನು ದೊರಕಿದೆ. ಸತ್ಯ ಗೆದ್ದಿದೆ’’ ಎಂದು ಪಂಜಾಬ್ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಭಗವಂತ್ ಮಾನ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.