ಕುಮಾರಸ್ವಾಮಿ ಗೌರವಕ್ಕೆ ತಕ್ಕಂತೆ ಮಾತನಾಡಿದರೆ ಪ್ರತಿಕ್ರಿಯೆ ನೀಡಲು ಹೆಮ್ಮೆ ಎನಿಸುತ್ತದೆ : ಚಲುವರಾಯಸ್ವಾಮಿ

Update: 2025-01-05 16:43 GMT

ಎನ್‌.ಚಲುವರಾಯಸ್ವಾಮಿ

ಮಂಡ್ಯ : ಜಿಲ್ಲೆಯ ಲೋಕಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಹೆಮ್ಮೆ ಎನಿಸುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದ್ದಾರೆ.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ರವಿವಾರ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ ಮಾಡಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಉದಾಸೀನ ಹೇಳಿಕೆಗಳ ಮೂಲಕ ಸರಕಾರ ಹಾಗೂ ಇತರರನ್ನು ಟೀಕಿಸುವುದೇ ನಾಯಕತ್ವ ಎನಿಸಿಕೊಳ್ಳುವಂತೆ ಮಾತನಾಡಬಾರದು ತಿರುಗೇಟು ನೀಡಿದರು.

ಬಾಯಿ ಚಪಲಕ್ಕೆ ಮಾತನಾಡುವವರಿಗೆ ಉತ್ತರ ನೀಡಬೇಕು ಎಂದೆನಿಸುವುದಿಲ್ಲ. ಅಂಬೇಡ್ಕ‌ರ್ ಅವರು ನೀಡಿದ ಸಂವಿಧಾನದಡಿಯಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರ ನಡೆಸಲು ಜನರ ತೀರ್ಮಾನವೇ ಅಂತಿಮ. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವು ರಾಜ್ಯ ಸರಕಾರದ ಮೇಲಿನ ವಿಶ್ವಾಸವೋ ಅಥವಾ ಅವರ ಬಾಯಿ ಚಪಲವೋ ತಿಳಿಸಬೇಕು ಎಂದು ಅವರು ಕೇಳಿದರು.

ನಾನು ಲೋಕಸಭಾ ಸದಸ್ಯನಾಗಿದ್ದ ವೇಳೆ ಹಿಂದೆ ಲೋಕಸಭಾ ಸದಸ್ಯರು ಬಳಸುತ್ತಿದ್ದ ಕಾರನ್ನು ಬಳಸಿದ್ದೆ. ಈ ಹಿಂದಿನ ಸರಕಾರದ ಮಂತ್ರಿಗಳು ಬಳಸುತ್ತಿದ್ದ ಕಾರುಗಳನ್ನೇ ಬಳಸುತ್ತಿದ್ದೇವೆ. ಹೊಸ ಕಾರು ಬರುವವರೆಗೂ ಸುಮಲತ ಅವರಿಗೆ ನೀಡಿದ್ದ ಕಾರನ್ನು ಬಳಸಬಹುದಿತ್ತು. ಮಾಜಿ ಸಂಸದೆ ಸುಮಲತ ಬಳಸುವ ಕಾರು ಬಳಸುವುದಿಲ್ಲ ಎಂದಿರುವುದರ ಕಾರಣ ತಿಳಿದಿಲ್ಲ ಎಂದು ಅವರು ಪ್ರತಿಕ್ರಿಯಿಸದರು

ಸತ್ಯಹರಿಶ್ಚಂದ್ರನ ನಂತರ ಇತರರಿಂದ ದುಡ್ಡು, ಲಂಚ ಪಡೆಯದೇ ಇರುವವರು, ಭೂಮಿಯ ಮೇಲೆ ಯಾರದ್ದೂ ಸಹಾಯ ಪಡೆಯದೇ ಇರುವವರು, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾರಾದರೂ ಸತ್ಯವಂತ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಚೆಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಅಭಿವೃದ್ಧಿಪಡಿಸಿದರೆ ಹೊಗಳಿ ಸನ್ಮಾನಿಸುವೆ :

ಕುಮಾರಸ್ವಾಮಿ ಅವರಿಗೆ ಸಾಧ್ಯವಾದಲ್ಲಿ ಜಿಲ್ಲೆಯಲ್ಲಿ ಪಾಂಡವಪುರದಿಂದ ಚನ್ನರಾಯಪಟ್ಟಣ ರಸ್ತೆ, ಮಂಡ್ಯದಿಂದ ಪ್ರವಾಸಿ ತಾಣ ಮೇಲುಕೋಟೆ ರಸ್ತೆ, ಮಂಡ್ಯದಿಂದ ನಾಗಮಂಗಲ ಮೂಲಕ ಕದಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಬದಲಿಸುವರೋ, ವಿಶೇಷ ಅನುದಾನ ತರುವರೆ? ಅಭಿವೃದ್ಧಿ ಮಾಡಿದರೆ ಕುಮಾರಸ್ವಾಮಿ ಅವರನ್ನು ಹೊಗಳಿ, ಸನ್ಮಾನ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಮಂಡ್ಯಕ್ಕೆ ಕೃಷಿ ವಿವಿ, ನೂತನ ಮೈಷುಗರ್ ಕಾರ್ಖಾನೆ ಘೋಷಣೆಯನ್ನು ಸಂಪುಟದ ಮುಂದೆ ತರುತಿದ್ದು ಇಂತಹ ಯಾವುದಾದರು ಅಭಿವೃದ್ಧಿಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಲಿಲ್ಲ. ಈಗ ಕೇಂದ್ರದ ಮಂತ್ರಿಯಾಗಿದ್ದು, ಇಂತಹ ಹತ್ತು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಗೆ ತರಬಹುದು, ಮಾಡಿದರೆ ಅವರನ್ನು ಅಭಿನಂದಿಸುತ್ತೇನೆ ಎಂದರು.

ಕಳೆದ 10 ವರ್ಷಗಳಿಂದ ಕೇಂದ್ರ ಸರಕಾರದ ಜನವಿರೋಧಿ :

ನೀತಿಯಿಂದಲೇ ಹಲವು ವಸ್ತುಗಳ, ದಿನ ಬಳಕೆಯ ವಸ್ತುಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಾಗಿದೆ. 7ನೇ ವೇತನ ಆಯೋಗ ಜಾರಿಯಾಗಿದೆ ಹಾಗೂ ನೆರೆ ರಾಜ್ಯಗಳಲ್ಲಿ ಬಸ್‌ ದರ ನಮಗಿಂತಲೂ ಹೆಚ್ಚಿದೆ. ಅಲ್ಲದೇ ಕೆಎಸ್‌ಆರ್‌ಟಿಸಿ ಸಂಸ್ಥೆಯ ದರ ಪರಿಷ್ಕರಣೆ ಮಾಡಿ 15 ವರ್ಷಗಳಾಗಿವೆ. ಇಂದಿಗೂ ಶೇ.15ರಷ್ಟು ಹೆಚ್ಚಳ ಮಾಡಿದರು ನೆರ ರಾಜ್ಯಗಳಿಗಿಂತಲೂ ಕಡಿಮೆ ಇದೆ ಎಂದು ಬಸ್ ಪ್ರಯಾಣದರ ಹೆಚ್ಚಳವನ್ನು ಚೆಲುವರಾಯಸ್ವಾಮಿ ಸಮರ್ಥಿಸಿಕೊಂಡರು.

ಶಾಸಕ ಪಿ.ರವಿಕುಮಾರ್ ಗಣಿಗ, ಇತರ ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News