ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಮಂಡ್ಯ ಬಂದ್
ಮಂಡ್ಯ: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ದಲಿತ, ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಮಂಡ್ಯ ಬಂದ್ ಬಹುತೇಕ ಯಶಸ್ವಿಯಾಗಿದೆ.
ಬಂದ್ ಭಾಗವಾಗಿ ಪ್ರಗತಿಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಅಮಿತ್ ಶಾ, ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಮಿತ್ ಶಾ ರಾಜೀನಾಮೆ ನೀಡುವಂತೆ ಅವರು ಆಗ್ರಹಪಡಿಸಿದರು.
ಬೆಳಗ್ಗೆಯಿಂದಲೇ ವಿವಿ ರಸ್ತೆ, ನೂರಡಿ ರಸ್ತೆ, ಗುತ್ತಲು ರಸ್ತೆ, ಹೊಳಲು ವೃತ್ತ, ಪೇಟೆ ಬೀದಿ, ಬೆಂಗಳೂರು ಮೈಸೂರು ಹೆದ್ದಾರಿ ಬದಿಯ ಬಹುತೇಕ ಅಂಗಡಿಗಳನ್ನು ಬಂದ್ ಮಾಡಿ ಬಂದ್‍ಗೆ ಬೆಂಬಲ ನೀಡಲಾಯಿತು. ಹೋರಾಟಗಾರರ ಬೈಕ್ ರ್ಯಾಲಿ ವೇಳೆ ಇತರೆ ಅಂಗಡಿ ಮಾಲಕರು ಅಂಗಡಿಗಳನ್ನು ಬಂದ್ ಮಾಡಿದರು.
ಬಸ್, ಆಟೋ, ಇತರೆ ವಾಹನ ಸಂಚಾರ ಮಾಮೂಲಿಯಾಗಿತ್ತು. ಚಿತ್ರಮಂದಿರಗಳಲ್ಲಿ ಮಧ್ಯಾಹ್ನದ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಔಷಧಿ ಅಂಗಡಿಗಳು ಸೇರಿದಂತೆ ಅತ್ಯಾವಶ್ಯಕ ಪದಾರ್ಥಗಳ ಅಂಗಡಿಗಳಲ್ಲಿ ಎಂದಿನಿಂತೆ ವಹಿವಾಟು ನಡೆಯಿತು.
ಬೃಹತ್ ಬೈಕ್ ರ್ಯಾಲಿ
ಬಂದ್ ಭಾಗವಾಗಿ ಪ್ರಗತಿಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಬೃಹತ್ ಬೈಕ್ ರ್ಯಾಲಿ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಜಯ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕೇಂದ್ರ ಸಚಿವ ಅಮಿತ್ ಶಾ ಕೂಡಲೇ ಕ್ಷಮೆ ಕೇಳಬೇಕು ಮತ್ತು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಶಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಂಬೇಡ್ಕರ್ ಸಂವಿಧಾನದ ಬಗ್ಗೆ ಅವಹೇಳನಕಾರಿಯಾದ ನಡವಳಿಕೆಯನ್ನು ಪ್ರದರ್ಶನ ಮಾಡಲಾಗುತ್ತಿದೆ. ಸಂವಿಧಾನದ ಜಾಗದಲ್ಲಿ ಮನುಸ್ಮøತಿಯನ್ನು ಪ್ರತಿಷ್ಠಾಪಿಸುವ ಹುನ್ನಾರ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಜಾಪ್ರಭುತ್ವದ ತಳಹದಿಯಾದ ಅಂಬೇಡ್ಕರ್ ಸಂವಿಧಾನವನ್ನು ದುರ್ಬಲಗೊಳಿಸುವ ಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಬಂದ್, ರ್ಯಾಲಿ ಮೂಲಕ ರವಾನೆ ಮಾಡಿದ್ದೇವೆ. ಶಾ ರಾಜೀನಾಮೆ ನೀಡಲೇಬೇಕು. ಇದೇ ರೀತಿ ನಾಲಗೆಹರಿಯಬಿಟ್ಟರೆ ಉಗ್ರವಾದ ಪ್ರತಿಭಟನೆ ಮೂಲಕ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬಂದ್ ಮತ್ತು ರ್ಯಾಲಿ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಸಂಘಟನೆಗಳ ಮುಖಂಡರಾದ ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಜೆ.ರಾಮಯ್ಯ, ಎಂ.ಕೃಷ್ಣಮೂರ್ತಿ, ಡಿ.ಸಿ.ಮಹೇಂದ್ರ, ಸುನಂದಾ ಜಯರಾಂ, ಎಂ.ಬಿ.ನಾಗಣ್ಣಗೌಡ, ಎಚ್.ಡಿ.ಜಯರಾಂ, ಲಕ್ಷ್ಮಣ್ ಚೀರನಹಳ್ಳಿ, ಎಂ.ವಿ.ಕೃಷ್ಣ, ಗಂಗರಾಜು ಹನಕೆರೆ, ಪ್ರೊ.ರಾಜಶೇಖರನ್, ವೆಂಕಟಗಿರಿಯಯ್ಯ, ಶಿವಶಂಕರ್, ಅಂದಾನಿ ಸೋಮನಹಳ್ಳಿ, ಹಲ್ಲೆಗೆರೆ ಶಿವರಾಂ, ಎಲ್.ಸಂದೇಶ್, ನರಸಿಂಹಮೂರ್ತಿ, ಮುಕ್ತಿಯಾರ್ ಅಹಮದ್, ನಂಜುಂಡ ಮೌರ್ಯ, ಮುಂತಾದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.