ಪತ್ರಿಕೋದ್ಯಮ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ : ದಿನೇಶ್ ಅಮೀನ್‍ಮಟ್ಟು ವಿಷಾದ

Update: 2025-01-10 16:53 GMT

ಮಂಡ್ಯ : ತಂತ್ರಜ್ಞಾನದ ಬೆಳವಣಿಗೆಯಿಂದ ಪತ್ರಿಕೋದ್ಯಮದಲ್ಲಿ ದೊಡ್ಡ ಬದಲಾವಣೆ ಆಗಿದೆ. ಆದರೆ, ಪ್ರಸ್ತುತ ಪತ್ರಿಕೋದ್ಯಮ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಬದ್ದತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ವಿಷಾದಿಸಿದ್ದಾರೆ.

ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ವತಿಯಿಂದ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಜನತೆ ಮತ್ತು ಪತ್ರಿಕೋದ್ಯಮ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜನತೆ ಪತ್ರಕರ್ತರ ಕಡೆ ಬೆರಳು ಮಾಡಿ ತೋರಿಸುವ ಪರಿಸ್ಥಿತಿ ಬಂದಿದೆ ಎಂದರು.

ಇಂದು ಬೀದಿಯಲ್ಲಿ ನಿಂತು ಪತ್ರಕರ್ತರ ಬಗ್ಗೆ, ಪತ್ರಿಕೆಗಳ ಬಗ್ಗೆ, ಟಿವಿ ಚಾನಲ್‍ಗಳ ಕುರಿತು ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರೆ ಚಾನಲ್‍ಗಳ ಬಗ್ಗೆ ಹೆಚ್ಚಾಗಿ, ಪತ್ರಿಕೆಗಳ ಬಗ್ಗೆ ಕಡಿಮೆ ಬೈಯ್ತಾರೆ ಅಷ್ಟೆ. ಪತ್ರರ್ಕನಾಗಿ ಇದನ್ನು ಹೇಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತರಿಗೆ ತಂತ್ರಜ್ಞಾನದ ಬೆಳವಣಿಗೆ ದೊಡ್ಡ ನೆರವನ್ನು ನೀಡಿದೆ. ಇವತ್ತು ಮೊಬೈಲ್‍ನಲ್ಲೇ ಪತ್ರಿಕೆ ಲೇಔಟ್ ಮಾಡಿ, ಪ್ರಿಂಟ್‍ಗೆ ಕೊಡುವಷ್ಟು ತಂತ್ರಜ್ಞಾನ ಬೆಳೆದಿದೆ. ಪತ್ರಕರ್ತರು ಅಕ್ಷರ ಬ್ರಹ್ಮರಲ್ಲ. ಇತಿಮಿತಿ ಅರಿತು ಕೆಲಸ ಮಾಡಬೇಕು. ಸಾಮಾಜಿಕ ಬದ್ದತೆ ಇರಬೇಕು ಎಂದು ಅವರು ಸಲಹೆ ನೀಡಿದರು.

ಗಾಂಧೀಜಿ, ಅಂಬೇಡ್ಕರ್, ತಿಲಕ್, ಗೋಕಲೆಯಂತಹ ಸ್ವಾತಂತ್ರ್ಯ ಹೋರಾಟಗಾರರು ಪತ್ರಿಕೋದ್ಯಮವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದರು ಎಂದು ಪತ್ರಿಕೆಗಳು ಬೆಳೆದು ಬಂದ ಹಾದಿಯನ್ನು ವಿವರಿಸಿದ ಅವರು, ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮಗಳ ಮಹತ್ವವನ್ನು ತಿಳಿಸಿದರು.

ಕೃಷಿ ಕ್ಷೇತ್ರದಷ್ಟೇ ಮಹತ್ವವಾದದ್ದು ಮಾಧ್ಯಮ ಕ್ಷೇತ್ರವಾಗಿದೆ. ಆದರೆ, ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಎರಡು ವಸ್ತುಗಳಿದ್ದರೆ ಒಂದು ಪತ್ರಿಕೆ, ಮತ್ತೊಂದು ರೈತ ಬೆಳೆದ ಬೆಳೆ. ಪತ್ರಕರ್ತರಿಗೆ ಸವಲತ್ತುಗಳಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಜನತೆ ಮೇಲಿದೆ. ಇಂದು ಪತ್ರಿಕಾರಂಗದಲ್ಲಿ ಅನೇಕ ಯುವಜನರು ಗುರುತಿಸಿಕೊಂಡಿದ್ದಾರೆ. ಅನೇಕ ಹಿರಿಯರು ಪತ್ರಿಕಾರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹ ಹಿರಿಯರು ಯವಜನರಿಗೆ ರೋಲ್ ಮಾಡೆಲ್ ಆಗಬೇಕು ಎಂದು ಅವರು ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಧರಣೇಶ್ ಬೂಕನಕೆರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಹಾವಳಿ ಹೆಚ್ಚಾಗಿದೆ. ಇವುಗಳಿಗೆ ಲಂಗು ಲಗಾಮು ಇಲ್ಲ. ವಾಸ್ತವ ಏನು ಎಂಬುದರ ಅರಿವಿಲ್ಲ. ಇವುಗಳ ನಡುವೆ ಪತ್ರಕರ್ತನಾದವನಿಗೆ ದೊಡ್ಡ ಜವಾಬ್ಧಾರಿ ಇದೆ ಪ್ರತಿಪಾದಿಸಿದರು.

ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಸಂಸ್ಥಾಪಕ ಮತ್ತು ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ ಮಾತನಾಡಿ, ಬೇಸಾಯ ಬಿಟ್ಟರೆ ಪತ್ರಿಕೋದ್ಯಮ ಶ್ರೇಷ್ಠವಾದ ವೃತ್ತಿಯಾಗಿದೆ. ಆದರೆ, ನಂಬಿಕೆಗೆ ಅರ್ಹವಾದ ಪತ್ರಿಕೋದ್ಯಮ ಕವಲು ದಾರಿಯಲ್ಲಿ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಮಹಾರಾಣಿ ಕಾಲೇಜು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಬೋಧಕ ಡಾ.ಎಂ.ದಿಲೀಪ್ ನರಸಯ್ಯ, ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ದೇಶಹಳ್ಳಿ ಮೋಹನ್‍ಕುಮಾರ್, ಹಿರಿಯ ಪತ್ರಕರ್ತ ಕಬ್ಬನಹಳ್ಳಿ ಶಂಭು, ಇತರ ಗಣ್ಯರು ಉಪಸ್ಥಿತರಿದ್ದರು.

“ಮಂಡ್ಯದಲ್ಲಿ ಇತ್ತೀಚಿಗೆ ಸಾಮರಸ್ಯಗಳಿಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿವೆ. ಇದನ್ನು ಮಾಧ್ಯಮದವರು ಗಂಭೀರವಾಗಿ ಪರಿಗಣಿಸಬೆಕು. ಕೆ.ವಿ.ಶಂಕರಗೌಡ, ಬೆಸಗರಹಳ್ಳಿ ರಾಮಣ್ಣರಂತಹ ಹುಟ್ಟಿದ ನೆಲದಲ್ಲಿ ಇಂತಹ ಬೆಳವಣಿಗೆಗಳು ಮುಂದುವರಿಯದಂತೆ ಇಂತಹ ಬೆಳವಣಿಗೆಗಳು ಮುಂದುವರಿಯದಂತೆ ಜಾಗ್ರತೆವಹಿಸಬೇಕಾಗಿದೆ.”

-ಧರಣೇಶ್ ಬೂಕನಕೆರೆ, ಹಿರಿಯ ಪತ್ರಕರ್ತ

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News