ಮಂಗಳೂರು: ನೂತನ ಡಿಸಿಗೆ ಸ್ವಾಗತ; ನಿರ್ಗಮಿತ ಡಿಸಿಗೆ ಬೀಳ್ಕೊಡುಗೆ

Update: 2023-06-21 07:27 GMT

ಮಂಗಳೂರು, ಜೂ.20: ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮುಲ್ಲೈ ಮುಹಿಲನ್ ಅವರನ್ನು ಸ್ವಾಗತಿಸುವ ಹಾಗೂ ನಿರ್ಗಮಿತ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರನ್ನು ಬೀಳ್ಕೊಡುವ ಸಮಾರಂಭ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ನೂತನ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿ, ನಿರ್ಗಮಿತ ಜಿಲ್ಲಾಧಿಕಾರಿ ಬಗ್ಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಏಳು ತಿಂಗಳ ಅವಧಿಯಲ್ಲಿ ನೇರ ನಡೆನುಡಿ, ಪಾರದರ್ಶಕ ಕರ್ತವ್ಯ ಹಾಗೂ ಪಾದರಸದಂತೆ ಓಡಾಡಿಕೊಂಡು ತುರ್ತು ಕರ್ತವ್ಯಗಳನ್ನು ನಿರ್ವಹಿಸಿದ್ದ ರವಿಕುಮಾರ್ ಎಂ.ಆರ್. ಅಧಿಕಾರಿಗಳಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು ಎಂದರು.

ಸುಳ್ಯ, ಪುತ್ತೂರು, ಮೂಡಬಿದ್ರೆಯ ಕುಗ್ರಾಮಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ತುರ್ತು ಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರ ಅಗತ್ಯವನ್ನು ಅರಿತುಕೊಂಡು ಅವರ ಕಡತಗಳನ್ನು ವಿಲೇ ಮಾಡುವ ಪ್ರಯತ್ನ ನಿರ್ವಹಿಸಿದ್ದೇನೆ. ಕಡಲತೀರದ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯ ಜನರು ದೇವ- ದೈವಗಳ ಬಗ್ಗೆ ಅಪಾರ ನಂಬಿಕೆ ಉಳ್ಳವರು. ಇಂತಹ ಸಂಪ್ರದಾಯ, ಸಂಸ್ಕೃತಿ ಕಲೆ ಬೇರೆ ಜಿಲ್ಲೆಗಳಲ್ಲಿ ನೋಡಲು ಸಾಧ್ಯ ಇಲ್ಲ ಎಂದು ನಿರ್ಗಮಿತ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮೆಚ್ಚುಗೆ ವ್ಯಕ್ತಪಡಿಸಿದರು.




ತಡರಾತ್ರಿ ಹೊತ್ತಿನಲ್ಲೂ ಕೆಲವೊಂದು ಜಿಲ್ಲೆಯ ಇತರ ಅಧಿಕಾರಿಗಳ ಜತೆ ಚರ್ಚಿಸಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಆಡಳಿತ ಯಂತ್ರ ತನಗೆ ಸಹಕಾರ ನೀಡಿದ್ದರಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದುಹೇಳುವ ಮೂಲಕ ಅಧಿಕಾರಿ- ಸಿಬಂದಿ ವರ್ಗವನ್ನು ನೆನಪಿಸಿಕೊಂಡ ಅವರು, ಸಾರ್ವಜನಿಕರನ್ನು ಅಧಿಕಾರಿ ವರ್ಗ ಕೂಡಾ ತಮ್ಮ ಬಂಧು ಬಾಂಧವರೆಂದುಕೊಂಡಾಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಮಂಗಳೂರು ಸಹಾಯಕ ಆಯುಕ್ತ ರಾಜು, ಮಂಗಳೂರು ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ರವಿಕುಮಾರ್ ಉಪಸ್ಥಿತರಿದ್ದರು.

ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಣೆ


ಅಧಿಕಾರಿಯಾಗಿ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕುದಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧನಾಗಿದ್ದು, ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿ ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರ ನೀಡಬೇಕು ಎಂದು ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವಿನಂತಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News