ಮಣಿಪಾಲ| ಅಖಿಲ ಭಾರತ ಅಂತರ ವಿವಿ ಮಹಿಳಾ ಟೂರ್ನಿ; ಉಸ್ಮಾನಿಯಾ ವಿವಿ ರಾಷ್ಟ್ರೀಯ ಮಹಿಳಾ ಟೆನಿಸ್ ಚಾಂಪಿಯನ್

Update: 2024-12-16 15:58 GMT

ಉಡುಪಿ: ದಕ್ಷಿಣ ವಲಯ ಚಾಂಪಿಯನ್ ಹೈದರಾಬಾದ್‌ನ ಉಸ್ಮಾನಿಯಾ ವಿವಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಇಂದು ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಟೆನಿಸ್ ಟೂರ್ನಿಯನ್ನು ಗೆದ್ದುಕೊಳ್ಳುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಕಿರೀಟವನ್ನೂ ಮುಡಿಗೇರಿಸಿಕೊಂಡಿತು.

ಮರಿನಾ ಕ್ರೀಡಾ ಸಂಕೀರ್ಣದ ಸಿಂಥೆಟಿಕ್ ಕೋರ್ಟ್‌ನಲ್ಲಿ ಇಂದು ನಡೆದ ಫೈನಲ್‌ನಲ್ಲಿ ಉಸ್ಮಾನಿಯಾ ವಿವಿ, ತನ್ನ ಸಾಂಪ್ರದಾಯಿಕ ಎದುರಾಳಿ ಮದರಾಸು ವಿವಿಯನ್ನು 2-1ರ ಅಂತರದಿಂದ ಪರಾಭವಗೊಳಿಸಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿತು.

ಡಿ.10ರಂದು ಇಲ್ಲೇ ನಡೆದ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿಯ ಫೈನಲ್‌ನಲ್ಲೂ ಉಸ್ಮಾನಿಯಾ ವಿವಿ, ಮದರಾಸು ವಿವಿಯನ್ನು ಸೋಲಿಸಿತ್ತು. ಈ ಮೂಲಕ ಸತತ ಎರಡನೇ ಬಾರಿ ಮದರಾಸು ಮಹಿಳೆಯರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಇಂದು ನಡೆದ ಫೈನಲ್ ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ ಮದರಾಸು ವಿವಿಯ ಲಕ್ಷ್ಮೀ ಪ್ರಭಾ ಅವರು ಉಸ್ಮಾನಿಯಾ ವಿವಿಯ ಎ.ಶ್ರೀಮಾಯಾ ವಿರುದ್ಧ ಜಯ ಪಡೆದು ತಂಡಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟಾಗ, ಕಳೆದ ವಾರದ ಸೋಲಿಗೆ ಮುಯ್ಯಿ ತೀರಿಸುವ ಭರವಸೆ ಮೂಡಿತ್ತು.

ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಉಸ್ಮಾನಿಯಾ ವಿವಿಯ ಸಮಾ ಚಿವಿಕಾ ಅವರು ಮದರಾಸಿನ ಅಭಿನಯರನ್ನು ಹಿಮ್ಮೆಟ್ಟಿ ಸುವ ಮೂಲಕ 1-1ರ ಸಮಬಲಕ್ಕೆ ತಂದರಲ್ಲದೇ ನಂತರದ ನಿರ್ಣಾಯಕ ಡಬಲ್ಸ್‌ನಲ್ಲಿ ಸೌಮ್ಯರೊಂದಿಗೆ ಸೇರಿ ಮದರಾಸು ವಿವಿಯ ಅನನ್ಯ ಎಸ್.ಆರ್. ಹಾಗೂ ಲಕ್ಷ್ಮೀ ಪ್ರಭಾರನ್ನು ರೋಚಕ ಪಂದ್ಯದಲ್ಲಿ ಸೋಲಿಸಿ ತಂಡಕ್ಕೆ ಪ್ರಶಸ್ತಿಯ ಗೆಲುವನ್ನು ಖಚಿತಪಡಿಸಿದರು.

ಸೆಮಿಫೈನಲ್‌ನಲ್ಲಿ ಪರಾಜಿತ ತಂಡಗಳ ನಡುವೆ ಮೂರು ಮತ್ತು ನಾಲ್ಕನೇ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ, ಚೆನ್ನೈನ ಎಸ್‌ಆರ್‌ಎಂ ಐಎಸ್‌ಟಿ ತಂಡವನ್ನು 2-1 ಪಂದ್ಯಗಳ ಅಂತರದಿಂದ ಸೋಲಿಸಿತು.

ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಹೆ ವಿವಿಯ ಕುಲಪತಿಗಳಾದ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ಈ ವೇಳೆ ಪ್ರೊ. ವೈಸ್ ಚಾನ್ಸಲರ್ ಡಾ.ಶರತ್ ಕೆ.ರಾವ್, ಡಾ.ವಿನೋದ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News