ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮ: ದ.ಕ. ಡಿಸಿ ಮುಲ್ಲೈ ಮುಗಿಲನ್

Update: 2023-07-04 15:09 GMT

ಮಂಗಳೂರು: ಗಾಂಜಾ, ಅಫೀಮು ಸಹಿತ ವಿವಿಧ ಮಾದರಿಯ ಡ್ರಗ್ಸ್ ವ್ಯಸನಿಗಳನ್ನು ಪತ್ತೆ ಹಚ್ಚಿ, ಅವರನ್ನು ವ್ಯಸನ ಮುಕ್ತರನ್ನಾಗಿಸುವುದರೊಂದಿಗೆ ದ.ಕ.ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ.ಕ. ಜಿಲ್ಲಾಡಳಿತ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ನಾರ್ಕೋ ಕೋ ಆರ್ಡಿನೇಶನ್ ಸೆಂಟರ್‌ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಡ್ರಗ್ ವ್ಯಸನಿಗಳನ್ನು ಮೊದಲು ಪತ್ತೆ ಹಚ್ಚಬೇಕು. ಅದಕ್ಕಾಗಿ ಜಿಲ್ಲೆಯ ಕಾಲೇಜುಗಳನ್ನು ಒಳಗೊಂಡಂತೆ ವಿದ್ಯಾಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಪರಿಣಾಮಕಾರಿಯಾಗಿ ರೂಪಿಸಬೇಕು ಎಂದರು.

ಜಾಗೃತಿ ಮೂಡಿಸಲು ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು, ಆರಂಭದಲ್ಲಿ ಅವರಿಗೆ ತರಬೇತಿ ನೀಡಬೇಕು, ಈ ಕಾರ್ಯದಲ್ಲಿ ಆಸಕ್ತರಿರುವ ಸರಕಾರೇತರ ಸ್ವಯಂ ಸಂಸ್ಥೆಗಳನ್ನು ತೊಡಗಿಸಿಕೊಳ್ಳಬಹುದಾಗಿದೆ. ಆ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಡ್ರಗ್ಸ್‌ನ ವಿವಿಧ ಮಾದರಿಗಳು, ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಣ್ಣ ವಿಡಿಯೋ ತುಣುಕುಗಳು ಹಾಗೂ ಘೋಷವಾಕ್ಯಗಳನ್ನು ನಿರ್ಮಿಸಿ ಜಾಗೃತಿ ಮೂಡಿಸಬೇಕು ಎಂದು ಡಿಸಿ ಹೇಳಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಪರಿವರ್ತಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಈ ಮಾಹಿತಿಯನ್ನು ತಲುಪಿಸಬಹುದಾಗಿದೆ ಎಂದು ಡಿಸಿ ತಿಳಿಸಿದರು.

ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ವೀಡಿಯೋಗಳಿಗೆ ಕಂಟೆಂಟ್ ಸಿದ್ಧಪಡಿಸಲು ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳು ನೆರವು ನೀಡಬೇಕು ಎಂದ ಅವರು, ಬೆಳ್ತಂಗಡಿ ತಾಲೂಕಿನ ನೆರಿಯ ಬಳಿ ಖಾಸಗಿಯವರು ಗಾಂಜಾ ಬೆಳೆಯುತ್ತಾರೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಅರಣ್ಯ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯರು ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಗಾಜಾ ಬೆಳೆಸಿದವರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಖಾಸಗಿ ಕೋರಿಯರ್ ಹಾಗೂ ಪಾರ್ಸೆಲ್ ಸರ್ವಿಸ್‌ಗಳ ಮೂಲಕ ಡ್ರಗ್ಸ್‌ಗಳ ಸಾಗಾಣಿಕೆ ಮೇಲೆ ಹದ್ದಿನ ಕಣ್ಣಿಡಬೇಕು, ಡ್ರಗ್ಸ್ ಪತ್ತೆಹಚ್ಚಲು ಹೊಸ ತಂತ್ರಗಳನ್ನು ಬಳಸುವ ಅಗತ್ಯವಿದೆ. ತರಬೇತಿ ಪಡೆದ ಶ್ವಾನಗಳನ್ನು ಬಳಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅಭಿಪ್ರಾಯಪಟ್ಟರು.

ನಾರ್ಕೋ ಕೋ ಆರ್ಡಿನೇಷನ್ ಸೆಂಟರ್‌ನ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಸಂಚಾಲಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಮಾತನಾಡಿ, ಮಾದಕ ವಸ್ತುಗಳು ಆಂಧ್ರಪ್ರದೇಶದಿಂದ ಕೇರಳ ಮಾರ್ಗವಾಗಿ ವಾಯು ಹಾಗೂ ಸಮುದ್ರ ಮಾರ್ಗವಾಗಿ ಸಾಗಾಟವಾಗುವ ಸಾಧ್ಯತೆಗಳಿವೆ. ಸಂಬಂಧಿತ ಇಲಾಖೆಗಳು ಹೆಚ್ಚಿನ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ದ.ಕ.ಜಿಪಂ ಸಿಇಒ ಡಾ. ಆನಂದ್, ಅಬಕಾರಿ ಇಲಾಖೆಯ ಉಪಾಯುಕ್ತ ಬಿಂದುಶ್ರೀ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪಾಯುಕ್ತ ಅಂಶು ಕುಮಾರ್, ಭಾರತೀಯ ನೌಕಾಪಡೆಯ ಅಧಿಕಾರಿ ಪ್ರಿಯಾ, ವಿಮಾನ ನಿಲ್ದಾಣದ ಡೆಪ್ಯುಟಿ ಮ್ಯಾನೇಜರ್ ಥಾಮಸ್ ವರ್ಗೀಸ್, ಡಿಡಿಪಿಯು ವೆಂಕಟೇಶ್ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News