ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಸುತ್ತಿದೆ ಎಂದ ಬೊಮ್ಮಾಯಿ
- ಆರ್. ಜೀವಿ
ರಾಜ್ಯದಲ್ಲಿನ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಿಂದಲೇ ನಿಯಂತ್ರಿಸುತ್ತಿದೆ ಎಂದು ಬಿಜೆಪಿ ತಗಾದೆ ತೆಗೆದಿದೆ. ಇಂಥದೊಂದು ಹೇಳಿಕೆ ಕೊಟ್ಟಿರುವವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ, ರಾಜ್ಯದ ಜನರಿಗೆ ಅವಮಾನ ಎಂದು ಹೇಳಿದ್ದಾರೆ ಮಾಜಿ ಸಿಎಂ ಬೊಮ್ಮಾಯಿ.
ಸಂಪುಟ ಸಚಿವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಎ ಐ ಸಿ ಸಿ ವರಿಷ್ಠರ ಜೊತೆ ಸಭೆ ನಡೆಸಿರುವುದನ್ನು ಪ್ರಸ್ತಾಪಿಸಿರುವ ಬೊಮ್ಮಾಯಿ, ಇದರಿಂದಾಗಿ ರಾಜ್ಯದ ಆಡಳಿತವನ್ನು ಕಾಂಗ್ರೆಸ್ ತನ್ನ ಹೈಕಮಾಂಡ್ ನಿಯಂತ್ರಣಕ್ಕೆ ಒಪ್ಪಿಸಿದಂತಾಗಿದೆ ಎಂದು ಟೀಕಿಸಿದ್ದಾರೆ. ಇದರಿಂದ ಕನ್ನಡ ಅಸ್ಮಿತೆಗೆ ಧಕ್ಕೆ ಎಂದೂ ಹೇಳಿದ್ದಾರೆ. ಚುನಾವಣೆಯಲ್ಲಿ ಸೋತು ದಿಕ್ಕೆಟ್ಟು ಕುಳಿತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರಕಾರವನ್ನು ಟೀಕಿಸಲು ಸರಿಯಾದ ವಿಷಯಗಳೇ ಸಿಗುತ್ತಿರಲಿಲ್ಲ. ಅದಕ್ಕಾಗಿ ಜನಪರ ಗ್ಯಾರಂಟಿ ಗಳನ್ನೇ ಟೀಕಿಸುವ ಪರಿಸ್ಥಿತಿ ಅವರಿಗೆ ಬಂದಿತ್ತು.
ಆದರೆ ಕಾಂಗ್ರೆಸ್ ನ ಕೆಲವು ಸಚಿವರ ಕಾರ್ಯವೈಖರಿ ಹಾಗೂ ವರ್ಗಾವಣೆ ವಿಷಯದಲ್ಲಿ ಸರಕಾರದ ಧೋರಣೆ ಬಿಜೆಪಿಗೆ ಒಳ್ಳೆಯದೊಂದು ಅಸ್ತ್ರ ಒದಗಿಸಿಕೊಟ್ಟಿದೆ. ಈಗ ಬಿಜೆಪಿ ಕಾಂಗ್ರೆಸ್ ಅನ್ನು ತಿವಿಯಲು ಸರಿಯಾಗಿಯೇ ಬಳಸಿಕೊಂಡಿದೆ. ಇದಕ್ಕೆ ಆಸ್ಪದ ಕೊಟ್ಟಿದ್ದೇ ರಾಜ್ಯ ಕಾಂಗ್ರೆಸ್ ಮುಖಂಡರು.
ಅದಿರಲಿ. ಆದರೆ ವಿಷಯ ಏನಂದ್ರೆ ರಾಜ್ಯ ಸರಕಾರವನ್ನು ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಸುತ್ತಿದೆ, ನಡೆಸುತ್ತಿದೆ, ಇದು ಕನ್ನಡಿಗರಿಗೆ ಅವಮಾನ ಎಂದೆಲ್ಲ ಹೇಳುವ ನೈತಿಕತೆ ಬಿಜೆಪಿಗೆ ಇದೆಯೇ ?. ಮೂರು ತಿಂಗಳ ಹಿಂದಿನ ವರೆಗೂ ಈ ರಾಜ್ಯದಲ್ಲಿ ಇದ್ದಿದ್ದು ಬಿಜೆಪಿ ಸರಕಾರ. ಅದು ಹೇಗೆ ನಡೀತಿತ್ತು ? ಅದರ ಪ್ರತಿಯೊಂದು ನೇಮಕಾತಿ ಹೇಗೆ ಆಗ್ತಿತ್ತು ? ಅದರ ಪ್ರತಿಯೊಂದು ಪ್ರಮುಖ ನಿರ್ಧಾರಗಳು ಯಾರನ್ನು ಕೇಳಿ ತೆಗೆದು ಕೊಳ್ಳಲಾಗ್ತ ಇತ್ತು ?. ಇದನ್ನೆಲ್ಲ ಈ ರಾಜ್ಯದ ಜನ ನೋಡಿಲ್ವಾ ?
ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ನಾಲ್ಕು ವರ್ಷಗಳ ಕಾಲ ಅದ್ಯಾವ ರೀತಿ ಆ ಪಕ್ಷದ ದಿಲ್ಲಿ ವರಿಷ್ಠರು ಅದನ್ನು ನಿಯಂತ್ರಿಸುತ್ತಿದ್ದರು ಎಂಬುದನ್ನೂ ಎಲ್ಲರೂ ನೋಡಿಲ್ಲವೆ ?. ಸ್ವತಃ ಮುಖ್ಯಮಂತ್ರಿಯೇ ಪ್ರತಿಯೊಂದಕ್ಕೂ ದಿಲ್ಲಿಗೆ ಹೋಗೋದು ಅಲ್ಲಿ ಕೂತು ಕಾಯೋದು, ಆಮೇಲೆ ಅಲ್ಲಿ ಮತ್ತೆ ನೋಡೋಣ , ಹೇಳ್ತೀವಿ ಅಥವಾ ವೀಕ್ಷಕರನ್ನು ಕಳಿಸ್ತೀವಿ ಅಂತ ಬರಿಗೈಯಲ್ಲಿ ವಾಪಸ್ ಕಳಿಸೋದು ಇದೆಲ್ಲವನ್ನೂ ಈ ರಾಜ್ಯ ನೊಡಿಲ್ಲವೆ ?
ಅಧಿಕಾರದಲ್ಲಿದ್ದರೂ ಇಲ್ಲಿರುವುದನ್ನು ಅಲ್ಲಿ ಎತ್ತಿಡುವುದಕ್ಕೂ ದೆಹಲಿ ನಾಯಕರ ಅನುಮತಿ ಕೇಳಬೇಕಿದ್ದ ದಿನಗಳನ್ನು ಬಿಜೆಪಿ ಈ ರಾಜ್ಯಕ್ಕೆ ತೋರಿಸಿಲ್ವಾ ?. ಒಮ್ಮೆ ಸಂಪುಟ ವಿಸ್ತರಿಸಬೇಕೆಂದರೆ ಹತ್ತು ಬಾರಿ ದೆಹಲಿಗೆ ಹೋಗುತ್ತ, ವರಿಷ್ಠರ ಮರ್ಜಿ ಕಾಯಬೇಕಿದ್ದ ದಿನಗಳನ್ನು ಕನ್ನಡಿಗರು ನೋಡಿಲ್ವಾ ?. ತಮ್ಮ ಕೈಯಲ್ಲಿರುವ ಪಟ್ಟಿಗೆ ಪ್ರತಿಯಾದ ಪಟ್ಟಿಯೊಂದನ್ನು ಸಿದ್ಧವಿಟ್ಟಿರುತ್ತಿದ್ದ ಹೈಕಮಾಂಡ್ ಎದುರು ಮತ್ತೇನೂ ಮಾತನಾಡಲಾರದೆ ತಲೆ ಅಲ್ಲಾಡಿಸಿಕೊಂಡು ಬೆಂಗಳೂರಿನ ವಿಮಾನ ಹತ್ತುತ್ತಿದ್ದ ದಿನಗಳನ್ನು ಬೊಮ್ಮಾಯಿಯವರು ಮರೆತ್ರಾ ?.
ಹಾಗೆ ನೋಡಿದರೆ ಆ ದಿನಗಳು ಆಗಲೇ ಮುಗಿದುಹೋದವೆಂದೇನೂ ಅಲ್ಲ. ಅಧಿಕಾರದಲ್ಲಿ ಇಲ್ಲದಿರುವ ಈ ಹೊತ್ತಲ್ಲೂ ಬಿಜೆಪಿಯದ್ದು ಅದೇ ಹಣೆಬರಹ, ದೆಹಲಿ ನಾಯಕರ ಮರ್ಜಿ ಕಾಯುವುದು. ಹೌದು ಕಾಂಗ್ರೆಸ್ ಹೈಕಮಾಂಡ್ ಅಣತಿಯಂತೆಯೇ ನಡೆಯುತ್ತದೆ. ಆದರೆ ಅದನ್ನು ಹೇಳೋ ನೈತಿಕತೆ ಬಿಜೆಪಿಗೆ ಇದೆಯೇ ?
ಪ್ರಜಾಪ್ರಭುತ್ವ ವಿರೋಧಿ, ರಾಜ್ಯದ ಜನರಿಗೆ ಅವಮಾನ, ಕನ್ನಡದ ಅಸ್ಮಿತೆಗೆ ಧಕ್ಕೆ ಇವೆಲ್ಲ ಬಿಜೆಪಿಯವರ ನಡೆನುಡಿಯಲ್ಲಿಯೇ ಇದ್ದವು. ಅಧಿಕಾರದಲ್ಲಿರುವಾಗಲೂ, ಚುನಾವಣೆಗಾಗಿ ಜನರೆದುರು ಹೋದಾಗಲೂ ಇದೇ ಬಿಜೆಪಿಯ ದೆಹಲಿ ನಾಯಕರು ಇವೆಲ್ಲವನ್ನೂ ಆಡಿ ತೋರಿಸಿದ್ದರು. ಬಹುಶಃ ಬೊಮ್ಮಾಯಿಯವರೂ ಮರೆತಿರಲಾರರು. ಈಗ ಕಾಂಗ್ರೆಸ್ ನಾಯಕರನ್ನು ಬೈಯಲು ಕಾರಣಗಳನ್ನು ಹುಡುಕುವಾಗ ತಾವು ಮಾಡಿದ್ದೆಲ್ಲವೂ ಒಂದೊಂದಾಗಿ ಅವರಿಗೆ ನೆನಪಾಗುತ್ತಿರಬೇಕು.
ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಆಗಲೇ ತಿಂಗಳುಗಳೇ ದಾಟಿದವು. ಆದರೆ ತಮ್ಮಲ್ಲೊಬ್ಬ ಪ್ರತಿಪಕ್ಷ ನಾಯಕನನ್ನು ಆರಿಸಿಕೊಳ್ಳುವುದಕ್ಕೂ ಆಗದೇ ಇರುವುದೇಕೆ?. ಇವರಾರೂ ಹೈಕಮಾಂಡ್ ನಿಯಂತ್ರಣದಲ್ಲಿ ಇಲ್ಲವೆಂದಾದರೆ, ದೆಹಲಿ ದಿಕ್ಕಿಗೆ ಮುಖ ಮಾಡಿಕೊಂಡು ಕೂತು, ಯಾರ ಹೆಸರು ಬರುವುದೊ ಎಂದು ಕಾದಿರುವುದೇಕೆ?. ಚುನಾವಣೆ ವೇಳೆ ಅಮಿತ್ ಶಾರನ್ನು ಬೈಯಲು ದೇವೇಗೌಡರ ಕಾಲಿನ ಉಗುರಿನವರೆಗೂ ಪದ ಬಳಕೆ ಮಾಡಿದ್ದ ಕುಮಾರಸ್ವಾಮಿಯವರ ಹಿಂದೆ ನಿಂತು ದನಿಗೂಡಿಸುವ ಸ್ಥಿತಿ ಇವರಿಗೆ ಬಂದಿರುವುದೇಕೆ?
ಬಸವರಾಜ ಬೊಮ್ಮಾಯಿಯವರು ಖಂಡಿತ ಮರೆತಿರಲಾರರು. ಮಾಜಿ ಸಿಎಂ ಯಡಿಯೂರಪ್ಪನವರನ್ನು ಅವರು ಸಿಎಂ ಆಗಿದ್ದ ಹೊತ್ತಲ್ಲೂ ಇವರ ದೆಹಲಿ ವರಿಷ್ಠರು ಹೇಗೆಲ್ಲ ಅವಮಾನಿಸಿದ್ದರಲ್ಲವೆ?. ಯಾರ್ಯಾರಿಗೋ ಭೇಟಿಗೆ ಸಿಗುತ್ತಿದ್ದ ದೆಹಲಿ ಮಂದಿ, ದೆಹಲಿಗೆ ಹೋಗಿ ಕಾದಿರುತ್ತಿದ್ದ ಯಡಿಯೂರಪ್ಪನವರಿಗೆ ಮಾತ್ರ ಭೇಟಿಯ ಅವಕಾಶವನ್ನೇ ಕೊಡದೆ ವಾಪಸ್ ಕಳಿಸಿದ್ದರಲ್ಲವೆ?
ಅವರು ಆ ಕಮಲ ಈ ಕಮಲ ಮಾಡಿ ಹೇಗೋ ಕಷ್ಟಪಟ್ಟು ಮುಖ್ಯಮಂತ್ರಿಯಾದಾಗ, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವುದರ ಭಾಗವಾಗಿ ಒಂದು ಅಭಿನಂದನೆಯನ್ನೂ ದೆಹಲಿಯ ದೊಡ್ಡವರು ಹೇಳಿರಲಿಲ್ಲ ಅಲ್ಲವೆ?. ಇದು ರಾಜ್ಯದ ಮುಖ್ಯಮಂತ್ರಿಗೆ, ಅದರ ಮೂಲಕ ರಾಜ್ಯಕ್ಕೆ, ಕನ್ನಡಿಗರಿಗೆ ಆದ ಅವಮಾನ ಎಂದು ಇವರಾರಿಗೂ ಅನಿಸಲೇ ಇಲ್ಲವೆ ಆಗ?
ಮೋದಿ ಸರಕಾರ ಕನ್ನಡ ಭಾಷೆಯನ್ನೇ ಕಡೆಗಣಿಸಿದಾಗ, ಹಿಂದಿ ಹೇರಿಕೆ ಮಾಡಿದಾಗ ಅದನ್ನು ಪ್ರತಿಭಟಿಸುವ ಧಮ್ಮು, ತಾಕತ್ತು ಇತ್ತೇ ಆಗಿನ ಬಿಜೆಪಿ ರಾಜ್ಯ ಸರಕಾರಕ್ಕೆ ?. ಕರ್ನಾಟಕದ ಭವಿಷ್ಯವನ್ನು ಮೋದಿ ಕೈಗೆ ಕೊಡಿ ಎಂದು ರಾಜ್ಯ ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ ಬಂದು ಭಾಷಣ ಬಿಗಿಯುತ್ತಿದ್ಧಾಗ, ಅದು ಮೋದಿ ಕೈಗೇ ಕರ್ನಾಟಕದ ಅಧಿಕಾರವೂ ಹೋಗಬೇಕೆಂಬ ಉದ್ದೇಶದ್ದಾಗಿತ್ತಲ್ಲವೆ?
ಒಕ್ಕೂಟ ವ್ಯವಸ್ಥೆಗೇ ಮಾರಕವಾಗುವ ಅಪಾಯಕಾರಿ ನಡೆ ಅದಾಗಿದ್ದುದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದುದು, ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನೇ ಇಲ್ಲವಾಗಿಸುವ ಹುನ್ನಾರವಾಗಿದ್ದುದು ಈ ರಾಜ್ಯದ ಬಿಜೆಪಿ ನಾಯಕರಿಗೆ ತಿಳಿದಿರಲಿಲ್ಲವೆ?. ಇಷ್ಟಕ್ಕೂ ದೆಹಲಿಗೆ ಸಚಿವರನ್ನು ಕರೆದುಕೊಂಡು ಹೋದ ವಿಚಾರವನ್ನು ಬಿಜೆಪಿ ದೊಡ್ಡದು ಮಾಡುತ್ತಿರುವುದು, ಕಾಂಗ್ರೆಸನ್ನು ಬೈಯುವುದಕ್ಕೆ ಅದರ ಬಳಿ ಬೇರೆ ನೆಪಗಳಿಲ್ಲ ಎಂಬುದಕ್ಕಾಗಿ ಎಂಬುದು ಸ್ಪಷ್ಟ.
ಯಾಕೆಂದರೆ ಹೈಕಮಾಂಡ್ ಎದುರು ಹೋಗಿ ಕೂರುವುದು ಕಾಂಗ್ರೆಸಿಗರಿಗಿಂತ ಬಿಜೆಪಿಯವರಿಗೆ ಹೆಚ್ಚು ಅಭ್ಯಾಸ. ಹಾಗಾಗಿ ಬೊಮ್ಮಾಯಿಯವರು ಹೀಗೊಂದು ಹೇಳಿಕೆ ಕೊಟ್ಟು ಸಂಭ್ರಮಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಬಿಜೆಪಿಯ ತಪ್ಪುಗಳೆಲ್ಲ ಅಡಗಿಹೋಗುವುದಿಲ್ಲ. ಅವು ಅವರದೇ ಮಾತಿನ ಭರದಲ್ಲಿ ಇನ್ನೆಷ್ಟು ಎದ್ದು ಕಾಣುತ್ತವೆ ಎಂಬುದೂ ನಿಜ.