ಡ್ರಗ್ಸ್ ಮುಕ್ತ ಮಂಗಳೂರು ಪೆಡ್ಲರ್ ಗಳಿಗೆ ಬೀಳಬೇಕಿದೆ ಬಿಗಿ ಕಾನೂನು ಕುಣಿಕೆ

ಇಲಾಖೆಯಲ್ಲಿ ಈಗಾಗಲೇ ಅಕ್ರಮ ಮಾದಕ ದ್ರವ್ಯ ಸಾಗಾಟದಾರರ (ಪೆಡ್ಲರ್) ಮಾಹಿತಿ ಇದೆ. ಅವರ ವಿರುದ್ಧ ಎರಡು ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಆ ಪೆಡ್ಲರ್ಗಳ ಓಡಾಟದ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಹೆಚ್ಚು ಪ್ರಕರಣಗಳು ದಾಖಲಾಗಿರುವ ಪೆಡ್ಲರ್ಗಳ ವಿರುದ್ಧ ಗೂಂಡಾ ಕಾಯ್ದೆ ಮಾದರಿಯ ಪಿಟ್ ಎನ್ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ಮೂರು ವಾರಗಳಿಂದ ಡ್ರಗ್ಸ್ ಸೇವನೆ ಚಟಕ್ಕೊಳಗಾದವರಿಗೆ ಠಾಣಾ ಮಟ್ಟದಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. -ಕುಲದೀಪ್ ಆರ್. ಜೈನ್, ಆಯುಕ್ತರು, ಮಂಗಳೂರು ಪೊಲೀಸ್ ಕಮಿಷನರೇಟ್

Update: 2023-07-15 16:00 GMT

- ಸತ್ಯಾ ಕೆ.

 ಮಂಗಳೂರು: ದ.ಕ. ಜಿಲ್ಲಾದ್ಯಂತ ಪೊಲೀಸ್ ಇಲಾಖೆಯಿಂದ ಡ್ರಗ್ಸ್ ವಿರೋಧಿ ಕಾರ್ಯಾಚರಣೆ, ಅಭಿಯಾನ ಚುರುಕುಗೊಂಡಿದೆ. ಆರು ತಿಂಗಳಲ್ಲಿ ಮಂಗಳೂರನ್ನು ಡ್ರಗ್ಸ್ ಮುಕ್ತಗೊಳಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಗೃಹ ಸಚಿವರು ಫರ್ಮಾನು ಹೊರಡಿಸಿದ್ದಾರೆ. ಇದು ಕಾರ್ಯಗತ ಆಗಬೇಕಾದಲ್ಲಿ ಡ್ರಗ್ಸ್ ಪೂರೈಕೆದಾರ ಜಾಲವನ್ನು ಕಾನೂನಿನ ಕುಣಿಕೆಗೊಳಪಡಿಸುವ ಕಾರ್ಯ ಆಗಬೇಕಾಗಿದೆ.

ಹೊರ ದೇಶ, ರಾಜ್ಯ, ಜಿಲ್ಲೆಗಳ ಮೂಲಕ ದ.ಕ. ಜಿಲ್ಲೆ ಪ್ರವೇಶಿಸುವ ಅದರಲ್ಲೂ ಮಂಗಳೂರಿನ ಶಾಲಾ-ಕಾಲೇಜುಗಳ ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲವನ್ನು ಹೆಡೆಮುರಿಕಟ್ಟಬೇಕು. ಅವರನ್ನು ಕಾನೂನಿನಿಂದ ಕಠಿಣ ಶಿಕ್ಷೆಗೊಳಪಡಿಸಿದಾಗ ಮಾತ್ರ ಈ ಡ್ರಗ್ಸ್ ಕರಾಳ ಜಗತ್ತಿನಿಂದ ಯುವ ಸಮುದಾಯವನ್ನು ರಕ್ಷಿಸಿಕೊಳ್ಳಲು ಸಾಧ್ಯ. 

ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲಾದ್ಯಂತ ಒಡಿಶಾ, ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್ನಿಂದ ಕೇರಳ ದಾರಿಯಾಗಿ ಗಾಂಜಾ ತಲುಪುತ್ತಿದ್ದರೆ, ಅತ್ಯಂತ ಅಪಾಯಕಾರಿಯಾಗಿರುವ ಎಂಡಿಎಂಎ, ಎಲ್ಎಸ್ಡಿ, ಕೊಕೇನ್ನಂತಹ ಸಿಂಥೆಟಿಕ್ ಡ್ರಗ್ಸ್ ಕೂಡಾ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪೂರೈಕೆಯಾಗುತ್ತಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ ನಡೆಯುತ್ತಿರುವ ಡ್ರಗ್ಸ್ ಕಾರ್ಯಾಚರಣೆಯಲ್ಲಿ ಪತ್ತೆಯಾದ ವಿಭಿನ್ನ ರೀತಿಯ ಡ್ರಗ್ಸ್, ಬಂಧಿಸಲ್ಪಟ್ಟ ಆರೋಪಿಗಳು,

ದಾಖಲಾದ ಪ್ರಕರಣಗಳನ್ನು ಗಮನಿಸಿದರೆ, ಈ ಪಿಡುಗು ಅದೆಷ್ಟು ಆಳವಾಗಿ ನಗರವನ್ನು ಆವರಿಸಿದೆ ಎಂಬುದನ್ನು ಗ್ರಹಿಸಬಹುದಾಗಿದೆ. 2023ರ ಜನವರಿಯಿಂದ ಜುಲೈ 12ರವರೆಗೆ ಆರೂವರೆ ತಿಂಗಳಲ್ಲೇ 199 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಗಾಂಜಾ, ಎಂಡಿಎಂಎ, ಮೆಥಾಂಫೆಟಮೈನ್, ಹಶೀಶ್ ಆಯಿಲ್, ಚರಸ್ ಸೇರಿದಂತೆ 64.30 ಲಕ್ಷ ರೂ. ವೌಲ್ಯದ ಡ್ರಗ್ಸ್ನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. 2022ರಲ್ಲಿ 397 ಪ್ರಕರಣ ದಾಖಲಿಸಿಕೊಂಡು 59.59 ಲಕ್ಷ ರೂ. ವೌಲ್ಯದ ಡ್ರಗ್ಸ್ನ್ನು ಮುಟ್ಟುಗೋಲು ಹಾಕಿದ್ದಾರೆ.

 ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಜನಜೀವನವೇ ಸ್ತಬ್ಧವಾಗಿದ್ದು, ಮನೆ ಮಂದಿಯೆಲ್ಲ ಕೆಲಸ ಕಾರ್ಯಗಳಿಲ್ಲದೆ ಚಿಂತಾಕ್ರಾಂತರಾಗಿದ್ದ ಅವಧಿಯಾಗಿದ್ದ 2020ರಲ್ಲಿ ಮಂಗಳೂರು ಪೊಲೀಸರು ಅಕ್ರಮ ಡ್ರಗ್ಸ್ ಸಾಗಾಟ, ಪೂರೈಕೆಗೆ ಸಂಬಂಧಿಸಿ 189 ಪ್ರಕರಣಗಳನ್ನು ದಾಖಲಿಸಿದ್ದರು. ಗಾಂಜಾ, ಎಂಡಿಎಂಎ ಟ್ಯಾಬ್ಲೆಟ್ಗಳು, ಹಶೀಶ್ ಆಯಿಲ್ ಬಾಟಲ್ಗಳು, ಎಲ್ಎಸ್ಡಿ, ಎಂಡಿಎಂಎ ಪೌಡರ್ ಸೇರಿದಂತೆ 50.93 ಲಕ್ಷ ರೂ.ಗಳ ಅಕ್ರಮ ಡ್ರಗ್ಸ್ ವಶಪಡಿಸಿಕೊಂಡಿದ್ದರು. 2021ರಲ್ಲಿ 328 ಪ್ರಕರಣಗಳನ್ನು ದಾಖಲಿಸಿದ್ದ ಮಂಗಳೂರು ಪೊಲೀಸರು, ಗಾಂಜಾ, ಕೊಕೇನ್, ಹೆರಾಯಿನ್, ಎಂಡಿಎಂಎ ಪೌಡರ್, ಸ್ಟಾಂಪ್ ರೂಪದ ಎಲ್ಎಸ್ಡಿ ಸೇರಿದಂತೆ ವಶಪಡಿಸಿಕೊಂಡ ಡ್ರಗ್ಸ್ ವೌಲ್ಯ 74.71 ಲಕ್ಷ ರೂ.ಗಳಿಗೆ ಏರಿಕೆಯಾಗಿತ್ತು.

ಇವೆಲ್ಲಾ ಪೊಲೀಸರು ತಮಗೆ ದೊರೆತ ಗುಪ್ತಚರ ಮಾಹಿತಿ, ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಕಣ್ಗಾವಲು ಇರಿಸುವ ಮೂಲಕ ಪತ್ತೆ ಮಾಡಿರುವುದು. ಇನ್ನು ಪೊಲೀಸರ ಕಣ್ಣು ತಪ್ಪಿಸಿ ಅದೆಷ್ಟು ಪ್ರಮಾಣದಲ್ಲಿ ಅಕ್ರಮ ಡ್ರಗ್ಸ್ ಪೂರೈಕೆದಾರರಿಂದ ಬಳಕೆದಾರರಿಗೆ ತಲುಪಿರಬಹುದು ಎಂದು ಹೇಳಲಾಗದು. ಕೆಜಿಗಟ್ಟಲೆ ಗಾಂಜಾ ವಶ!: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2023ರ ಜುಲೈ 12ರವರೆಗೆ 184.532 ಕಿ.ಗ್ರಾಂ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಅವಧಿಯಲ್ಲಿ 366.75 ಗ್ರಾಂ ಎಂಡಿಎಂಎ, ಗಾಂಜಾ ವೀಡ್ ಆಯಿಲ್ 11.30 ಗ್ರಾಂ, ಮೆಥಾಂಫೆಟಮೈನ್ 16.020 ಗ್ರಾಂ, ಚರಸ್ 500 ಗ್ರಾಂ ಹಾಗೂ 2 ಗ್ರಾಂ ಹಶೀಶ್ ಆಯಿಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

2022ರಲ್ಲಿ 192.408 ಕೆಜಿ , 2021ರಲ್ಲಿ 334.838 ಕೆಜಿ, 2020ರಲ್ಲಿ 203.964 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಕೌನ್ಸೆಲಿಂಗ್- ಬಿಗಿ ತಪಾಸಣೆ: ಮಂಗಳೂರು ನಗರವನ್ನು ಒಳಗೊಂಡಂತೆ ದ.ಕ. ಜಿಲ್ಲೆಯನ್ನು ಡ್ರಗ್ಸ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದ ನಾರ್ಕೊ ಕೋ ಅರ್ಡಿನೇಶನ್ ಸೆಂಟರ್ನ ಜಿಲ್ಲಾ ಸಮಿತಿ ಕಾರ್ಯಾಚರಣೆಗಿಳಿದಿದೆ. ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಮಾರ್ಗದರ್ಶನದಲ್ಲಿ ಈಗಾಗಲೇ ಕಾಲೇಜುಗಳಲ್ಲಿ ಜಾಗೃತಿ ಜತೆಗೆ ಕಳೆದ ಮೂರು ವಾರಗಳಿಂದ ಡ್ರಗ್ಸ್ ಬಳಕೆದಾರರಿಗೆ ಪೊಲೀಸ್ ಠಾಣಾ ಮಟ್ಟದಲ್ಲಿ ಸಮಾಲೋಚನೆ (ಕೌನ್ಸೆಲಿಂಗ್) ನಡೆಸುವ ಕಾರ್ಯವನ್ನು ಮಾಡಲಾಗುತ್ತಿದೆ.


ಸಿಂಥೆಟಿಕ್ಸ್ ಡ್ರಗ್ಸ್ ಪೂರೆಕೆ ಮೇಲೆ ಬೇಕಿದೆ ನಿಗಾ

ಗಾಂಜಾ, ಅಫೀಮು ಸಾಮಾನ್ಯವಾಗಿ ಬೃಹತ್ ಪ್ರಮಾಣದಲ್ಲಿ ಪೂರೈಕೆ- ಬಳಕೆ ಸಾಧ್ಯವಾದರೆ, ವಿದ್ಯಾರ್ಥಿ ಸಮೂಹವನ್ನು ಟಾರ್ಗೆಟ್ ಮಾಡಿ ಪೂರೈಕೆಯಾಗುವ ಸಿಂಥೆಟಿಕ್ ಡ್ರಗ್ಸ್ ಆದ ಎಲ್ಎಸ್ಡಿ, ಎಂಡಿಎಂಎ, ಮಾರ್ಫಿನ್, ಮೆಥಾಂಫೆಟಮೈನ್, ಟ್ರಮಡೋಲ್, ಹೆರಾಯಿನ್ ಮೊದಲಾದವುಗಳು ಅತ್ಯಂತ ಗೌಪ್ಯವಾಗಿ ಸಾಗಾಟ- ಪೂರೈಕೆಯಾಗುತ್ತವೆ. ಪುಡಿ, ಟ್ಯಾಬ್ಲೆಟ್ ಅಥವಾ ಸ್ಟಾಂಪ್ ರೂಪದಲ್ಲೂ ಇರುವ ಈ ಸಿಂಥೆಟಿಕ್ ಡ್ರಗ್ಸ್ನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ತ್ರಾಸದಾಯಕ. ಸಂಗೀತ, ವೀಕೆಂಡ್ ಕಾರ್ಯಕ್ರಮ, ವಿಶೇಷ ಔತಣಕೂಟ, ಮೋಜು ಮಸ್ತಿ ಸ್ಥಳಗಳಲ್ಲಿ ಈ ಸಿಂಥೆಟಿಕ್ ಡ್ರಗ್ಸ್ ಹಾವಳಿ ದಟ್ಟವಾಗಿದ್ದು, ವ್ಯಸನಿಗಳೇ ಪೆಡ್ಲರ್ಗಳಾಗಿ ಕಾರ್ಯನಿರ್ವಹಿಸುತ್ತಾರೆ. 

ಇತ್ತೀಚೆಗೆ ಮಂಗಳೂರಿನಲ್ಲಿ ವೈದ್ಯರು, ಎಂಬಿಬಿಎಸ್, ಬಿಡಿಎಸ್ ಹಾಗೂ ಎಂಡಿ ಕಲಿಯುತ್ತಿರುವ ವೈದ್ಯ ವಿದ್ಯಾರ್ಥಿಗಳು ಈ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವುದು ಈ ಜಾಲ ಅದೆಷ್ಟು ಕರಾಳವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವ್ಯಕ್ತಿ, ಪ್ರೇಕ್ಷಣೀಯ ಸ್ಥಳ, ದೇವರ ಫೋಟೊ ಅಥವಾ ಸ್ಟಿಕ್ಕರ್ ಹಾಗೂ ಕಾಗದ ರೂಪದಲ್ಲಿರುವ ಈ ಎಲ್ಎಸ್ಡಿ ಡ್ರಗ್ಸ್ನಲ್ಲಿ ‘ಲೈಸರ್ಜಿಕ್ ಆ್ಯಸಿಡ್ ಡೈಥೈಲಾಮೈಡ್ ದ್ರಾವಣವಿರುತ್ತದೆ. ಈ ಸಿಂಥೆಟಿಕ್ ಡ್ರಗ್ಸ್ ದುಬಾರಿಯಾಗಿದ್ದು, ಗ್ರಾಂಗೆ ಸಾವಿರಾರು ರೂ.ಗಳಿಗೆ ಮಾರಾಟವಾಗುತ್ತವೆ. ಡಾರ್ಕ್ನೆಟ್ ವೆಬ್, ಕೊರಿಯರ್ ಮೂಲಕ ವಿದೇಶಗಳಿಂದಲೂ ಈ ಸಿಂಥೆಟಿಕ್ ಡ್ರಗ್ಸ್ ಪೂರೈಕೆಯಾಗುವುದರಿಂದ ಇದನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಆ್ಯಪ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಡ್ ವರ್ಡ್ ಮೂಲಕ ಡ್ರಗ್ಸ್ ಖರೀದಿ ನಡೆಯುತ್ತಿದೆ. 

ಆಹಾರ ಪೂರೈಕೆ ಆ್ಯಪ್ ಕಂಪೆನಿಗಳ ಪ್ರತಿನಿಧಿಗಳ ಸೋಗಿನಲ್ಲೂ ಈ ಡ್ರಗ್ಸ್ ಪೂರೈಕೆಯಾಗುತ್ತಿವೆ. ರಾಜ್ಯದ ವಿವಿಧ ಕಡೆ ಮಿನಿ ಲ್ಯಾಬ್ಗಳನ್ನು ನಿರ್ಮಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಜಾಲವನ್ನು ಕೂಡಾ ಬೆಂಗಳೂರಿನಲ್ಲಿ ಭೇದಿಸಲಾಗಿತ್ತು. ಹಾಗಾಗಿ ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಅತ್ಯಂತ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿದ್ದು, ಮಂಗಳೂರಿನಲ್ಲೂ ಈ ಬಗ್ಗೆ ಕಠಿಣ ಕಣ್ಗಾವಲು ಅಗತ್ಯವಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 2023ರಲ್ಲಿ ಇಲ್ಲಿಯವರೆಗೆ 366.755 ಗ್ರಾಂ ಎಂಡಿಎಂ, 2 ಗ್ರಾಂ ಹಶೀಶ್ ಆಯಿಲ್, 16.020 ಗ್ರಾಂ ಮೆಥಾಂಫೆಟಮೈನ್ ಪತ್ತೆಯಾಗಿದೆ. 2022ರಲ್ಲಿ 57 ಗ್ರಾಂ ವೈಟ್ ಮೆಥಾಂಫೆಟಮೈನ್, 596.010 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. 2021ರಲ್ಲಿ 313.60 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ ರೂಪದಲ್ಲಿ, 15.15 ಗ್ರಾಂ (840- ಸ್ಟಾಂಪ್ ರೂಪದಲ್ಲಿ) ಎಲ್ಎಸ್ಡಿ, 21.130 ಗ್ರಾಂ ಕೊಕೇನ್, 10.790 ಗ್ರಾಂ ಎಂಡಿಎಂಎ ಪೌಡರ್ ರೂಪದಲ್ಲಿ ಪತ್ತೆಯಾಗಿತ್ತು. 2020ರಲ್ಲಿ 2.200 ಗ್ರಾಂಗಳ 10 ಶೀಟ್ ಎಲ್ಎಸ್ಡಿ, 62.70 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್ ರೂಪದಲ್ಲಿ ಪತ್ತೆಯಾಗಿತ್ತು.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News