ಭಾರತೀಯತೆಯ ಮುಖ್ಯವಾಹಿನಿಯಿಂದ ಹೊರಗುಳಿದವರು

ಈ ದೇಶಕ್ಕೆ ಹೊರಗಿನವರಾದ ಸನಾತನಿಗಳು ತಮ್ಮ ದುಷ್ಕೃತ್ಯಗಳು ಹಾಗೂ ಭಾರತೀಯತೆಗೆ ನಿಷ್ಠರಾಗದ ವಿದ್ರೋಹಿ ಮನಸ್ಥಿತಿಯಿಂದ ಮೂಲ ಭಾರತೀಯ ಮುಖ್ಯವಾಹಿನಿಯಿಂದ ಪ್ರಜ್ಞಾಪೂರ್ವಕವಾಗಿಯೇ ಹೊರಗುಳಿದಿದ್ದಾರೆ. ಸನಾತನಿಗಳು ಈ ನೆಲದ ಮುಖ್ಯವಾಹಿನಿಯಿಂದ ಹೊರಗುಳಿದಿರುವುದು ಹಾಗೂ ಈ ನೆಲಮೂಲ ಸಂಸ್ಕೃತಿಯ ವಿರುದ್ಧವಾಗಿರುವುದು ಒಂದು ರೀತಿಯಲ್ಲಿ ಅಂತಿಮವಾಗಿ ಈ ನೆಲದ ಬಹುತ್ವ ಸಂಸ್ಕೃತಿಗೆ ಸಲ್ಲಲಿರುವ ಜಯವಾಗಲಿದೆ.

Update: 2024-09-23 09:31 GMT

ಭಾರತವು ಜಗತ್ತಿನಲ್ಲಿ ಬಹು ಸಂಸ್ಕೃತಿ ಹೊಂದಿರುವ ಏಕೈಕ ನೆಲ ಹಾಗೂ ನೆಲೆ. ಈಗ ಅದನ್ನು ಏಕ ಸಂಸ್ಕೃತಿಯ ನೆಲೆಯಾಗಿಸಲು ಪ್ರಯತ್ನಿಸುತ್ತಿರುವವರು ಈ ದೇಶದ ಮುಖ್ಯವಾಹಿನಿಯಲ್ಲಿ ಎಂದಿಗೂ ಬೆರೆಯದ ಹಾಗೂ ಈ ದೇಶದ ಹೃದಯವೇ ಆಗಿರುವ ಬಹುಜನರನ್ನು ಎಂದಿಗೂ ಪ್ರೀತಿಸದ ಸನಾತನಿಗಳು. ಇಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅವರವರಿಗೆ ಅವರದೇ ಮಾತೃಭಾಷೆಯೇ ದೇವಭಾಷೆ ಹಾಗೂ ರಾಷ್ಟ್ರಭಾಷೆ. ಉಳಿದ ಭಾಷೆಗಳು ಆಯಾ ಪ್ರದೇಶದ ಆಡಳಿತದ ಅನುಕೂಲಕ್ಕಾಗಿ ಬಳಸಲಾಗುತ್ತಿರುವ ಭಾಷೆಗಳೇ ಹೊರತು ಇಡೀ ದೇಶದ ಎಲ್ಲಾ ಜನರ ಮಾತೃ ಭಾಷೆಯಾಗಲಿ, ರಾಷ್ಟ್ರಭಾಷೆಯಾಗಲಿ, ದೇವಭಾಷೆಯಾಗಲಿ ಅಥವಾ ಹೃದಯದ ಭಾಷೆಯಾಗಲಿ ಖಂಡಿತ ಅಲ್ಲ. ಈ ದೇಶದಲ್ಲಿರುವ ಎಲ್ಲಾ ಭಾಷೆಗಳ ಒಟ್ಟಾರೆ ಸಂಸ್ಕೃತಿಯೇ ಈ ದೇಶದ ಭಾಷಾ ಸಂಸ್ಕೃತಿ. ಇನ್ನು ಈ ದೇಶದ ಪ್ರತೀ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಜನರ ಮಾತನಾಡುವ ಶೈಲಿ ಬದಲಾಗುತ್ತದೆ. ಇಡೀ ದೇಶದಲ್ಲಿ ಅನೇಕ ಬಗೆಯ ಉಡುಗೆ ತೊಡುಗೆಗಳಿವೆ. ತಿಂಡಿ- ತಿನಿಸುಗಳಿವೆ. ಆಚಾರ-ವಿಚಾರ, ಪದ್ಧತಿ, ಸಂಸ್ಕೃತಿಗಳಿವೆ. ಅದೀಮ ನಂಬಿಕೆಗಳಿವೆ. ಈ ಎಲ್ಲವುಗಳ ಒಟ್ಟು ಮೊತ್ತವೇ ಬಹುತ್ವ ಭಾರತದ ಅಸ್ತಿತ್ವ ಮತ್ತು ಅಸ್ಮಿತೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಬಹುತ್ವಕ್ಕೆ ಸನಾತನವಾದಿಗಳಿಂದ ಬಹುದೊಡ್ಡ ಅಪಾಯ ಬಂದೊದಗಿದೆ. ಭಾರತವನ್ನು ಪ್ರಾಚೀನ ಕಾಲದಿಂದಲೂ ಅಪಾಯದ ಸುಳಿಗೆ ಸಿಲುಕಿಸಿದ್ದೇ ಸನಾತನವಾದಿಗಳು ಎನ್ನುವ ಸಂಗತಿ ಬಹುತೇಕ ಮುಗ್ಧ ಭಾರತಿಯರಿಗೆ ತಿಳಿದಿಲ್ಲ. ಈ ದೇಶವನ್ನು ಇಲ್ಲಿಯವರೆಗೆ ರಕ್ಷಿಸಿದ್ದು ಇಲ್ಲಿನ ಬಂಡಾಯ ಚಳವಳಿಗಳ ಗುಣ, ವಾಗ್ವಾದ ಪರಂಪರೆ, ಬಹುತ್ವ ಸಂಸ್ಕೃತಿ ಮತ್ತು ಒಳಗೊಳ್ಳುವಿಕೆಯ ನೆಲಮೂಲದ ಉದಾತ್ತ ಸಂಸ್ಕೃತಿ. ಈ ನೆಲದ ಮೇಲೆ ಮೊತ್ತಮೊದಲು ದಾಳಿ ಮಾಡಿ ಇಲ್ಲಿನ ಸಂಸ್ಕೃತಿಯನ್ನು ನುಂಗಿ ನೀರು ಕುಡಿದು ಕೊನೆಗೆ ಇಲ್ಲಿಂದ ಮರಳಿ ತಮ್ಮ ತಾಯ್ನಾಡಿಗೆ ಹಿಂದಿರುಗದೆ ಇಲ್ಲೇ ಶಾಶ್ವತವಾಗಿ ನೆಲೆನಿಂತ ಏಕೈಕ ವಿದೇಶಿ ವಲಸಿಗರೆಂದರೆ ಸನಾತನಿ ಆರ್ಯರು. ಈ ನೆಲ ಗ್ರೀಕ್, ಕುಶಾಣ, ಮೊಗಲ್, ತುರ್ಕ, ಡಚ್ಚ, ಬ್ರಿಟಿಷ್ ಮುಂತಾದವರಿಂದ ಅನುಭವಿಸಿದ ನೋವಿಗಿಂತ ಹೆಚ್ಚು ನೋವು ಸನಾತನಿ ಆರ್ಯರಿಂದ ಅನುಭವಿಸಿದೆ. ಪ್ರಾಚೀನ ಶಿವ-ದ್ರಾವಿಡ, ಬೌದ್ಧ, ಜೈನ, ಚಾರ್ವಾಕ ಮುಂತಾದ ಸಂಸ್ಕೃತಿಗಳ ಮೇಲಿನ ದೌರ್ಜನ್ಯ ಹಾಗೂ ಅವುಗಳನ್ನು ಸನಾತನ ವಿಕೃತ ವ್ಯವಸ್ಥೆಯ ಆವರಣದೊಳಗೆ ಬಂಧಿಸಿಟ್ಟಿರುವ ಸತ್ಯವು ಸನಾತನಿಗಳ ಹುಸಿ ರಾಷ್ಟ್ರೀಯತೆಯ ಮುಖವಾಡದ ಪರಿಣಾಮದಿಂದ.

ಜಗತ್ತಿನಲ್ಲಿ ಧರ್ಮದ ಪರಿಕಲ್ಪನೆ ಹುಟ್ಟುವ ಪೂರ್ವದಲ್ಲಿಯೇ ಈ ನೆಲದಲ್ಲಿ ಸಾಂಸ್ಥಿಕ ಸ್ವರೂಪವಿಲ್ಲದ ಅನೇಕ ಅದೀಮ ನಂಬಿಕೆಗಳು ಧರ್ಮದ ಸ್ವರೂಪದಲ್ಲಿ ಅಸ್ತಿತ್ವದಲ್ಲಿದ್ದವು. ಅವು ಈ ಉಪಖಂಡದ ಉದ್ದಕ್ಕೂ ಬಹುವಿಧದಲ್ಲಿ ಆಚರಣೆಯಲ್ಲಿದ್ದವು. ಈಗಲೂ ಇವೆ. ಇಲ್ಲಿನ ಆದಿವಾಸಿಗಳು, ಬುಡಕಟ್ಟು ಜನರು, ಹಳ್ಳಿಗಾಡಿನ ಜನರು ಬೇರೆಬೇರೆಯದೇ ನಂಬಿಕೆಗಳ ಆಧಾರದಲ್ಲಿ ವಿಭಿನ್ನ ಆಚರಣೆಗಳನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಈ ಎಲ್ಲಾ ನಂಬಿಕೆಯ ಧರ್ಮಗಳು ಯಾವುದೇ ಒಂದು ವಿಚಾರಧಾರೆಯ ಅಥವಾ ಧರ್ಮದ ಕವಲುಗಳಾಗಿರದೆ ಅವೆಲ್ಲವೂ ಸ್ವತಂತ್ರವಾಗಿದ್ದು ಸಮಗ್ರವಾಗಿ ಭಾರತೀಯತೆಯನ್ನು ಪ್ರತಿನಿಧಿಸುತ್ತವೆ. ಅಂತಹ ಅಗಣಿತ ನಂಬಿಕೆಯ ಧರ್ಮಗಳನ್ನೆಲ್ಲ ಒಂದೇ ಧರ್ಮದ ಬಾಹುಬಂಧನದಲ್ಲಿ ಮುಳುಗಿಸುವ ಸನಾತನಿಗಳ ಹುನ್ನಾರ ಭಾರತದ ಹೃದಯದ ಮೇಲಿನ ಅಮಾನುಷ ದಾಳಿ ಎಂದೇ ಪರಿಗಣಿಸಬೇಕಿದೆ. ಈ ನೆಲವನ್ನು ಪ್ರೀತಿಸುವುದು, ಈ ನೆಲದ ಬಗ್ಗೆ ನಿಷ್ಠೆ ಹೊಂದುವುದು ಹಾಗೂ ಆ ಮೂಲಕ ನಮ್ಮನ್ನು ನಾವು ರಾಷ್ಟ್ರೀಯವಾದಿಗಳೆಂದು ಕರೆದುಕೊಳ್ಳಬೇಕೆಂದರೆ ಈ ಎಲ್ಲಾ ಬಹುತ್ವದ ಬೇರುಗಳನ್ನು ಗಟ್ಟಿಗೊಳಿಸುವುದೇ ಆಗಿದೆ. ಬಹುತ್ವವನ್ನು ನಾಶಗೊಳಿಸುವ ಹುನ್ನಾರಕ್ಕಿಂತ ರಾಷ್ಟ್ರದ್ರೋಹದ ಕೃತ್ಯ ಮತ್ತೊಂದಿಲ್ಲ.

ಭಾರತದ ತತ್ವಪರಂಪರೆ, ಅಧ್ಯಾತ್ಮ ಪರಂಪರೆ, ತತ್ವಜ್ಞಾನ ಹಾಗೂ ಸಾಂಸ್ಕೃತಿಕ ಪರಂಪರೆಯ ವ್ಯಾಪ್ತಿ ಅಗಾಧವಾಗಿದೆ. ಅದನ್ನು ಯಕಶ್ಚಿತ್ ಸನಾತನ ಪರಂಪರೆಯ ಚೌಕಟ್ಟಿನಲ್ಲಿ ನೋಡಲಾಗದು. ಬುದ್ಧಪೂರ್ವದ ಶಿವ-ದ್ರಾವಿಡ ಸಿದ್ಧಾಂತ, ಶೈವದ ಒಳ ಪ್ರಭೇದಗಳಾದ ಕಾಳಾಮುಖ, ಪಾಶುಪತ, ಕಾಪಾಲಿಕ ಮುಂತಾದವು, ನಾಥ, ಆರೂಢ, ಅವಧೂತ, ಅಚಲ, ಸಿದ್ಧ ಹಾಗೂ ಬೌದ್ಧ, ಜೈನ, ಲಿಂಗಾಯತ, ಶಿಖ ಹೀಗೆ ಅಸಂಖ್ಯಾತ ದರ್ಶನಗಳ ಆಗರವೇ ಭಾರತ. ಅದನ್ನು ಗೌರವಿಸುವುದೇ ಭಾರತೀಯ ರಾಷ್ಟ್ರೀಯತೆ. ಭಾರತೀಯತೆ ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಮೂಲ ಪರಂಪರೆಯನ್ನು ನಾಶಗೊಳಿಸಲು ಪ್ರಯತ್ನಿಸುವುದೇ ಹಿಂದೂ ರಾಷ್ಟ್ರೀಯತೆ. ಹಿಂದೂ ರಾಷ್ಟ್ರೀಯತೆಯು ಒಂದು ಮನೋವ್ಯಾಧಿ, ಸಾಂಕ್ರಮಿಕ ಪಿಡುಗು ಹಾಗೂ ರಾಷ್ಟ್ರದ್ರೋಹದ ಲಕ್ಷಣ. ಇತ್ತೀಚೆಗೆ ಈ ರಾಷ್ಟ್ರದ್ರೋಹದ ಅಟ್ಟಹಾಸ ಮೇರೆ ಮೀರುತ್ತ ಅದು ಈ ಉಪಖಂಡವನ್ನು ವಿನಾಶದ ಅಂಚಿಗೆ ದೂಡಿದೆ. ಸನಾತನಿಗಳು ಈ ನೆಲಕ್ಕೆ ಯಾವತ್ತೂ ನಿಷ್ಠರಾಗಿರಲಿಲ್ಲ ಎನ್ನುವುದು ಇತಿಹಾಸದುದ್ದಕ್ಕೂ ದಾಖಲಾಗುತ್ತ ಬಂದಿದೆ.

ನಾಲ್ಕು ಸಾವಿರ ವರ್ಷಗಳ ಹಿಂದೆ ಶಿವದ್ರಾವಿಡ ಸಂಸ್ಕೃತಿಯನ್ನು ಹಾಗೂ ಸಿಂಧೂ ಕಣಿವೆಯ ನಾಗರಿಕತೆಯನ್ನು ನಾಶಗೊಳಿಸಿದ್ದೇವೆ ಎಂದುಕೊಂಡಿದ್ದ ಸನಾತನಿಗಳು ಆ ದ್ರಾವಿಡ ಶಿವನನ್ನು ತಮ್ಮ ಅಪೂರ್ಣ ಸಂಸ್ಕೃತಿಯ ಭಾಗವಾಗಿಸಿಕೊಂಡರು. ಆದರೂ ಸನಾತನಿಗಳು ಪೂರ್ಣತೆಯನ್ನು ಮುಟ್ಟಲೇ ಇಲ್ಲ. ಆನಂತರ ತಮ್ಮ ವಿರುದ್ಧ ಒಂದು ಅವೈದಿಕ, ಪರಿಪೂರ್ಣ ಹಾಗೂ ಪರ್ಯಾಯ ಸಂಸ್ಕೃತಿಯನ್ನು ಹುಟ್ಟುಹಾಕಿದ ಬುದ್ಧನನ್ನು ಸನಾತನ ಸಂಸ್ಕೃತಿಯ ಭಾಗವಾಗಿಸಿಕೊಂಡರು. ಆಗಲೂ ಸನಾತನವು ಒಂದು ಪರಿಪೂರ್ಣ ಸಂಸ್ಕೃತಿಯಾಗಿ ಬದಲಾಗಲಿಲ್ಲ.

4,600 ವರ್ಷಗಳಷ್ಟು ಹಳೆಯ ನಾಗರಿಕತೆಗೆ ಸೇರಿದ ಇಲ್ಲಿನ ಎಲ್ಲಾ ಸಂಸ್ಕೃತಿಗಳಿಗೆ ಸನಾತನಿಗಳು ಚಡ್ಡಿ ತೊಡಿಸಲು ಮಾಡಿದ ಪ್ರತಿಯೊಂದು ಪ್ರಯತ್ನಗಳು ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಂಡರೂ ಅವು ಸಂಪೂರ್ಣ ಯಶಸ್ಸು ಗಳಿಸಲಿಲ್ಲ.

ಮುಂದೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕನ್ನಡ ಮಣ್ಣಿನ ಕಲ್ಯಾಣದಲ್ಲಿ ನಡೆದ ಸನಾತನ ವೈದಿಕ ವಿರೋಧಿ ಕ್ರಾಂತಿಯನ್ನು ಪ್ರತಿಕ್ರಾಂತಿಯ ಮೂಲಕ ಹಣಿಯಲು ಸನಾತನಿಗಳು ಅಂದು ಮಾಡಿದ ಹುನ್ನಾರ ಸಂಪೂರ್ಣ ಯಶಸ್ಸು ಗಳಿಸಲಿಲ್ಲ. ಶರಣರ ವಚನಗಳ ನಾಶದ ದುಸ್ಸಾಹಸ ಪೂರ್ತಿಯಾಗಿ ಕೈಗೂಡಲಿಲ್ಲ. ಆ ವಚನ ಸಂಸ್ಕೃತಿಯು ಮುಂದೆ ಮತ್ತೆ ಪುನರುತ್ಥಾನಗೊಂಡು ಸನಾತನಿಗಳನ್ನು ಇನ್ನಿಲ್ಲಂತೆ ಕಾಡುತ್ತಿದೆ. ಆಗ ಇರಿದು ಕೊಲ್ಲಲಾಗದ ಸನಾತನಿಗಳು ವಚನ ಸಂಸ್ಕೃತಿಯನ್ನು ‘ವಚನದರ್ಶನ’ದ ಮೂಲಕ ಈಗ ಅಪ್ಪಿ ಕೊಲ್ಲಲು ಮುಂದಾಗಿದ್ದಾರೆ. ಇಲ್ಲಿನ ಮೂಲ ಭಾರತೀಯತೆಯನ್ನು ನಾಶಗೊಳಿಸಲು ಸನಾತನಿಗಳು ಮಾಡಿದ ಪ್ರತಿಯೊಂದು ಪ್ರಯತ್ನಗಳಲ್ಲಿ ಸೋತದ್ದೇ ಹೆಚ್ಚು. ಆದರೆ ಅವರು ಸೋಲನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಸನಾತನಿಗಳ ವಿರುದ್ಧ ಬುದ್ಧ ಬಂಡೆದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾದ ಎನ್ನುವುದಕ್ಕಿಂತ ಆತನ ಬಂಡಾಯವೇ ಸನಾತನಿಗಳ ಸೋಲು. ಬಸವಕ್ರಾಂತಿಯನ್ನು ಸನಾತನಿಗಳು ಹತ್ತಿಕ್ಕಿದೆವು ಎಂದು ಸಮಾಧಾನ ಪಟ್ಟುಕೊಂಡರೂ ಅದು ಅವರ ತೋರಿಕೆಯ ಸಮಾಧಾನ. ಏಕೆಂದರೆ ವಚನ ಸಂಸ್ಕೃತಿ ಅವರಿಗೆ ಎಂದೆಂದಿಗೂ ಮಗ್ಗಲು ಮುಳ್ಳಾಗಿ ಕಾಡುತ್ತದೆ.

ಬಸವಣ್ಣ ಜನಿವಾರ ಕಿತ್ತೆಸೆದು ಹೊರಗೆ ಬಂದು ಒಂದು ಅವೈದಿಕ ಚಳವಳಿ ರೂಪಿಸಿದ್ದು ಹಾಗೂ ಆ ಚಳವಳಿಯನ್ನು ಸನಾತನಿಗಳು ಹಣಿಯಲು ಪ್ರಯತ್ನಿಸಿ ಭಾಗಶಃ ಯಶಸ್ವಿಯಾದರೂ ಬಸವಣ್ಣ ಜನಿವಾರ ಕಿತ್ತೆಸೆದು ಹೊರಗೆ ಬಂದ ಘಟನೆಯೇ ಸನಾತನಿಗಳ ಬಹು ದೊಡ್ಡ ಸೋಲು. ಬೌದ್ಧ ಧರ್ಮವನ್ನು ಸನಾತನಿಗಳು ಹಣಿದರೂ ಅದು ಮುಂದೆ ಡಾ. ಬಾಬಾಸಾಹೇಬರಿಂದ ಪುನರುತ್ಥಾನಗೊಂಡು ಸಂವಿಧಾನ ಮಾನ್ಯತೆಯನ್ನು ಪಡೆದು ಸ್ವತಂತ್ರವಾಗುವ ಮೂಲಕ ಸನಾತನಿಗಳಿಗೆ ಇಂದಿಗೂ ಕಾಡುತ್ತಿದೆ. ಸಿಖ್, ಜೈನ ಧರ್ಮಗಳೂ ಸಂವಿಧಾನದ ಮಾನ್ಯತೆಯನ್ನು ಪಡೆದು ಸನಾತನ ಚೌಕಟ್ಟಿನಿಂದ ಕಾನೂನಾತ್ಮಕವಾಗಿ ಹೊರಬಂದಾಗಿದೆ. ಇನ್ನು ಲಿಂಗಾಯತ ಧರ್ಮವು ಸಂವಿಧಾನ ಮಾನ್ಯತೆ ಚಳವಳಿಯನ್ನು ಚುರುಕುಗೊಳಿಸಿ ಗುಪ್ತಗಾಮಿನಿಯಂತೆ ವಿಸ್ತರಿಸುತ್ತಲಿದೆ. ಲಿಂಗಾಯತ ಚಳವಳಿಯು ಇನ್ನೆಂದಿಗೂ ವಿರಮಿಸದೆ ನಿರಂತರ ಪ್ರವಾಹದಂತೆ ಧುಮುಕುತ್ತ ಸಾಗುತ್ತಿದೆ.

ವಚನ ಚಳವಳಿಯ ಉತ್ಪನ್ನಗಳಾದ ವಚನಗಳು ಬಸವೋತ್ತರ ಯುಗದ ನಾಲ್ಕಾರು ಶತಮಾನಗಳಿಂದ ಪ್ರಕ್ಷಿಪ್ತಗೊಂಡಿವೆ. ಸಂಪಾದನೆಯ ನೆಪದಲ್ಲಿ ಮೂಲ ವಚನಗಳನ್ನು ಕಲಬೆರಕೆಗೊಳಿಸಲಾಗಿದೆ. ಸಂಸ್ಕೃತದ ಸಾಲುಗಳ ಸೇರ್ಪಡೆ, ವೀರಶೈವ ಪದ ಒಳ ನುಸುಳುವಿಕೆ ಮತ್ತು ಹಲವು ಕಡೆ ಮೂಲ ವಚನಕಾರರ ಅನೇಕ ಚಿಂತನೆಗಳ ತಿರುಚುವಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅನೇಕ ಖೊಟ್ಟಿ ವಚನಗಳು ಸಹ ವಚನ ಸಾಹಿತ್ಯದಲ್ಲಿ ಸೇರ್ಪಡೆಗೊಂಡಿವೆ. ಆದರೆ ವಚನ ಚಳವಳಿಯ ಮೂಲ ಆಶಯಗಳಾದ ವೇದಭಂಜಕ ಗುಣ, ಸನಾತನ ವಿಕೃತಿಯ ವಿರುದ್ಧದ ಧ್ವನಿ, ಸ್ತ್ರೀ ಸಮಾನತೆಯ ನೆಲೆಗಳು, ಜಾತಿ ವಿನಾಶದ ತುಡಿತ, ಕಾಯಕ ಸಂಸ್ಕೃತಿಯ ಹಿರಿಮೆ, ಉತ್ಪಾದಕ ವರ್ಗದ ಪ್ರಾಶಸ್ತ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಸತ್ತೆಗೆ ಹಾಕಿದ ಸವಾಲು, ಪ್ರಜಾಸತ್ತೆಯ ಪ್ರತಿಪಾದನೆ, ಮಾನವ ಹಕ್ಕುಗಳ ಪ್ರಸ್ತಾವ, ಸನಾತನ ವೈದಿಕ ಮೌಢ್ಯಗಳ ವಿಡಂಬನೆ ಇತ್ಯಾದಿ ಹೆಗ್ಗುರುತುಗಳನ್ನು ವಚನ ಸಂಸ್ಕೃತಿಯಿಂದ ಸನಾತನಿಗಳಿಗೆ ಇಂದಿಗೂ ಬೇರ್ಪಡಿಸಲು ಅಥವಾ ಅಳಿಸಲು ಸಾಧ್ಯವಾಗಿಲ್ಲ. ವಚನ ಸಾಹಿತ್ಯ ಮತ್ತು ಬಸವ ಸಂಸ್ಕೃತಿ ತುಳಿದಷ್ಟು ಮೇಲೇಳುತ್ತಿದೆ. ಚಿಗುಟಿದಷ್ಟು ಹುಲುಸಾಗಿ ಚಿಗುರುತ್ತಿದೆ.

ಅಂದಿನಿಂದ ವಚನ ಸಂಸ್ಕೃತಿಯನ್ನು ನೇರಾನೇರವಾಗಿ ಮುಗಿಸಲಾಗದ್ದರಿಂದ ಈಗ ಅದನ್ನು ಅಪ್ಪಿಕೊಂಡಂತೆ ನಟಿಸಿ ಮುಗಿಸಿ ಹಾಕುವ ಸನಾತನಿಗಳ ಹತಾಷ ಪ್ರಯತ್ನ ಮುಂದುವರಿದಿದೆ. ಈಗ ‘ವಚನದರ್ಶನ’ ಅಭಿಯಾನ ಆರಂಭಿಸಿದ್ದಾರೆ. ಈ ಅವಕಾಶವನ್ನು ಲಿಂಗಾಯತ ಪ್ರಜ್ಞಾವಂತರು ಬಳಸಿಕೊಳ್ಳದೆ ಬಿಟ್ಟಾರೆಯೆ! ಅದೇ ನೆಪದಲ್ಲಿ ಪ್ರತೀ ಜಿಲ್ಲೆಗಳಲ್ಲಿ ವಚನದರ್ಶನ ಅಭಿಯಾನ ಸಂಪೂರ್ಣವಾಗಿ ವಿಫಲಗೊಳ್ಳುತ್ತಿದೆ. ವೇದಿಕೆಯ ವೇಲಿನಿಂದ ಸನಾತನಿ ಸಂಘಟನಾ ಮೂಲದ ವ್ಯಕ್ತಿಗಳ ಮಾತುಗಳಂತೂ ಲಿಂಗಾಯತರಲ್ಲಿ ಸನಾತನಿಗಳ ಬಗ್ಗೆ ಆಕ್ರೋಶವನ್ನು ಘನೀಕರಿಸುತ್ತಿದೆ.

ಬಸವಕಲ್ಯಾಣದ ಅನುಭವ ಮಂಟಪ ಕಾಮಗಾರಿಯನ್ನು ನಿಲ್ಲಿಸಲು ಪೀರ್‌ಪಾಷಾ ದರ್ಗಾ ಇರುವ ಸ್ಥಳವೇ ಅನುಭವ ಮಂಟಪವಾಗಿತ್ತು ಎಂದು ವಿವಾದ ಸೃಷ್ಟಿಸಲು ಪ್ರಯತ್ನಿಸಿ ವಿಫಲವಾಗಿರುವ ಸನಾತನಿಗಳು ಆನಂತರ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮೇಲಂತೂ ಅಕ್ಷರಶಃ ಕಂಗಾಲಾಗಿದ್ದಾರೆ. ಅದರ ಫಲಶೃತಿಯೇ ‘ವಚನದರ್ಶನ’ ಅಭಿಯಾನ. ಅದು ಮಲಗಿದ್ದ ಲಿಂಗಾಯತರನ್ನು ಮತ್ತೆ ಬಡಿದೆಬ್ಬಿಸಿದೆ. ಈಗ ಪ್ರತೀ ಜಿಲ್ಲೆಗಳಲ್ಲಿ ವಚನದರ್ಶನವನ್ನು ವಿರೋಧಿಸಿ ಹೋರಾಟ, ಪ್ರತಿಭಟನೆ, ಪತ್ರಿಕಾಗೋಷ್ಠಿ, ವಿಚಾರ ಸಂಕೀರ್ಣ, ಪುಸ್ತಕ ಪ್ರಕಟಣೆ, ಸಮಾಲೋಚನಾ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಸಂಘಿ ಹುನ್ನಾರಗಳಿಂದ ಭಂಗಗೊಳ್ಳುತ್ತಿರುವ ಲಿಂಗಾಯತ ಮಠಗಳನ್ನು ನಿಯಂತ್ರಣಕ್ಕೆ ಪಡೆಯುವಲ್ಲಿ ಲಿಂಗಾಯತ ಅಸ್ಮಿತೆ ಕ್ರಮೇಣ ಯಶ ಕಾಣುತ್ತಿದೆ. ಬಹುತೇಕ ಕಡೆಗಳಲ್ಲಿ ‘ವಚನದರ್ಶನ’ ಕಾರ್ಯಕ್ರಮದಿಂದ ಲಿಂಗಾಯತ ಸಂಘಟನೆಗಳು ದೂರ ಉಳಿದರೆ ಪ್ರಮುಖ ಲಿಂಗಾಯತ ಮಠಾಧೀಶರು ಹಾಗೂ ಗಣ್ಯರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಒಟ್ಟಾರೆ ‘ವಚನದರ್ಶನ’ವು ಲಿಂಗಾಯತ ಸಂಸ್ಕೃತಿ ನಾಶಗೊಳಿಸುವ ಸಂಘಿಗಳ ಕುಟಿಲ ಹುನ್ನಾರವೆಂದು ಸಾಬೀತಾಗುತ್ತಿದೆ.

ಪ್ರಸಕ್ತ ವಚನದರ್ಶನ ಅಭಿಯಾನಕ್ಕೆ ಅನಿರೀಕ್ಷಿತವಾದ ಹಿನ್ನೆಡೆಯಾಗುತ್ತಿದ್ದರೂ ಸನಾತನಿಗಳು ಸೋಲನ್ನು ಒಪ್ಪಿಕೊಳ್ಳದೆ ತಮ್ಮ ಎಂದಿನ ನಿರ್ಲಜ್ಜ ಪ್ರದರ್ಶನ ಮುಂದುವರಿಸಿದ್ದಾರೆ. ‘ವಚನದರ್ಶನ’ ಅಭಿಯಾನದ ವಿರುದ್ಧ ಮುಂದಿನ ದಿನಗಳಲ್ಲಿ ಲಿಂಗಾಯತರಲ್ಲಿ ಇನ್ನೂ ಹೆಚ್ಚಿನ ಮಟ್ಟದ ಜಾಗೃತಿಯ ಕಾರ್ಯ ನಡೆಯುವ ಸಾಧ್ಯತೆಗಳು ಗರಿಗೆದರಿವೆ. ಬಹಿರಂಗವಾಗಿ ವಿರೋಧಿಸುವ ಬದಲಾಗಿ ಸನಾತನಿಗಳ ಹುನ್ನಾರದಿಂದ ಆಂತರಿಕವಾಗಿ ಸಡಿಲಗೊಳ್ಳುತ್ತಿರುವ ಲಿಂಗಾಯತ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಲಿಂಗಾಯತ ಮಠಾಧೀಶರು, ಸಂಘ ಸಂಸ್ಥೆಗಳು ಹಾಗೂ ಲಿಂಗಾಯತ ಪ್ರಜ್ಞಾವಂತರು ಬಹಳ ಕುಶಾಗ್ರಮತಿಯಿಂದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಬಸವಪ್ರಜ್ಞೆಯುಳ್ಳ ಲಿಂಗಾಯತ ಮಠಾಧೀಶರ ವಿರುದ್ಧ ಸನಾತನಿ ವೈದಿಕ ಮಾಧ್ಯಮಗಳು ಮಾಡುತ್ತಿರುವ ಅಪಪ್ರಚಾರ ಮತ್ತು ದಾಳಿಯ ಪ್ರಸಂಗಗಳನ್ನು ಲಿಂಗಾಯತ ಚಿಂತಕರು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಸವಪ್ರಜ್ಞೆಯನ್ನು ಹಾಗೂ ಅದನ್ನು ಪ್ರತಿಪಾದಿಸುವ ಮಠಾಧೀಶರು ಮತ್ತು ಚಿಂತಕರ ವಿರುದ್ಧ ಇರುವ ವೈದಿಕರ ಮನಸ್ಥಿತಿಯನ್ನು ಮುಗ್ಧ ಹಾಗೂ ಸಾಮಾನ್ಯ ಲಿಂಗಾಯತರಿಗೆ ಮನವರಿಕೆ ಮಾಡಿಸಲು ವೈದಿಕ ಮಾಧ್ಯಮಗಳ ಲಿಂಗಾಯತ ಸಂಸ್ಕೃತಿಯ ಮೇಲಿನ ಈ ಆಕ್ರಮಣಕಾರಿ, ಅನಾಗರಿಕ ಹಾಗೂ ಪೂರ್ವನಿರ್ಧಾರಿತ ದಾಳಿಗಳನ್ನು ಲಿಂಗಾಯತ ಚಿಂತಕರು ಸರಿಯಾಗಿಯೇ ಉಪಯೋಗಿಸುತ್ತಿದ್ದಾರೆ.

ಡಾ. ಕಲಬುರಗಿ ಹಾಗೂ ಗೌರಿ ಲಂಕೇಶ್ ಅವರ ಅಮಾನುಷ ಹತ್ಯೆಗಳ ನಂತರ ವೈದಿಕ ಮಾಧ್ಯಮಗಳು ಬಸವಪ್ರಜ್ಞೆಯ ಲಿಂಗಾಯತ ಮಠಾಧೀಶರು ಹಾಗೂ ಚಿಂತಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಸಂಘಟಿತ ದಾಳಿಯು ಲಿಂಗಾಯತರಲ್ಲಿ ಐಕ್ಯತೆಯನ್ನು ಮೂಡಿಸಲು ಸಹಕಾರಿಯಾಗುತ್ತಿದೆ. ಅದರ ಪರಿಣಾಮವಾಗಿ ಲಿಂಗಾಯತ ಮಠಗಳಲ್ಲಿ ವಚನ ಕಮ್ಮಟಗಳ ಭರಾಟೆ ಜೋರಾಗಿ ಬೀಸುತ್ತಿದೆ. ಒಟ್ಟಾರೆ ಪ್ರಾಚೀನ ಕಾಲದಿಂದಲೂ ಸನಾತನಿಗಳು ನಿರಂತರವಾಗಿ ಸೋಲುತ್ತಿದ್ದರೂ ಅದನ್ನು ಒಪ್ಪಿಕೊಳ್ಳದೆ ತಮಗಾದ ಹತಾಶೆಯನ್ನು ತೋರ್ಗೊಡದೆ ಎಂದಿನಂತೆ ತಮ್ಮ ಪರಂಪರಾಗತ ಗುಣಗಳಾದ ಅಪಾರ ತಾಳ್ಮೆ, ತಣ್ಣನೆಯ ಕ್ರೌರ್ಯ ಹಾಗೂ ನಂಬಿಸಿ ಕುತ್ತಿಗೆ ಕೊಯ್ಯುವ ದ್ರೋಹದ ಕಾರ್ಯವನ್ನು ಮುಂದುವರಿಸಿದ್ದಾರೆ. ಆರಂಭದಿಂದಲೂ ತಮ್ಮ ಪರಂಪರಾಗತ ವಂಶವಾಹಿನಿಯ ಗುಣದ ಅನುಸಾರ ಸನಾತನಿಗಳು ಮೂಲ ಭಾರತೀಯತೆಯ ಮುಖ್ಯವಾಹಿನಿಯಿಂದ ಹೊರಗುಳಿಯುವಲ್ಲಿ ಯಶಸ್ಸು ಕಂಡಿದ್ದಾರೆ.

ಈ ದೇಶಕ್ಕೆ ಹೊರಗಿನವರಾದ ಸನಾತನಿಗಳು ತಮ್ಮ ದುಷ್ಕೃತ್ಯಗಳು ಹಾಗೂ ಭಾರತೀಯತೆಗೆ ನಿಷ್ಠರಾಗದ ವಿದ್ರೋಹಿ ಮನಸ್ಥಿತಿಯಿಂದ ಮೂಲ ಭಾರತೀಯ ಮುಖ್ಯವಾಹಿನಿಯಿಂದ ಪ್ರಜ್ಞಾಪೂರ್ವಕವಾಗಿಯೇ ಹೊರಗುಳಿದಿದ್ದಾರೆ. ಸನಾತನಿಗಳು ಈ ನೆಲದ ಮುಖ್ಯವಾಹಿನಿಯಿಂದ ಹೊರಗುಳಿದಿರುವುದು ಹಾಗೂ ಈ ನೆಲಮೂಲ ಸಂಸ್ಕೃತಿಯ ವಿರುದ್ಧವಾಗಿರುವುದು ಒಂದು ರೀತಿಯಲ್ಲಿ ಅಂತಿಮವಾಗಿ ಈ ನೆಲದ ಬಹುತ್ವ ಸಂಸ್ಕೃತಿಗೆ ಸಲ್ಲಲಿರುವ ಜಯವಾಗಲಿದೆ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಮೇಲೆ ವಿದೇಶಿ ಸಂಸ್ಕೃತಿ ಪ್ರಭುತ್ವ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆಯಾ ಕಾಲಘಟ್ಟದಲ್ಲಿ ಸನಾತನಿಗಳ ತಾತ್ಕಾಲಿಕ ಗೆಲುವುಗಳು ಹಾಗೂ ನಿರಂತರ ಸರಣಿ ಸೋಲುಗಳು ಅವರನ್ನು ಬಹಿರಂಗವಾಗಿ ಹತಾಶೆಗೊಳಿಸದಿದ್ದರೂ ಅವರಲ್ಲಿ ಆಂತರಿಕ ಬೇಗುದಿ ಹಾಗೂ ನಿರಂತರ ಅಭದ್ರತೆಯನ್ನಂತೂ ಖಾಯಂ ಗೊಳಿಸಿವೆ. ಇದು ಅವರನ್ನು ಭಾರತೀಯ ಮೂಲ ರಾಷ್ಟ್ರೀಯತೆಯಿಂದ ಪ್ರತ್ಯೇಕಿಸಿ ವಿಘಟನೆ ಹಿನ್ನೆಲೆಯ ಹುಸಿ ಹಿಂದುತ್ವ ರಾಷ್ಟ್ರೀಯತೆಯ ಕೊಚ್ಚೆಗೆ ದೂಡಿದೆ ಎನ್ನುವುದಂತೂ ಸತ್ಯ. ಇದು ಸನಾತನಿಗಳ ಸ್ವಯಂಕೃತ ಅಪರಾಧದ ಹಾಗೂ ಈ ದೇಶಕ್ಕೆ ಬಗೆದ ನಿರಂತರ ದ್ರೋಹದ ಫಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಜೆ.ಎಸ್. ಪಾಟೀಲ

contributor

Similar News