‘ಒಂದು ರಾಷ್ಟ್ರ ಒಂದು ಚುನಾವಣೆ’ಯಿಂದ ದೇಶದ ಉದ್ಧಾರ ಸಾಧ್ಯವೇ?

ಅಸ್ಥಿರತೆಯ ಲಾಭ ಪಡೆಯುತ್ತಲೇ ಬಂದಿರುವ, ಇನ್ನೊಂದು ಸರಕಾರವನ್ನು ಅಸ್ಥಿರಗೊಳಿಸಿ ತಾನು ಆಕ್ರಮಿಸಿಕೊಂಡ ಈ ಆಡಳಿತಾರೂಢರು ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದನ್ನು ತಮ್ಮ ಸಾಧನೆಯ ಪಟ್ಟಿಯಲ್ಲಿ ಸೇರಿಸುವುದಕ್ಕಾಗಿ ಮಾತ್ರ ಮಾಡುತ್ತಿದ್ದಾರೆಯೆ?

Update: 2024-09-22 09:25 GMT

‘ಒಂದು ದೇಶ, ಒಂದು ಚುನಾವಣೆ’ ಆಕರ್ಷಕ ಎನಿಸಿದರೂ ಅದೊಂದು ದೊಡ್ಡ ನಿರ್ಧಾರ. ಅದನ್ನು ಸಾಧಿಸಲು, ಎಲ್ಲಾ ಅಂಶಗಳನ್ನು ಸರಿಯಾಗಿ ಯೋಚಿಸಬೇಕು. ದೇಶದಲ್ಲಿ ಒಂದೇ ಬಾರಿಗೆ ಎಲ್ಲ ಚುನಾವಣೆಗಳೂ ನಡೆದು ಬಿಟ್ಟರೆ ಸರಕಾರಗಳು ಐದು ವರ್ಷಗಳ ಕಾಲ ಮಹತ್ತರವಾದ ಕೆಲಸವನ್ನು ಮಾಡುತ್ತವೆ ಎಂಬ ನಂಬಿಕೆಗೆ ಯಾವುದೇ ಆಧಾರವಿಲ್ಲ.

ನಿಯಮದ ಪ್ರಕಾರ ಐದು ವರ್ಷಗಳಿಗೂ ಮುನ್ನವೇ ಕೆಟ್ಟ ಸಂಸದರು, ಶಾಸಕರನ್ನು ಮತದಾನದ ಮೂಲಕ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆಯಾಗಬೇಕು. ಐದು ವರ್ಷಗಳಿಗೆ ಆಯ್ಕೆಯಾದ ನಂತರ ಆ ಕ್ಷೇತ್ರಕ್ಕೆ ಹೋಗದೆ, ಟಿಕೆಟ್ ಆಯ್ಕೆ ವೇಳೆಯೇ ಅವರು ಬೇರೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲೂಬಹುದು.

ಆಗಾಗ ಪಂಚಾಯತ್ ಚುನಾವಣೆ, ಕಾರ್ಪೊರೇಶನ್ ಚುನಾವಣೆ, ಎಂಎಲ್‌ಎ, ಎಂಎಲ್‌ಸಿ ಚುನಾವಣೆ ನೆಪದಲ್ಲಿ ಆ ಎಂಪಿ ಅಥವಾ ಎಂಎಲ್‌ಎ ತನ್ನ ಕ್ಷೇತ್ರದ ಮತದಾರರ ಕೈಗೆ ಸಿಗುವ ಸಾಧ್ಯತೆ ಇರುತ್ತದೆ. ಆದರೆ ಎಲ್ಲ ಚುನಾವಣೆ ಒಟ್ಟಿಗೆ ಐದು ವರ್ಷಕ್ಕೊಮ್ಮೆ ನಡೆಯುವುದಾದರೆ ಆ ಎಂಎಲ್‌ಎ ಅಥವಾ ಎಂಪಿ ಜನರ ನಡುವೆ ಯಾಕೆ ಬರುತ್ತಾರೆ? ಇದಕ್ಕೂ ಏನಾದರೂ ಪರಿಹಾರ ಕಂಡುಕೊಳ್ಳಲಾಗುತ್ತಿದೆಯೇ?

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿ 2024ರ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು. ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಮಿತಿ ಶಿಫಾರಸು ಮಾಡಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಎರಡನೇ ಹಂತ. ಆದರೆ ಒಂದು ಪ್ರಶ್ನೆ.

ಈಗ ಕೇವಲ ನಾಲ್ಕೈದು ರಾಜ್ಯಗಳಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವುದಕ್ಕೇ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ಮಹಿಳಾ ಮೀಸಲಾತಿ ಮಸೂದೆಯ ಕಥೆ ಏನಾಯಿತು ಎಂದು ನೋಡಿದ್ದೇವೆ. ಮಸೂದೆ ಅಂಗೀಕರಿಸುವಾಗ, ಎಷ್ಟೆಲ್ಲ ವೈಭವೀಕರಣ ನಡೆಯಿತು. ಆಮೇಲೆ ಅದು ಅನುಷ್ಠಾನವಾಗುವ ಮಾತು ಸದ್ಯಕ್ಕಂತೂ ಇಲ್ಲ ಎಂದಾಯಿತು.

2024ರ ಚುನಾವಣೆಗಾಗಿಯೇ ಮಸೂದೆ ಅಂಗೀಕರಿಸಲಾಗುತ್ತಿದೆ ಎನ್ನಿಸಿಬಿಟ್ಟಿತ್ತು. ಆದರೆ ಈಗ ನಡೆಯಲಿರುವ ರಾಜ್ಯ ಚುನಾವಣೆಗಳಲ್ಲೂ ಅದರ ಅನುಷ್ಠಾನವಾಗುವುದಿಲ್ಲ. ಯಾವಾಗ ಜಾರಿಗೆ ಬರುತ್ತದೆ ಎಂಬುದೇ ಗೊತ್ತಿಲ್ಲ. ಆದರೆ ಹೆಡ್‌ಲೈನ್‌ಗಳಲ್ಲಂತೂ ಮಹಿಳಾ ಮೀಸಲಾತಿ ರಾರಾಜಿಸಿಬಿಟ್ಟಿತ್ತು.

ಕ್ಷೇತ್ರ ಪುನರ್ವಿಂಗಡಣೆ ಬಳಿಕವೇ ಜಾರಿ ಎನ್ನಲಾಗಿದೆ. ಆದರೆ 2026ರವರೆಗೂ ಕ್ಷೇತ್ರ ಪುನರ್ವಿಂಗಡಣೆ ಇಲ್ಲವೇ ಇಲ್ಲ. 2029ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜಾರಿಯಾಗುವ ಸಾಧ್ಯತೆ ಕೂಡ ಬಹಳ ಕಡಿಮೆ ಎಂದೇ ಹೇಳಲಾಗುತ್ತಿದೆ. 2034ರಲ್ಲಷ್ಟೇ ಅದು ಜಾರಿಗೆ ಬರಬಹುದು. ಅಂದರೆ 10 ವರ್ಷಗಳ ನಂತರ ಜಾರಿಯಾಗಬಹುದಾದ ಕಾಯ್ದೆ 2024ರಲ್ಲಿ ಅಂಗೀಕಾರವಾಗಿದೆ.

ಅದೇ ರೀತಿಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಯಾವಾಗಿಂದ ನಡೆಯಲಿದೆ? ಅಂದರೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಯುವುದು ಯಾವಾಗಿನಿಂದ? ಇದೇ ಅವಧಿಯಲ್ಲಿ ಮಸೂದೆ ಪಾಸಾಗುವುದರ ಬಗ್ಗೆ ಮಾತ್ರ ಅಮಿತ್ ಶಾ ಹೇಳುತ್ತಿದ್ದಾರೆಯೆ? ಹಾಗಾದರೆ ಜಾರಿ ಆಗುವುದು ಯಾವಾಗ ಎಂಬುದು ಉತ್ತರವೇ ಗೊತ್ತಿರದ ಪ್ರಶ್ನೆಯೆ?

ಈಗ ಘೋಷಣೆಯಾಗಿರುವ ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಜೊತೆಗೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನೂ ನಡೆಸಬಹುದಿತ್ತು. ಆದರೆ ಅದಾಗುತ್ತಿಲ್ಲ. ಅವೆರಡೂ ರಾಜ್ಯಗಳ ಚುನಾವಣೆ ಘೋಷಣೆಯೂ ಆಗಿಲ್ಲ. ನಾಲ್ಕು ರಾಜ್ಯಗಳ ಚುನಾವಣೆಯನ್ನೇ ಏಕಕಾಲಕ್ಕೆ ಮಾಡಲಾರದ ನಾವು ಒಂದು ರಾಷ್ಟ್ರ ಒಂದು ಚುನಾವಣೆ ಮಾಡಲು ಹೇಗೆ ಸಾಧ್ಯವಿದೆ?

ಮತ್ತೆ ಮತ್ತೆ ಚುನಾವಣೆ ನಡೆಯುವುದರಿಂದ ಆಗುವ ನಷ್ಟವೇನು, ಬಾಧೆಯೇನು? ಈ ಪ್ರಶ್ನೆಗಳಿಗೆ ಸರಕಾರ ಉತ್ತರಿಸುತ್ತಿಲ್ಲ. ಬದಲಾಗಿ ದೇಶಕ್ಕೆ ದೊಡ್ಡ ಉಪಕಾರವಾಗಲಿದೆ ಎಂದು ಬಿಂಬಿಸುತ್ತ, ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಮುನ್ನೆಲೆಗೆ ತರುತ್ತಿದೆ.

ಸ್ಥಿರತೆಯ ಮಾತಾಡುವವರು ಸ್ಥಿರ ಸರಕಾರಕ್ಕಾಗಿ ಪಕ್ಷಾಂತರ ಕಾಯ್ದೆಯನ್ನೇಕೆ ಬಲಪಡಿಸಲು ಮುಂದಾಗುತ್ತಿಲ್ಲ. ಒಂದು ಪಕ್ಷದಿಂದ ಗೆದ್ದವರು ಆ ಪಕ್ಷದಲ್ಲಿಯೇ ಮುಂದುವರಿಯಬೇಕು ಎಂಬ ಕಠಿಣ ನಿರ್ಬಂಧವನ್ನು ಏಕೆ ಹಾಕಲಾಗುತ್ತಿಲ್ಲ?

ಚುನಾವಣೆ ನಡೆದು ಜನಾದೇಶ ಪಡೆದು ಸರಕಾರ ರಚಿಸಿದ ಪಕ್ಷದಿಂದ ಅದೆಷ್ಟು ಬಾರಿ ಬಿಜೆಪಿಯೇ ಶಾಸಕರನ್ನು ಸೆಳೆದು ಸರಕಾರವನ್ನು ಉರುಳಿಸಿಲ್ಲ? ಅದೆಷ್ಟು ಕಡೆ ಚುನಾವಣೆ ನಡೆದು ಸರಕಾರ ರಚಿಸಿ ವರ್ಷದೊಳಗೆ, ಎರಡು ವರ್ಷದೊಳಗೆ ಉಪಚುನಾವಣೆ ನಡೆಯುವ ಹಾಗೆ ಬಿಜೆಪಿಯೇ ಮಾಡಿದೆ? ಆಪರೇಷನ್ ಹೆಸರಲ್ಲಿ ಶಾಸಕರನ್ನು ಪಕ್ಷಾಂತರ ಮಾಡಿಸಿ ಉಪಚುನಾವಣೆ ಮಾಡಿಸುವುದನ್ನು ತಡೆಯಲು ಮೋದಿ ಯಾಕೆ ಕಾನೂನು ತರುವುದಿಲ್ಲ?

ಅಸ್ಥಿರತೆಯ ಲಾಭ ಪಡೆಯುತ್ತಲೇ ಬಂದಿರುವ, ಇನ್ನೊಂದು ಸರಕಾರವನ್ನು ಅಸ್ಥಿರಗೊಳಿಸಿ ತಾನು ಆಕ್ರಮಿಸಿಕೊಂಡ ಈ ಆಡಳಿತಾರೂಢರು ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದನ್ನು ತಮ್ಮ ಸಾಧನೆಯ ಪಟ್ಟಿಯಲ್ಲಿ ಸೇರಿಸುವುದಕ್ಕಾಗಿ ಮಾತ್ರ ಮಾಡುತ್ತಿದ್ದಾರೆಯೆ?

ಮೋದಿ ಬಳಿ 10 ವರ್ಷಗಳ ಕಾಲ ಪ್ರಚಂಡ ಬಹುಮತ ಇತ್ತು. ಹಾಗಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಅವರಿಗೆ ಕಷ್ಟವಾಗಲಿಲ್ಲ. ಹೀಗಿರುವಾಗ ಚುನಾವಣೆಯಿಂದ ತೊಂದರೆ ಎಂದು ದೂಷಿಸುವುದು ಏಕೆ?

ಭಾರತ ವಿಶಾಲವಾದ, ವೈವಿಧ್ಯಮಯ ದೇಶ. ಮತ್ತೆ ಮತ್ತೆ ಚುನಾವಣೆ ನಡೆದರೆ ತಪ್ಪೇನು?

ಕೋವಿಂದ್ ಸಮಿತಿ ತನ್ನ ವರದಿಯಲ್ಲಿ ಪ್ರತೀ ವರ್ಷ ಚುನಾವಣೆಗಳು ನಡೆಯುವುದರಿಂದ ಐದು ವರ್ಷಗಳ ಅರ್ಧ ಅವಧಿಯೇ ಚುನಾವಣೆಯಲ್ಲಿ ಕಳೆದುಹೋಗುತ್ತದೆ ಎಂದಿದೆ.

ಚುನಾವಣೆ ನಡೆಯುವುದರಿಂದ ಕೇಂದ್ರ ಸರಕಾರದ ಅರ್ಧ ಸಮಯ ವ್ಯರ್ಥವಾಗುತ್ತದೆ ಎಂದಾದಲ್ಲಿ ಅದಕ್ಕೆ ಮೋದಿಯೇ ಪೂರ್ತಿ ಹೊಣೆಗಾರರು ಎನ್ನುತ್ತಾರೆ ಹಿರಿಯ ಪತ್ರಕರ್ತ ರವೀಶ್ ಕುಮಾರ್.

ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ಮೋದಿಯದ್ದು ಭಯಂಕರ ಪ್ರಚಾರ. ಯಾವ ರಾಜ್ಯದಲ್ಲಿ ಮೋದಿ ಎಷ್ಟೆಷ್ಟು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂಬೆಲ್ಲ ಪ್ರಶ್ನೆಗಳ ಮೂಲಕ ಮೋದಿಯ ಚುನಾವಣಾ ಭಾಷಣಗಳನ್ನೂ ಅವರ ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ. ಹಿಂದೆ ಯಾವ ಪ್ರಧಾನಿಯೂ ರಾಜ್ಯಗಳ ಚುನಾವಣೆಗಳಲ್ಲಿ ಇಷ್ಟು ಸಂಖ್ಯೆಯ ರ್ಯಾಲಿಗಳನ್ನು ನಡೆಸಿದ್ದೇ ಇಲ್ಲ.

ರಾಜ್ಯಗಳ ಚುನಾವಣೆಗಳಲ್ಲಿ ಅವರು ಪಕ್ಷದ ರಾಜ್ಯಾಧ್ಯಕ್ಷನ ರೀತಿಯಲ್ಲಿ ಪ್ರಚಾರ ಮಾಡುತ್ತ ಉಳಿದುಬಿಟ್ಟರೆ ಅರ್ಧ ಸಮಯ ಹಾಗೆಯೇ ಕಳೆದುಹೋಗುವುದು ನಿಶ್ಚಿತ. ಈ ಕಾರಣದಿಂದ ರಾಜ್ಯ ಚುನಾವಣೆಗಳೆಲ್ಲ ಲೋಕಸಭೆ ಚುನಾವಣೆಯೇನೋ ಎಂಬಂತೆ ಆಗಿಬಿಟ್ಟಿತ್ತು.

ಕೋವಿಂದ್ ಸಮಿತಿ ವರದಿಗೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಬಿಜು ಜನತಾ ದಳ, ಟಿಎಂಸಿ, ಸಮಾಜವಾದಿ ಪಕ್ಷ, ಆರ್‌ಜೆಡಿ, ಎಎಪಿ ಅಂತಹ ಪ್ರಮುಖ ಪಕ್ಷಗಳು ವರದಿಗೆ ವಿರುದ್ಧವಾಗಿವೆ. ಹಲವು ಪ್ರಶ್ನೆಗಳನ್ನಂತೂ ಇದು ಹುಟ್ಟುಹಾಕಿದೆ.

ಐದು ವರ್ಷಕ್ಕೂ ಮುನ್ನವೇ ಕೆಟ್ಟ ಸಂಸದರು, ಶಾಸಕರನ್ನು ಮತದಾನದ ಮೂಲಕ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆಯಾಗಬೇಕು. ಐದು ವರ್ಷಕ್ಕೆ ಆಯ್ಕೆಯಾದ ನಂತರ ಆ ಕ್ಷೇತ್ರಕ್ಕೆ ಹೋಗದೆ, ಟಿಕೆಟ್ ಆಯ್ಕೆ ವೇಳೆಯೇ ಬೇರೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ.

ಇದಕ್ಕೆಲ್ಲ ಏನಾದರೂ ಪರಿಹಾರ ಕಂಡುಕೊಳ್ಳದೆ, ಒಂದು ರಾಷ್ಟ್ರ ಒಂದು ಚುನಾವಣೆ ಬರುವುದರಿಂದ ಹೊಸದೇನು ಸಾಧ್ಯವಾದೀತು?

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಿ.ಎನ್. ಉಮೇಶ್

contributor

Similar News