ಬಿಳಿಯ ಕೋಡಂಗಿಯ ಉದಯ

ಅಮೆರಿಕದ ಚೌಕಿದಾರರಂತೆ ಕಾರ್ಯ ನಿರ್ವಹಿಸುವಂತೆ ಭಾರತದಂತಹ ದೇಶಗಳನ್ನು ಆಗ್ರಹಿಸುವ ಮೂಲಕ ಏಶ್ಯವನ್ನು ತನ್ನ ಕಬ್ಜಾದಲ್ಲಿಟ್ಟುಕೊಳ್ಳುವ ಒಬಾಮಾ ಮತ್ತು ಬೈಡನ್ ನೀತಿಗಳನ್ನು ಟ್ರಂಪ್ ಆಡಳಿತವು ಅನುಸರಿಸಲಿದೆ. ಯಾವುದೇ ಬೆಲೆಯನ್ನು ತೆತ್ತಾದರೂ ಇದನ್ನು ವಿರೋಧಿಸಬೇಕು. ಟ್ರಂಪ್ ಅನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಚೀನಾದ ವಿರುದ್ಧ ಟ್ರಂಪ್ ಮತ್ತು ಅವರ ಸಂಪುಟದ ರಣೋತ್ಸಾಹವು ಭಾರತ ಮತ್ತು ವಿಶ್ವಕ್ಕೆ ಬಹಳ ಕಷ್ಟಕರ ಸನ್ನಿವೇಶಕ್ಕೆ ಕಾರಣವಾಗಬಹುದು. ಮಿತ್ರದೇಶಗಳನ್ನು ಮಧ್ಯದಲ್ಲಿಯೇ ಕೈಬಿಡುವುದು ಅಮೆರಿಕದ ಚಾಳಿಯಾಗಿದೆ.;

Update: 2025-03-22 11:09 IST
Editor : Thouheed | Byline : ಶುಭಂ ಶರ್ಮಾ
ಬಿಳಿಯ ಕೋಡಂಗಿಯ ಉದಯ
  • whatsapp icon

ಕೋಡಂಗಿಯೋರ್ವ ಅರಮನೆಯನ್ನು ಪ್ರವೇಶಿಸಿದರೆ ಆತ ರಾಜನಾಗು ವುದಿಲ್ಲ, ಅರಮನೆಯೇ ಸರ್ಕಸ್ ಆಗಿ ಬದಲಾಗುತ್ತದೆ- ಇದು ಪ್ರಸಿದ್ಧ ಟರ್ಕಿಷ್ ನಾಣ್ಣುಡಿ. ಅಮೆರಿಕದ ಸಾಮ್ರಾಜ್ಯಶಾಹಿ ಅರಮನೆಗೆ ಈಗ ಆಗಿರುವುದು ಇದೇ. ಬಿಳಿಯ ಕೋಡಂಗಿ ಡೊನಾಲ್ಡ್ ಟ್ರಂಪ್ ಪ್ರತಿಗಾಮಿ, ನಿರ್ದಯ, ಜನಾಂಗೀಯ ಮತ್ತು ಪ್ರಕ್ಷುಬ್ಧ ಅಭಿಯಾನದ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಅವರ ಅಭಿಯಾನದ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ ‘ಉನ್ನತ ವರ್ಗದವರು’ ಎಂದು ಕರೆಯಲಾಗುವ ವರ್ಗದ ವಿರುದ್ಧ ಅವರ ಆಡಳಿತ ವಿರೋಧಿ ನಿಲುವು. ಟ್ರಂಪ್ ಸ್ವತಃ ಅದೇ ಉನ್ನತ ವರ್ಗಕ್ಕೆ ಸೇರಿದ್ದರೂ ಮತ್ತು 6.1 ಶತಕೋಟಿ ಡಾಲರ್‌ಗಳ ನಿವ್ವಳ ಸಂಪತ್ತು ಹೊಂದಿದ್ದರೂ ತನಗೆ ಮತ ಹಾಕುವಂತೆ ಅಮೆರಿಕನ್ ಕಾರ್ಮಿಕರನ್ನು ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಶ್ರೀಮಂತ ಅಧ್ಯಕ್ಷರಾಗಿದ್ದಾರೆ. ಅವರ ಸಂಪುಟದಲ್ಲಿ ನೇಮಕಗೊಂಡಿರುವವರು ಒಟ್ಟಾಗಿ 460 ಶತಕೋಟಿ ಡಾಲರ್‌ಗಳ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ, ಈ ಪೈಕಿ ಎಲಾನ್ ಮಸ್ಕ್ ಅವರೊಬ್ಬರದೇ ಪಾಲು 400 ಶತಕೋಟಿ ಡಾಲರ್‌ಗಳಾಗಿವೆ.

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಮಹಾ ಶ್ರೀಮಂತ ವ್ಯಕ್ತಿಯೋರ್ವ ತನ್ನ ತುಟಿಗಳಲ್ಲಿ ಪೊಳ್ಳು ಜನಪರ ಘೋಷಣೆಗಳೊಂದಿಗೆ ರಾಜಕೀಯ ಅಧಿಕಾರದ ಹಿಂದೆ ಬಿದ್ದಿರುವುದನ್ನು ನೋಡುವುದು ತುಂಬ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ ಶ್ರೀಮಂತರು ತೆರೆಮರೆಯಿಂದ ಸೂತ್ರಧಾರರ ಪಾತ್ರವನ್ನು ವಹಿಸಿ ಅಧಿಕಾರದಲ್ಲಿರುವವರನ್ನು ಗೊಂಬೆಗಳಂತೆ ಕುಣಿಸುತ್ತಿರುತ್ತಾರೆ. ಮೋದಿಯವರ ನೇತೃತ್ವದಡಿ ಭಾರತವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತದ ಪ್ರಬಲ ಬಂಡವಾಳಶಾಹಿಗಳು ಮೋದಿಯವರಿಗೆ ಐತಿಹಾಸಿಕವಾಗಿ ಅಭೂತಪೂರ್ವ ಪ್ರಮಾಣದಲ್ಲಿ ಆರ್ಥಿಕ ಬೆಂಬಲವನ್ನು ನೀಡುತ್ತಿದ್ದಾರೆ. ಆದರೂ ಮೋದಿ ತನ್ನನ್ನು ಬಡ ಚಾಯ್‌ವಾಲಾ, ಹಿಂದುಳಿದ ವರ್ಗದವನು, ಅಲೆದಾಡುವ ಅವಿವಾಹಿತ ಮತ್ತು ‘ತಪಸ್ವಿ’ ಎಂದು ಸ್ವಯಂ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ತನ್ನ ವೈಯಕ್ತಿಕ ಬಡತನ ಮತ್ತು ಕಷ್ಟಗಳ ಸೋಗಿನ ಮೂಲಕ ತನ್ನನ್ನು ಬೆಂಬಲಿಸುತ್ತಿರುವ ನಿಜವಾದ ಶಕ್ತಿಗಳನ್ನು ಬಚ್ಚಿಟ್ಟುಕೊಳ್ಳಲು ಮೋದಿ ಇದೆಲ್ಲವನ್ನೂ ಮಾಡುತ್ತಿದ್ದಾರೆ.

ಟ್ರಂಪ್ ಈ ವಿಧಾನವನ್ನು ಅನುಸರಿಸುವುದಿಲ್ಲ. ಅವರು ತನ್ನ ಸಂಪತ್ತನ್ನು ಪ್ರದರ್ಶಿಸುತ್ತಾರೆ, ಕಾರ್ಪೊರೇಟ್ ಶೈಲಿಯಲ್ಲಿ ಒಪ್ಪಂದಗಳನ್ನು ಸಾಧಿಸುವ ತನ್ನ ಸಾಮರ್ಥ್ಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಶುದ್ಧ ವ್ಯವಹಾರ ಶೈಲಿಯಲ್ಲಿ ಅವರು ಅಧಿಕಾರಿಶಾಹಿಯ ವಿಳಂಬ ತಂತ್ರಗಳನ್ನು ದ್ವೇಷಿಸುತ್ತಾರೆ. ಇದೆಲ್ಲವನ್ನೂ ಅಮೆರಿಕದ ಜನತೆ ವ್ಯಾಪಕವಾಗಿ ಒಪ್ಪಿಕೊಂಡಿದ್ದಾರೆ. ಏಕೆ ಹೀಗೆ?

ಅಮೆರಿಕವು ಸೂಪರ್‌ಮಾರ್ಕೆಟ್‌ನ ಶೆಲ್ಫ್‌ಗಳಲ್ಲಿ 50 ಟೂಥ್‌ಪೇಸ್ಟ್ ಬ್ರ್ಯಾಂಡ್‌ಗಳ ಅಭಿರುಚಿಯನ್ನು ಬೆಳೆಸಿಕೊಂಡಿರುವ ದೇಶವಾಗಿದೆ. ಆದರೆ ರಾಜಕೀಯದಲ್ಲಿ ಮಾತ್ರ ಕೇವಲ ಎರಡು ಪಕ್ಷಗಳಿಗೆ ಆದ್ಯತೆ ನೀಡಿದೆ. 1970ರ ದಶಕದಿಂದಲೂ ಡೆಮಾಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ರ ಆರ್ಥಿಕ ಮತ್ತು ರಾಜಕೀಯ ಬದ್ಧತೆಗಳು ಬಹುತೇಕ ಒಂದೇ ಆಗಿವೆ. ವಿದೇಶಗಳಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮತ್ತು ಸ್ವದೇಶದಲ್ಲಿ ನವ ಉದಾರೀಕರಣವನ್ನು ಕಾಯ್ದುಕೊಳ್ಳುವುದು ಈ ಏಕತೆಯ ತಿರುಳಾಗಿದೆ.

1980ರ ದಶಕದ ಉತ್ತರಾರ್ಧದಲ್ಲಿ ಉತ್ಪಾದನಾ ಕೇಂದ್ರವಾಗಿ ಚೀನಾದ ಉದಯವು ಅಮೆರಿಕದ ಕಂಪೆನಿಗಳು ತಮ್ಮ ಉತ್ಪಾದನೆಯನ್ನು ವಿದೇಶಗಳಿಗೆ ಸ್ಥಳಾಂತರಿಸಲು ಕಾರಣವಾಯಿತು, ಪರಿಣಾಮವಾಗಿ ಉತ್ಪಾದನಾ ಕ್ಷೇತ್ರದ ನೇಮಕಾತಿಗಳಲ್ಲಿ ತೀವ್ರ ಕುಸಿತವುಂಟಾಗಿತ್ತು. 2000 ಮತ್ತು 2007ರ ನಡುವಿನ ಅವಧಿಯಲ್ಲಿ ಅಮೆರಿಕದ ಉತ್ಪಾದನಾ ಉದ್ಯೋಗಗಳ ಸಂಖ್ಯೆ ಐದನೇ ಒಂದು ಭಾಗ(36 ಲಕ್ಷ)ಕ್ಕೆ ಕುಗ್ಗಿತ್ತು. ಚೀನಾದ ರಫ್ತುಗಳಲ್ಲಿ ಹೆಚ್ಚಳವು 1990 ಮತ್ತು 2007ರ ನಡುವಿನ ಅವಧಿಯಲ್ಲಿ ಅಮೆರಿಕದ ಕಾಲುಭಾಗದಷ್ಟು ಉತ್ಪಾದನಾ ಉದ್ಯೋಗಗಳ ನಷ್ಟಕ್ಕೆ ಮತ್ತು 2000 ಮತ್ತು 2015ರ ನಡುವಿನ ಅವಧಿಯಲ್ಲಿ ಬ್ರಿಟನ್‌ನಲ್ಲಿ ಐದನೇ ಒಂದು ಭಾಗದಿಂದ ಮೂರನೇ ಒಂದು ಭಾಗ ಕುಸಿತಕ್ಕೆ ಕಾರಣವಾಗಿತ್ತು.

ಇನ್ನೊಂದೆಡೆ, ತುಂಬಾ ಅಗ್ಗದ ಚೀನಿ ಕಾರ್ಮಿಕರನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಉತ್ಪಾದನಾ ಪ್ರಕ್ರಿಯೆಯನ್ನು ಮರುರೂಪಿಸಿಕೊಂಡಿದ್ದ ಕಂಪೆನಿಗಳ ಉತ್ಪಾದಕತೆ ಮತ್ತು ಲಾಭವು ಹೆಚ್ಚಾಗಿತ್ತು. ಸ್ಪರ್ಧಾತ್ಮಕವಲ್ಲದ ಉತ್ಪಾದನೆಯನ್ನು ಕೈಬಿಡಲಾಗಿದ್ದರಿಂದ ಅಮೆರಿಕದ ಉತ್ಪಾದನಾ ಕ್ಷೇತ್ರವು ಎರಡು ಪರಿಣಾಮಗಳ ಲಾಭವನ್ನು ಪಡೆದುಕೊಂಡಿತ್ತು; ಹೆಚ್ಚಿನ ಮೌಲ್ಯದ ಉತ್ಪಾದನಾ ಚಟುವಟಿಕೆಗಳಲ್ಲಿ ಹೆಚ್ಚಿನ ಏಕಾಗ್ರತೆ ಮತ್ತು ಇದೇ ಕಾಲಕ್ಕೆ ವಿಶೇಷವಾಗಿ ಜವಳಿ ಮತ್ತು ಇಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿ ಅಗ್ಗದ ಬೆಲೆಗಳಲ್ಲಿ ಕಚ್ಚಾವಸ್ತುಗಳ ಆಮದು. ಕಾರ್ಮಿಕ ಮಾರುಕಟ್ಟೆಗಳು ಹೆಚ್ಚು ಧ್ರುವೀಕರಣಗೊಳ್ಳುತ್ತಿದ್ದಂತೆ ಅಮೆರಿಕದಲ್ಲಿ ಅಶಿಕ್ಷಿತ ಪುರುಷರು ಮತ್ತು ಮಹಿಳೆಯರು ಹೆಚ್ಚೆಚ್ಚು ಅಂಚಿಗೆ ತಳ್ಳಲ್ಪಟ್ಟಿದ್ದರು. 1979 ಮತ್ತು 2007ರ ನಡುವೆ ಅಮೆರಿಕದಲ್ಲಿ ಹೈಸ್ಕೂಲ್ ಡಿಪ್ಲೊಮಾಗಳನ್ನು ಹೊಂದಿರದವರ ನೈಜ ವೇತನವು ಶೇ.16ರಷ್ಟು ಕುಸಿದಿದ್ದರೆ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದವರ ಆದಾಯದಲ್ಲಿ ಶೇ.26ರಷ್ಟು ಏರಿಕೆಯಾಗಿತ್ತು.

ಕಳೆದ ವರ್ಷ ಮತದಾರರ ಪೈಕಿ ಶೇ.43ರಷ್ಟು ಜನರು ಪದವಿ ಅಥವಾ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದರು. ಈ ಪೈಕಿ ಶೇ.55ರಷ್ಟು ಜನರು ಕಮಲಾ ಹ್ಯಾರಿಸ್‌ಗೆ ಮತ್ತು ಶೇ.42ರಷ್ಟು ಜನರು ಟ್ರಂಪ್‌ಗೆ ಮತಗಳನ್ನು ಚಲಾಯಿಸಿದ್ದರು. ಕಾಲೇಜು ಶಿಕ್ಷಣ ಪಡೆದಿರದವರ ವಿಷಯದಲ್ಲಿ ಇದು ತದ್ವಿರುದ್ಧವಾಗಿತ್ತು. ಅವರ ಪೈಕಿ ಶೇ.42ರಷ್ಟು ಜನರು ಹ್ಯಾರಿಸ್‌ಗೆ ಮತ್ತು ಶೇ.55ರಷ್ಟು ಜನರು ಟ್ರಂಪ್‌ಗೆ ಮತಗಳನ್ನು ಹಾಕಿದ್ದರು.

ಸಂಕ್ಷಿಪ್ತವಾಗಿ ಹೇಳುವುದಾದರೆ ಟ್ರಂಪ್ ಮತದಾರರಿಗೆ ಒಬ್ಬ ಶತ್ರುವನ್ನು ಗುರುತಿಸಿ ಕೊಟ್ಟಿದ್ದರು. ಆ ‘ಶತ್ರುಗಳು’ ಅಮೆರಿಕನ್ ಕಾರ್ಮಿಕರನ್ನು ಬಲಿಗೊಟ್ಟು ಚೀನಾಕ್ಕೆ ಬಂಡವಾಳ ವರ್ಗಾವಣೆಗೆ ಅವಕಾಶವನ್ನು ನೀಡಿದ್ದ ಉದಾರವಾದಿ ಗಣ್ಯರಾಗಿದ್ದರು. ಹಾಗೆ ಮಾಡುವಾಗ ಚೀನಾಕ್ಕೆ ಉತ್ಪಾದನೆಯನ್ನು ಸ್ಥಳಾಂತರಿಸಿದ್ದ ಬಂಡವಾಳಿಗರನ್ನು ದೂಷಿಸಲಾಗಿರಲಿಲ್ಲ, ಏಕೆಂದರೆ ಹಾಗೆ ಮಾಡುವುದು ಅಮೆರಿಕದಲ್ಲಿ ವರ್ಗ ಸಂಘರ್ಷಕ್ಕೆ ನಾಂದಿ ಹಾಡುತ್ತಿತ್ತು.

ವಿಶ್ವದ ಬಗ್ಗೆ ಟ್ರಂಪ್ ದೃಷ್ಟಿಕೋನ ಮತ್ತು ಅದನ್ನು ಅನುಷ್ಠಾನಿಸುವವರು ಕಳವಳದ ಎರಡನೇ ಅಂಶವಾಗಿದ್ದಾರೆ. ಟ್ರಂಪ್‌ರ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ತೀವ್ರ ಬಲಪಂಥೀಯ ತಿಕ್ಕಲು ವ್ಯಕ್ತಿಯಾಗಿದ್ದು, ತನ್ನನ್ನು ಕ್ರಿಶ್ಚಿಯನ್ ಹೋರಾಟಗಾರನನ್ನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ವಿಶ್ವ ರಾಜಕೀಯದ ಕುರಿತು ಓಬಿರಾಯನ ಕಾಲದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ತನ್ನ ಅಮೆರಿಕನ್ ಕ್ರುಸೇಡ್ ಪುಸ್ತಕದಲ್ಲಿ ಅವರು, ‘ಅಮೆರಿಕ ಎತ್ತರಕ್ಕೇರಲಿದೆ, ಎಡಪಂಥೀಯರು ಅವನತಿಗೊಳ್ಳಲಿದ್ದಾರೆ. ಕಮ್ಯುನಿಸ್ಟ್ ಚೀನಾ ಕುಸಿದು ಬೀಳಲಿದೆ ಮತ್ತು ಮುಂದಿನ 200 ವರ್ಷಗಳ ಕಾಲ ತನ್ನ ಗಾಯಗಳನ್ನು ನೆಕ್ಕಿಕೊಳ್ಳಲಿದೆ. ಯುರೋಪ್ ಶರಣಾಗಲಿದೆ ಮತ್ತು ಇಸ್ಲಾಮಿಸ್ಟ್‌ಗಳನ್ನು ಪೂರ್ವ ನಿಯಾಮಿಕವಾಗಿ ಸದೆ ಬಡಿಯಲಾಗುವುದು. ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ, ಅವುಗಳು ಇಸ್ಲಾಮಿನ ಪಿಡುಗು ಮತ್ತು ಅಂತರ್‌ರಾಷ್ಟ್ರೀಯ ಎಡಪಂಥೀಯ ವಾದದ ವಿರುದ್ಧ ಹೋರಾಡಲಿವೆ’ ಎಂದು ಬರೆದಿದ್ದಾರೆ.

ಮಾ.5ರಂದು ಹೆಗ್ಸೆತ್, ಚೀನಾದೊಂದಿಗೆ ಯುದ್ಧಕ್ಕೆ ಅಮೆರಿಕ ಸಿದ್ಧವಾಗಿದೆ ಎಂದು ಘೋಷಿಸಿದ್ದರು. ಅವರು ಜಾತ್ಯತೀತವಾದ ಮತ್ತು ತಿಳುವಳಿಕೆಯೊಂದಿಗೆ ಗುರುತಿಸಿಕೊಂಡಿರುವ ಎಲ್ಲ ಮೌಲ್ಯಗಳ ವಿರೋಧಿಯೂ ಆಗಿದ್ದಾರೆ. ಯವ್ವನದಲ್ಲಿ ತೀರಾ ಖಟ್ಟರ್ ಸಂಪ್ರದಾಯವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದವರು ಈ ಹೆಗ್ಸೆತ್. ಕುಟುಂಬ ವ್ಯವಸ್ಥೆ ಬಗ್ಗೆ, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ, ಸರಕಾರದಲ್ಲಿ ಧರ್ಮದ ಪಾತ್ರದ ಬಗ್ಗೆ ಇವರದ್ದು ತೀರಾ ಖಟ್ಟರ್ ಹಾಗೂ ಪುರಾತನ ನಿಲುವು. ಬಲಪಂಥೀಯ ಟಿವಿ ಚಾನೆಲ್ ಒಂದಕ್ಕೆ ನವೆಂಬರ್ 2024ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ದೇಶದಲ್ಲಿ ಅಂತಿಮವಾಗಿ ದಂಗೆ ಏಳುವ ಭೂಗತ ಸೇನೆಯೊಂದನ್ನು ಸಜ್ಜುಗೊಳಿಸಬೇಕು ಎಂದು ಹೇಳಿದ್ದರು ಈ ಹೆಗ್ಸೆತ್.

ಟ್ರಂಪ್ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಮಾರ್ಕೊ ರುಬಿಯೋ ಅವರದು ಇನ್ನೊಂದು ಅಪಾಯಕಾರಿ ನೇಮಕಾತಿಯಾಗಿದೆ. ಕ್ಯೂಬಾದಿಂದ ದೇಶಭ್ರಷ್ಟರಾಗಿ ಫ್ಲೋರಿಡಾಕ್ಕೆ ಬಂದಿದ್ದ ದಂಪತಿಗೆ ಜನಿಸಿದ್ದ ರೂಬಿಯೋ ತನ್ನ ರಾಜಕೀಯ ಜೀವನದುದ್ದಕ್ಕೂ ಎಡಪಂಥೀಯ ಲ್ಯಾಟಿನ್ ಅಮೆರಿಕನ್ ನಾಯಕರ ವಿರುದ್ಧ ಬಲವಾದ ನಿರ್ಬಂಧಗಳು ಸೇರಿದಂತೆ ಪ್ರತಿಕೂಲ ನೀತಿಗಳನ್ನು ಪ್ರತಿಪಾದಿಸಿಕೊಂಡೇ ಬಂದಿದ್ದಾರೆ. ಅವರು ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಾಡುರೊ ಸರಕಾರದ ವಿರುದ್ಧ ಹೆಚ್ಚು ಕಠಿಣ ನೀತಿಗಳ ಬೆಂಬಲಿಗರೂ ಆಗಿದ್ದರು. 2019ರಲ್ಲಿ ಅವರು ಮಾಡುರೊಗೆ ವೆನೆಝುವೆಲಾದಲ್ಲಿ ಆಡಳಿತ ಬದಲಾವಣೆಯ ಪರೋಕ್ಷ ಬೆದರಿಕೆಯನ್ನೂ ಒಡ್ಡಿದ್ದರು.

ರುಬಿಯೋ ಒಂದು ರೀತಿಯಲ್ಲಿ ಗೋಸುಂಬೆಯಿದ್ದಂತೆ. ಅವರು ಆಗಾಗ ತನ್ನ ರಾಜಕೀಯ ಬಣ್ಣಗಳನ್ನು ಬದಲಿಸುತ್ತಿರುತ್ತಾರೆ. 2016ರಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ‘ಕಳ್ಳ’ ಎಂದು ಕರೆದಿದ್ದ ರೂಬಿಯೋ ಈಗ ಉಕ್ರೇನ್‌ನ ಡೊನ್ಬಾಸ್ ಪ್ರದೇಶವನ್ನು ರಶ್ಯಕ್ಕೆ ಉಡುಗೊರೆಯನ್ನಾಗಿ ನೀಡುವ ಮೂಲಕ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅದೇ ಪುಟಿನ್ ಜೊತೆ ಸಂಧಾನ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಚೀನಾದಿಂದ ರಶ್ಯವನ್ನು ದೂರ ಸೆಳೆಯಲು, ತನ್ಮೂಲಕ ಸಾಮ್ರಾಜ್ಯಶಾಹಿ ಮಿತ್ರರನ್ನು ಬಳಸಿಕೊಂಡು ಚೀನಾವನ್ನು ಏಕಾಂಗಿಯಾಗಿಸಿ ಮುತ್ತಿಗೆ ಹಾಕಲು ಈ ರುಬಿಯೋ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಈ ಅನಿಶ್ಚಿತತೆಗಳ ಜಗತ್ತಿನಲ್ಲಿ ಭಾರತದ ಸ್ಥಾನವೇನು? ಅದು ಉತ್ತಮ ಸ್ಥಿತಿಯಲ್ಲಂತೂ ಇಲ್ಲ. ಅಮೆರಿಕದ ಸರಕುಗಳಿಗೆ ಹೆಚ್ಚಿನ ಸುಂಕವನ್ನು ವಿಧಿಸುತ್ತಿರುವುದಕ್ಕಾಗಿ ಟ್ರಂಪ್ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ ಮೋದಿ ತುಟಿಪಿಟಕ್ಕೆನ್ನದೇ ಕುಳಿತುಕೊಂಡಿದ್ದನ್ನು ನಾವು ನೋಡಿದ್ದೇವೆ. ಮೋದಿ ಶಾಲೆಯ ಪ್ರಾಂಶುಪಾಲರ ಮುಂದೆ ಕೈಗಳಲ್ಲಿ ಚೀಟಿಗಳನ್ನು ಹಿಡಿದುಕೊಂಡು ಹೆದರುತ್ತ ನಿಂತಿದ್ದ ವಿದ್ಯಾರ್ಥಿಯಂತೆ ಕುಳಿತಿದ್ದರು.

ಅಮೆರಿಕದ ಚೌಕಿದಾರರಂತೆ ಕಾರ್ಯ ನಿರ್ವಹಿಸುವಂತೆ ಭಾರತದಂತಹ ದೇಶಗಳನ್ನು ಆಗ್ರಹಿಸುವ ಮೂಲಕ ಏಶ್ಯವನ್ನು ತನ್ನ ಕಬ್ಜಾದಲ್ಲಿಟ್ಟುಕೊಳ್ಳುವ ಒಬಾಮಾ ಮತ್ತು ಬೈಡನ್ ನೀತಿಗಳನ್ನು ಟ್ರಂಪ್ ಆಡಳಿತವು ಅನುಸರಿಸಲಿದೆ. ಯಾವುದೇ ಬೆಲೆಯನ್ನು ತೆತ್ತಾದರೂ ಇದನ್ನು ವಿರೋಧಿಸಬೇಕು. ಟ್ರಂಪ್ ಅನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಚೀನಾದ ವಿರುದ್ಧ ಟ್ರಂಪ್ ಮತ್ತು ಅವರ ಸಂಪುಟದ ರಣೋತ್ಸಾಹವು ಭಾರತ ಮತ್ತು ವಿಶ್ವಕ್ಕೆ ಬಹಳ ಕಷ್ಟಕರ ಸನ್ನಿವೇಶಕ್ಕೆ ಕಾರಣವಾಗಬಹುದು. ಮಿತ್ರದೇಶಗಳನ್ನು ಮಧ್ಯದಲ್ಲಿಯೇ ಕೈಬಿಡುವುದು ಅಮೆರಿಕದ ಚಾಳಿಯಾಗಿದೆ.

ಅಮೆರಿಕದ ಮಾಜಿ ವಿದೇಶಾಂಗ ಸಚಿವ, ದೆವ್ವದ ಅವತಾರವೇ ಆಗಿದ್ದ ಹೆನ್ರಿ ಕಿಸಿಂಜರ್ ಅಮೆರಿಕದ ಶತ್ರುವಾಗುವುದು ಅಪಾಯಕಾರಿಯಾಗಿದೆ, ಆದರೆ ಅಮೆರಿಕದ ಮಿತ್ರನಾಗುವುದು ಮಾರಣಾಂತಿಕವಾಗಿದೆ ಎಂದು ಒಮ್ಮೆ ಹೇಳಿದ್ದರು. ಪ್ರಧಾನಿ ಮೋದಿ ಇದನ್ನು ನೆನಪಿಟ್ಟುಕೊಳ್ಳಬೇಕು.

(ಲೇಖಕರು ಅಮೆರಿಕದ ಕನೆಕ್ಟಿಕಟ್ ವಿವಿಯಲ್ಲಿ ರಾಜಕೀಯ ಶಾಸ್ತ್ರದ ಪಿಎಚ್.ಡಿ. ವಿದ್ವಾಂಸ, ಕೇಂಬ್ರಿಜ್ ವಿವಿಯಲ್ಲಿ ಎಂ.ಫಿಲ್. ಪದವೀಧರ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶುಭಂ ಶರ್ಮಾ

contributor

Similar News