ಬಹುತ್ವ ಕವಿಗೆ ಎಪ್ಪತ್ತರ ಸಂಭ್ರಮ

ಇಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ 70ನೇ ಜನ್ಮದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

Update: 2024-09-22 09:38 GMT

ಬಹುತ್ವದ ನೆಲೆಯಲ್ಲಿ ಭಾರತವನ್ನು ಕಂಡ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು, ಅವರ ಕಥೆ, ಕವಿತೆ, ನಾಟಕಗಳಲ್ಲಿ ದಲಿತ ಬಂಡಾಯದ ಚಳವಳಿಯ ಜೊತೆಗೆ ಬಹುರೂಪಿ ಭಾರತದ ಕನಸನ್ನು ಕಂಡ ಕವಿಯಾಗಿದ್ದಾರೆ. ಹುಟ್ಟಿದ್ದು ಗಡಿನಾಡು ಚಾಮರಾಜನಗರದ ಮೂಡ್ನಾಕೂಡು ಹಳ್ಳಿಯಲ್ಲಿ, ಮೂಡ್ನಾಕೂಡು ಚಿನ್ನಸ್ವಾಮಿ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾದ ಚಿನ್ನಸ್ವಾಮಿ ಅವರು ಓದಿದ್ದು ಎಂಕಾಂ, ಎಂಎ (ಕನ್ನಡ ಸಾಹಿತ್ಯ), ಡಿಲಿಟ್ ಪದವೀಧರರು. ರಾಜ್ಯ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನಿರ್ದೇಶಕರು ಹಾಗೂ ಹಣಕಾಸು ಸಲಹೆಗಾರರ ಹುದ್ದೆಯಿಂದ ಮಾರ್ಚ್ 2014ರಲ್ಲಿ ನಿವೃತ್ತಿ ಹೊಂದಿ, ಆನಂತರ ಮೈಸೂರು ವಿಶ್ವ ವಿದ್ಯಾನಿಲಯದ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

ತನ್ನ ಜೀವಮಾನವಿಡೀ ನೊಂದವರ, ಶೋಷಣೆಯ ವಿರುದ್ಧ ದನಿಯೆತ್ತಿ ಸಮಾನತೆಯ ಭವ್ಯ ಭಾರತವನ್ನು ಕಟ್ಟುವ ಕನಸನ್ನು ಕಂಡ ಕವಿ. ಸಂವಿಧಾನಾತ್ಮಕ ಭಾರತವನ್ನು ವಿರೂಪಗೊಳಿಸಲು ಮುಂದಾದ ಇವತ್ತಿನ ಸಂದರ್ಭದಲ್ಲಿ ಐಕ್ಯತೆ, ಸಮಾನತೆ, ಸಾಮರಸ್ಯ, ಧರ್ಮೀಯ ಗಲಾಟೆಗಳ ನಡುವೆ ತಮ್ಮ ಕವಿತೆಗಳ ಮೂಲಕ ಪ್ರೇಮ ಸುಗಂಧವನ್ನು ಸಾರಿದ ಕವಿ ಇವರು. ತಣ್ಣನೆಯ ನೋವಿನಲ್ಲಿ ಬಿಸಿ ಬೆಂಕಿಯ ಉಗುಳದೆ ‘ನಾನೊಂದು ಮರವಾಗಿದ್ದರೆ, ಕೇಳುತ್ತಿರಲಿಲ್ಲ ಯಾವ ಕುಲ?’ ಎಂದು ಕೇಳಿಕೊಂಡ ಕವಿ. ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ. ಕವಿತೆ, ಕಥೆ, ನಾಟಕ,ಅನುವಾದ, ಸಂಪಾದನೆ ಸೇರಿದಂತೆ 45ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಸಿದ್ದಾರೆ. ‘ಮತ್ತೆ ಮಳೆ ಬರುವ ಮುನ್ನ’, ‘ನಾನೊಂದು ಮರವಾಗಿದ್ದರೆ’, ‘ಚಪ್ಪಲಿ ಮತ್ತು ನಾನು’, ‘ಬುದ್ಧ ಬೆಳದಿಂಗಳು’ ಪ್ರಮುಖ ಕವಿತಾ ಸಂಕಲನಗಳಾಗಿವೆ, ‘ಮೋಹದ ದೀಪ’, ‘ಪಾಪಪ್ರಜ್ಞೆ’ - ಕಥೆಗಳು. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ‘ಅಪರಿಮಿತದ ಕತ್ತಲೆ’, ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಇವರ ಇತರ ಪ್ರಮುಖ ಗದ್ಯ ಕೃತಿಗಳು. ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಕೊಲಂಬಿಯಾ, ಇಸ್ರೇಲ್ ಹಾಗೂ ಆಸ್ಟ್ರಿಯಾ ದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೆನೆಜುವೆಲಾ ದೇಶದ ಸರಕಾರ 2005ರಲ್ಲಿ ವಿಶ್ವ ಕಾವ್ಯ ಮಾಲೆ ಅಡಿಯಲ್ಲಿ ‘ಪೊಯೆಮಾಸ್ - ಮೂಡ್ನಾಕೂಡು’ ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಇವರ ಹಲವಾರು ಕವಿತೆಗಳು ಶಾಲಾಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ಪಠ್ಯಗಳಾಗಿವೆ. ರ್ಬಾಚೆ ಪಬ್ಲಿಸರ್ಸ್, ಲಿರ್ಪೂಲ್, ಬ್ರಿಟನ್ ಮತ್ತು ಯೋಡಾ ಪ್ರೆಸ್, ದಿಲ್ಲಿ ಇವರು ‘ಬಿಫೋರ್ ಇಟ್ ರೆಯಿನ್ಸ್ ಅಗೆಯ್ನ್’ ಎಂಬ ಇಂಗ್ಲಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದ್ದಾರೆ ಹಾಗೂ ಹಿಂದಿ, ಉರ್ದು, ತೆಲುಗು, ಮರಾಠಿ ಭಾಷೆಗಳಲ್ಲಿ ಕೂಡಾ ಅನುವಾದಗೊಂಡಿವೆ.

ಮೈಸೂರಿನ ರಂಗಾಯಣ ರೆಪರ್ಟರಿಗೆ ‘ಬಹುರೂಪಿ’ ಎಂಬ ಕಾವ್ಯನಾಟಕವನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ, ‘ದಿ ಔಟ್‌ಲುಕ್’ ಇಂಗ್ಲಿಷ್ ವಾರಪತ್ರಿಕೆ ತನ್ನ 26, ಎಪ್ರಿಲ್ 2021 ರ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ಇವರನ್ನು ‘ಭಾರತವನ್ನು ಪುನನಿರ್ಮಾಣ ಮಾಡುವ 50 ದಲಿತ ಸಾಧಕರಲ್ಲಿ ಒಬ್ಬರು’ ಎಂದು ಗುರುತಿಸಿ ಸಂಕ್ಷಿಪ್ತ ಪರಿಚಯ ಪ್ರಕಟಿಸಿದೆ. ‘ಜರ್ನಲ್ ಆಫ್ ಕಾಮನ್‌ವೆಲ್ತ್ ಲಿಟರೇಚರ್’ ಎಂಬ ಬ್ರಿಟನ್‌ನ ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ 2019 ರ ವಿಶೇಷ ಸಂಚಿಕೆಯಲ್ಲಿ ಇವರ ಸಂದರ್ಶನವನ್ನು ಪ್ರಕಟಿಸಿದೆ. ಇವರ ಮೊದಲ ಇಂಗ್ಲಿಷ್ ಕೃತಿಯಾದ ‘ದಲಿತ್ ಕಾಸ್ಮಸ್’ ಬ್ರಿಟನ್‌ನ ರೌಟ್ಲೆಡ್ಜ್ ಸಂಸ್ಥೆ ಎಪ್ರಿಲ್, 2023ರಲ್ಲಿ ಪ್ರಕಟಿಸಿದೆ.

ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ವಾರಂಬಳ್ಳಿ ಕಾವ್ಯ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ, ಪೆರಿಯಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ. ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (2009) ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2014)ಗಳಿಗೂ ಭಾಜನರಾಗಿರುತ್ತಾರೆ. ಇವರ ‘ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ’ ಕೃತಿಗೆ 2022 ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಹೀಗೆ ಕನ್ನಡ ಸಾಹಿತ್ಯದಲ್ಲಿ ಅಮೋಘ ಕನ್ನಡದ ಕೆಲಸವನ್ನು ಮಾಡಿದ ಕವಿಗೆ 70ನೆಯ ಹುಟ್ಟುಹಬ್ಬದ ಶುಭಾಶಯಗಳು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ಸೂರ್ಯಕೀರ್ತಿ

contributor

Similar News