ಮೈಕ್ರಾನ್ ಒಪ್ಪಂದ ಭಾರತಕ್ಕೆ ಬರೀ ಚಿಪ್ಪು !

Update: 2023-07-13 17:09 GMT

- ಆರ್. ಜೀವಿ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಯನ್ನು ಮಹಾನ್ ಸಾಧನೆ ಎಂದು ಬಿಂಬಿಸುತ್ತ, ಅಲ್ಲಿ ಮೋದಿಗೆ ನೀಡಲಾದ ಸತ್ಕಾರವನ್ನು ಭಾರತಕ್ಕೆ ಸಿಕ್ಕ ವಿಶ್ವಮಾನ್ಯತೆ ಎಂದು ಬಣ್ಣಿಸುತ್ತ ಮೋದಿ ಬೆಂಬಲಿಗರು ಮತ್ತು ಗೋದಿ ಮೀಡಿಯಾಗಳು ಮೈಮರೆತಿವೆ. ಆದರೆ ನಿಧಾನವಾಗಿಯಾದರೂ ಬಯಲಾಗುತ್ತಿರುವ ಸತ್ಯವೇನೆಂದರೆ, ಅಮೆರಿಕದಲ್ಲಿ ಮೋದಿ ಮಾಡಿಕೊಂಡ ಒಪ್ಪಂದದಿಂದ ಲಾಭವಾಗುತ್ತಿರುವುದು ಭಾರತಕ್ಕಲ್ಲ, ಬದಲಿಗೆ ಅಮೆರಿಕಕ್ಕೆ ಮತ್ತು ಅಮೆರಿಕದ ಕಂಪನಿಯನ್ನು ಭಾರತ ಸಾಕಬೇಕಿದೆ ಎಂಬ ವಿಚಾರ.

ಮೋದಿ ಅಮೆರಿಕ ಭೇಟಿ ಸಮಯದಲ್ಲಿನ ಮೈಕ್ರಾನ್ ಒಪ್ಪಂದವನ್ನಂತೂ ಕ್ರಾಂತಿಕಾರಿ ತಾಂತ್ರಿಕ ಪ್ರಗತಿ ಮತ್ತು ಭಾರತದ ಚಿಪ್ ತಯಾರಿಕೆ ಉದ್ಯಮದ ಹೊಸ ಶಕೆ ಎಂಬಂತೆ ಬಣ್ಣಿಸಲಾಗುತ್ತಿದೆ. ಆದರೆ ಅದೆಷ್ಟು ಪೊಳ್ಳು ಎಂಬುದು ಈಗ ತೀರಾ ರಹಸ್ಯವಾಗಿ ಉಳಿದಿಲ್ಲ. ಆಧುನಿಕ ತಂತ್ರಜ್ಞಾನದ ವರ್ಗಾವಣೆ ಎಂದೆಲ್ಲ ಹಾಡಿ ಹೊಗಳಲಾಗುತ್ತಿರುವ ಮೈಕ್ರಾನ್ ಒಪ್ಪಂದದ ಈ ಹುನ್ನಾರದಲ್ಲಿ ಚಿಪ್ ತಯಾರಿಕೆಯ ಪ್ರಮುಖ ತಂತ್ರಜ್ಞಾನ ಭಾರತಕ್ಕೆ ವರ್ಗಾವಣೆಯಾಗುವುದು ಹಾಗಿರಲಿ, ಅದು ಭಾರತದ ಕೈಗೂ ಎಟುಕಿಲ್ಲ. ಸಿಕ್ಕಿರುವುದು ಬರೀ ಚಿಪ್‌ಗಳ ಪ್ಯಾಕೇಜಿಂಗ್, ಅವುಗಳ ಜೋಡಣೆ ಮತ್ತು ಪರೀಕ್ಷೆ ಅಷ್ಟೆ.

ಈ ಬಗ್ಗೆ ನ್ಯೂಸ್ ಕ್ಲಿಕ್ ಡಾಟ್ ಇನ್ ನ ಸ್ಥಾಪಕ ಸಂಪಾದಕ ಪ್ರಬೀರ್ ಪುರಾಕಾಯಸ್ಥ ಅವರು ವಿವರವಾದ ವರದಿಯೊಂದನ್ನು ಪ್ರಕಟಿಸಿದ್ದಾರೆ. ಅದನ್ನು ಏಷ್ಯಾ ಟೈಮ್ಸ್ ಕೂಡ ಪ್ರಕಟಿಸಿದೆ.

ತಂತ್ರಜ್ಞಾನವನ್ನು ತಿಳಿದಿರುವವರಿಗೆ ಮೈಕ್ರಾನ್ ಒಪ್ಪಂದದ ಈ ಒಳಮುಖದ ಅರಿವು ಚೆನ್ನಾಗಿಯೇ ಇದೆ. ಆದರೆ ವಿಶ್ವಗುರುವಿನ ಬಗ್ಗೆ ಭಾವಪರವಶತೆಯಿಂದ ಗುಣಗಾನ ಮಾಡುವವರಿಗೆ ಮಾತ್ರ ಅದರ ಆಳ ಅಗಲ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಅಗತ್ಯವೂ ಅವರಿಗೆ ಕಾಣುತ್ತಿಲ್ಲ. ಇನ್ನು ಗೊತ್ತಾದರೂ ಅವರು ಅದೆಲ್ಲ ಸುಳ್ಳು ಎಂದೇ ವಿತಂಡ ವಾದ ಮಾಡಬಲ್ಲರು.

ಪ್ರಧಾನಿ ಮೋದಿಗೂ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ಗೂ ಎದುರಲ್ಲಿಯೇ ಚುನಾವಣೆ ಇದೆ. ಹಾಗಾಗಿ, ಇಲ್ಲಿ ಅಮೆರಿಕ ಜೊತೆಗಿನ ಒಪ್ಪಂದವನ್ನು ದೊಡ್ಡ ಯಶಸ್ಸು ಎಂದೆಲ್ಲ ಹಾಡಿ ಹೊಗಳಿ, ಜನರೆದುರು ಬಿಂಬಿಸುವ ಪ್ರಯತ್ನವಾಗುತ್ತಿದೆ. ಅತ್ತ ಅಮೆರಿಕ ತನಗೆ ಸವಾಲಾಗಿರುವ ಚೀನಾವನ್ನು ಮಣಿಸಲು ಭಾರತವನ್ನು ತನ್ನ ಅಗತ್ಯಕ್ಕೆ ಬಳಸಿಕೊಳ್ಳುವ ತಂತ್ರವನ್ನು ನಾಜೂಕಾಗಿಯೇ ಹೆಣೆಯುತ್ತಿದೆ.

ಬಹುಶಃ ತಡವಾಗಿಯಾದರೂ, ತಂತ್ರಜ್ಞಾನ ಹಣ ಕೊಟ್ಟು ಜಾಗತಿಕ ಮಾರುಕಟ್ಟೆಯಿಂದ ಖರೀದಿಸಬಹುದಾದ ವಿಷಯವಲ್ಲ ಎಂಬುದು ಮೋದಿ ಆಡಳಿತಕ್ಕೆ ಹೊಳೆದಿರಬೇಕು. ಆದರೆ ಒಪ್ಪಂದದ ಹೆಸರಿನಲ್ಲಿ ಅಮೆರಿಕದ ನಾಜೂಕುತನದ ಮುಂದೆ ತಾನು ಎಡವಿ ಬಿದ್ದಿರೋದನ್ನು ಮುಚ್ಚಿಹಾಕುವುದರಲ್ಲಿ ಈಗ ಮೋದಿ ಸರ್ಕಾರ ಬಿದ್ದಂತಿದೆ.

ಇಂದು, ಯುದ್ಧಭೂಮಿಯಿಂದ ಕೃತಕ ಬುದ್ಧಿಮತ್ತೆಯವರೆಗೆ, ನಿಮ್ಮ ಕಡಿಮೆ ಬೆಲೆಯ ವಾಷಿಂಗ್ ಮಷಿನ್ನಿಂದ ಹಿಡಿದು ಅತ್ಯಂತ ದುಬಾರಿ ಯುದ್ಧ ವಿಮಾನಗಳವರೆಗೆ ಎಲ್ಲದರ ಹಿಂದೆ ಇರುವುದು ಎಲೆಕ್ಟ್ರಾನಿಕ್ಸ್. ಜಾಗತಿಕ ವ್ಯವಹಾರಗಳಲ್ಲಿ ಭಾರತ ತನ್ನ ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾದರೆ, ಅದು ತನ್ನ ಎಲೆಕ್ಟ್ರಾನಿಕ್ಸ್ ಉದ್ಯಮದ ಭವಿಷ್ಯದ ಬಗ್ಗೆ ಯೋಚಿಸಬೇಕು. ಚಿಪ್‌ಗಳ ತಯಾರಿಕೆ ಸಾಮರ್ಥ್ಯ ಎಲೆಕ್ಟ್ರಾನಿಕ್ಸ್ ಉದ್ಯಮದ ಮಹತ್ವದ ಭಾಗ.

ಆದರೆ ಈಗ ಆಗಿರೋ ಮೈಕ್ರಾನ್ ಡೀಲ್ನಲ್ಲಿ ಅಮೆರಿಕದ ಕಂಪನಿಗೆ ಜಾಗ ಮಾಡಿಕೊಟ್ಟು, ಕೋಟಿಗಟ್ಟಲೆ ತೆರಿಗೆದಾರರ ದುಡ್ಡನ್ನೂ ಕೊಟ್ಟು ಸುಮ್ಮನೆ ಕೂರಬೇಕಾದ ಸ್ಥಿತಿಯನ್ನು ಭಾರತ ತಂದುಕೊಂಡಿದೆ.

ಏನಿದು ಮೈಕ್ರಾನ್ ಒಪ್ಪಂದ ?

ಮೈಕ್ರಾನ್, ಮೆಮೊರಿ ಚಿಪ್‌ಗಳ ಪ್ರಮುಖ ತಯಾರಕ ಕಂಪನಿ. ಅಮೆರಿಕದ ಈ ಕಂಪನಿ ಭಾರತದಲ್ಲಿ ಮೆಮೊರಿ ಫ್ಯಾಬ್ರಿಕೇಶನ್ ಪ್ಲಾಂಟ್ ಅನ್ನು ಸ್ಥಾಪಿಸಲಿರುವುದು ಪ್ರಧಾನಿ ಮೋದಿ ಮಾಡಿಕೊಂಡಿರೋ ಒಪ್ಪಂದದ ಸಾರ. ಗುಜರಾತ್ನಲ್ಲಿ ಮೈಕ್ರಾನ್ ಕಂಪನಿ ಸ್ಥಾವರ ಶುರುವಾಗುತ್ತದೆ. ಆದರೆ ಇಲ್ಲಿ ನಡೆಯುವುದು ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲ. ಬದಲಿಗೆ, ಮೈಕ್ರಾನ್ ಬೇರೆಡೆ ತಯಾರಿಸಿದ ಚಿಪ್‌ಗಳ ಜೋಡಣೆ, ಪ್ಯಾಕೇಜ್ ಮತ್ತು ಪರೀಕ್ಷೆ ಮಾತ್ರ.

ಮೈಕ್ರಾನ್ ಕಂಪನಿ ಅಮೆರಿಕ ಮತ್ತು ಚೀನಾದಲ್ಲಿ ಹೈಟೆಕ್ ಚಿಪ್ ತಯಾರಿಕಾ ಪ್ಲಾಂಟ್‌ಗಳನ್ನು ಹೊಂದಿದೆ. ಅದರ ಉತ್ಪನ್ನಗಳನ್ನು ಭಾರತದಲ್ಲಿ ಪ್ಯಾಕ್ ಮಾಡಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ. ಅಷ್ಟೇ. ಆದ್ದರಿಂದ ಚಿಪ್ ತಯಾರಿಕೆಯಲ್ಲಿ ಭಾರತ ಏನಾದರೂ ದೊಡ್ಡ ಹೆಜ್ಜೆ ಇಡುತ್ತೇವೆ ಎಂದು ಉದ್ದೇಶಿಸಿದ್ದರೆ, ಮೈಕ್ರಾನ್ ಒಪ್ಪಂದದ ಮೂಲಕ ಅಂಥ ಯಾವುದೇ ಅವಕಾಶ ಭಾರತಕ್ಕಂತೂ ಸಿಗುತ್ತಿಲ್ಲ.

ಇನ್ನೂ ಒಂದು ವಿಚಾರವಿದೆ. ಸ್ಥಾವರ ಸ್ಥಾಪಿಸುವ ಒಟ್ಟು ವೆಚ್ಚ 2.75 ಬಿಲಿಯನ್ ಡಾಲರ್ ಅಂದ್ರೆ 22 ಸಾವಿರದ 650 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಸ್ಥಾವರದ ಸಂಪೂರ್ಣ ಮಾಲೀಕತ್ವ ಹೊಂದಲಿರುವ ಮೈಕ್ರಾನ್ ಹೂಡಿಕೆ ಮಾಡಲಿರುವುದು ಅದರ ಶೇ.30ರಷ್ಟನ್ನು ಮಾತ್ರ. ಅಂದರೆ 825 ಮಿಲಿಯನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ಇದು 6 ಸಾವಿರದ 795 ಕೋಟಿ. ಉಳಿದ ಶೇ.70ರಷ್ಟನ್ನು ಅಂದ್ರೆ 15 ಸಾವಿರದ 855 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರಗಳು ಸಬ್ಸಿಡಿ ರೂಪದಲ್ಲಿ ಹೂಡಿಕೆ ಮಾಡಲಿವೆ. ಕೇಂದ್ರ ಸರ್ಕಾರ ಶೇ.50ರಷ್ಟನ್ನೂ ಗುಜರಾತ್ ಸರ್ಕಾರ ಶೇ.20ರಷ್ಟನ್ನೂ ತೊಡಗಿಸಬೇಕಿದೆ.

ಅಂದ್ರೆ ಭಾರತ ಸರಕಾರ ಹಾಗು ಗುಜರಾತ್ ಸರಕಾರ ಸೇರಿ 70% ಖರ್ಚು ಭರಿಸುವ ಈ ಕಂಪೆನಿಯ ನೂರು ಶೇಖಡಾ ಮಾಲಕತ್ವ ಮಾತ್ರ ಮೈಕ್ರಾನ್ ನದ್ದು. ಹೇಗಿದೆ ಈ ಡೀಲ್ ? eeNews Europe ನಂತಹ ಉದ್ಯಮ ವರದಿಗಳು ಸಹ ಇದನ್ನು ವಿಪರೀತ ಹೆಚ್ಚು ಸಬ್ಸಿಡಿ ಎಂದಿವೆ.

ಇಷ್ಟೆಲ್ಲದರ ನಂತರ ಭಾರತದಲ್ಲಿ ಇದರಿಂದ ಉದ್ಯೋಗ ಸೃಷ್ಟಿಯಾದರೂ ಆಗಲಿದೆಯೆ ಎಂದರೆ ಅದೂ ಇಲ್ಲ. ಇದು ಉನ್ನತ ಮಟ್ಟದ ತಂತ್ರಜ್ಞಾನ ಆಧಾರಿತ ಉದ್ಯಮವಾಗಿರುವುದರಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ. ವಿಶ್ಲೇಷಣೆಗಳು ಹೇಳುವ ಪ್ರಕಾರ, ಕಡೆಗೂ ಇದು ಕರ್ನಾಟಕದಲ್ಲಿನ ಬಿಜೆಪಿ ಸೋಲು ಮತ್ತು ಮಣಿಪುರ ಹಿಂಸಾಚಾರದಿಂದ ಮೆತ್ತಿರುವ ಕಳಂಕದಿಂದ ಮೋದಿ ಇಮೇಜ್ ಅನ್ನು ಕಾಪಾಡುವ ಪಬ್ಲಿಕ್ ರಿಲೇಷನ್ಸ್ ಕಸರತ್ತಾಗಿದೆ.

ಈ ಒಪ್ಪಂದದ ಮೂಲಕ ನಾವು ಪಡೆಯುತ್ತಿರೋದು ಕೆಳಮಟ್ಟದ, ಅಂದರೆ ಜೋಡಣೆ ಮತ್ತು ಪರಿಶೀಲನೆಯ ತಂತ್ರಜ್ಞಾನ. ಆದರೆ ಇದಕ್ಕಾಗಿ ಅಮೆರಿಕದ ಕಂಪನಿಗೆ ನೀಡಬೇಕಿರುವ ಸಬ್ಸಿಡಿ ಭಾರೀ ದುಬಾರಿ ಮಟ್ಟದ್ದು.

ತಂತ್ರಜ್ಞಾನ ಮತ್ತು ಸ್ಥಾವರಗಳನ್ನು ಸ್ಥಾಪಿಸಲು ಸಹಾಯಧನ ನೀಡುವುದು ಭಾರತವೊಂದೇ ಅಲ್ಲ. ಅಮೆರಿಕ ಮತ್ತು ಚೀನಾ ಕೂಡ ಹೀಗೆ ಮಾಡುತ್ತವೆ. ಆದರೆ ಈ ಎರಡೂ ದೇಶಗಳು ಎಲೆಕ್ಟ್ರಾನಿಕ್ಸ್ ಟೆಕ್ ಸ್ಟಾಕ್, ಸುಧಾರಿತ ಚಿಪ್ ತಯಾರಿಕೆ, ಸಾಧನಗಳು, ಸಿಎಡಿ - ಅಂದರೆ ಕಂಪ್ಯೂಟರ್ ನೆರವಿನ ವಿನ್ಯಾಸ ಉಪಕರಣಗಳು, ಲಿಥೋಗ್ರಾಫಿಕ್ ಯಂತ್ರಗಳು ಮುಂತಾದ ಉನ್ನತ ಮಟ್ಟದ ತಂತ್ರಜ್ಞಾನಕ್ಕಾಗಿ ಹಣ ನೀಡುತ್ತಿವೆ. ಆದರೆ ಚಿಪ್ಗಳ ಜೋಡಣೆ ಹಾಗು ಪರೀಕ್ಷೆ ವಾಸ್ತವಿಕವಾಗಿ ಏನೂ ಅಲ್ಲ. ಅದು ಕೇವಲ 5% ಮಾತ್ರ. ಅಷ್ಟಕ್ಕಾಗಿ ಪ್ರಧಾನಿ ಮೋದಿ ಮಾಡಿಕೊಂಡ ಡೀಲ್ ಮಾತ್ರ ಭಾರೀ ದುಬಾರಿ ಬೆಲೆಯನ್ನೇ ತೆತ್ತಿದೆ.

​ಈ ನಡುವೆ ಪ್ರಧಾನಿ ಮೋದಿ ಅವರ ಇನ್ನೋರ್ವ ಆಪ್ತ ಅನಿಲ್ ಅಗರ್ವಾಲ್ ಅವರ ವೇದಾಂತ ಕಂಪೆನಿ ಜೊತೆ ಗುಜರಾತ್ ನಲ್ಲಿ ಸೆಮಿ ಕಂಡಕ್ಟರ್ ತಯಾರಿಕಾ ಘಟಕ ಸ್ಥಾಪಿಸುವ 19.5 ಬಿಲಿಯನ್ ಡಾಲರ್ ಒಪ್ಪಂದದಿಂದ ಫಾಕ್ಸ್ ಕಾನ್ ಹಿಂದೆ ಸರಿದಿದೆ. ಈ ಡೀಲ್ ಗೆ ಸಹಿಯಾದಾಗ ಇದೊಂದು ​ಐತಿಹಾಸಿಕ ಒಪ್ಪಂದ ಎಂದು ಮೋದಿ ಸರಕಾರ ಹೇಳಿತ್ತು. ಆದರೆ ಈಗ ಫಾಕ್ಸ್ ಕಾನ್ ಒಪ್ಪಂದದಿಂದ ಹಿಂದೆ ಸರಿದಿದೆ. ಇದಕ್ಕೆ ಅಧಿಕೃತವಾಗಿ ಯಾವುದೇ ಕಾರಣ ನೀಡಿಲ್ಲವಾದರೂ ಸಾಲದ ಹೊರೆ ಹೊತ್ತುಕೊಂಡ ವೇದಾಂತ ಕಂಪೆನಿಗೆ ಸಾಕಷ್ಟು ಬಂಡವಾಳ ಹೂಡಲು ಆಗದು ಎಂಬುದೇ ಕಾರಣ ಎಂದು ವರದಿಯಾಗಿದೆ.

ಎಲ್ಲಿ ಹೂಡಿಕೆ ಮಾಡಬೇಕು ಮತ್ತು ಎಷ್ಟು ಹೂಡಿಕೆ ಮಾಡಬೇಕು ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬ ಯೋಜನೆಯಿಲ್ಲದೆ ಶೋಕಿ ಮಾಡಹೊರಟರೆ ಹೀಗೆಯೇ ಆಗೋದು. ಜನರೆದುರು ಮಹಾಸಾಧನೆ ಎಂದು ಬಿಂಬಿಸಿಕೊಳ್ಳಲು ಇಂಥ ಮಾಡಬಾರದ ಕಸರತ್ತು ಮಾಡಹೋಗಿ, ದೇಶವನ್ನು ಮಾರಿಕೊಳ್ಳುವಂಥ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೂ, ಮತ್ತೆ ಏನೂ ಆಗಿಯೇ ಇಲ್ಲವೆಂಬಂತೆ ಬಣ್ಣನೆ, ಭಾಷಣಗಳು ಬೇರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News