ಮುಸ್ಲಿಂ ಮಹಿಳೆಯರಿಗೆ ರಾಕಿ ಕಟ್ಟಿ ಎಂದು ಬಿಜೆಪಿ ಮುಖಂಡರಿಗೆ ಹೇಳಿದ ಪ್ರಧಾನಿ ಮೋದಿ

Update: 2023-08-04 17:28 GMT
Editor : Althaf | Byline : ಆರ್. ಜೀವಿ

- ಆರ್. ಜೀವಿ

ಮುಸ್ಲಿ​ಮ್ ಮಹಿಳೆಯರಿಗೆ ರಾಖಿ ಕಟ್ಟಲು ಬಿಜೆಪಿ ಸಂಸದ​ರು ಹಾಗು ಮುಖಂಡರಿಗೆ ಪ್ರಧಾನಿ​ ನರೇಂದ್ರ ಮೋದಿ ಸಲಹೆ ನೀಡಿ​ದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿರುವ ತಮ್ಮ ಸರ್ಕಾರದ ನಿರ್ಧಾರ ಮುಸ್ಲಿಂ ಮಹಿಳೆಯರಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಿಸಿದ್ದು, ರಕ್ಷಾಬಂಧನ ಹಬ್ಬದ ವೇಳೆ ಮುಸ್ಲಿಂ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಬಿಜೆಪಿ ತಲುಪಬೇಕು ಎಂಬುದು ಪ್ರಧಾನಿ ಸಲಹೆಯ ಹಿಂದಿರುವ ಉದ್ದೇಶ​ ಎಂದು ವರದಿಯಾಗಿದೆ.

​ಈ ಸುದ್ದಿಯನ್ನು ನೋಡಿದ ಕೂಡಲೇ ನೆನಪಾಗೋದು ಒಂದೇ ಮಾತು : "ಹಿಪೋಕ್ರಸಿ ಕಿ ಬಿ ಸೀಮಾ ಹೋತಿ ಹೈ..."

ಮುಸ್ಲಿಂ ಮಹಿಳೆಯರಿಗೆ ರಾಕಿ ಕಟ್ಟುವ ಪ್ರಧಾನಿ ಮೋದಿಯವರ ಹೇಳಿಕೆಯನ್ನು ನಾವೆಲ್ಲರೂ ಸ್ವಾಗತಿಸೋಣ. ಈ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಅಭಯ ನೀಡುತ್ತೇವೆ ಎಂದು ಪ್ರಧಾನಿಯೇ ಹೇಳ್ತಾ ಇರೋದು ಒಳ್ಳೆಯ ವಿಷಯ. ಅದಕ್ಕಾಗಿ ಅವರನ್ನು ಅಭಿನಂದಿಸೋಣ. ಆದರೆ ಪ್ರಧಾನಿ ಏನೋ ಈ ಸೂಚನೆ ಕೊಟ್ಟು ತಮ್ಮ ಸಂಸದರನ್ನು, ನಾಯಕರನ್ನು ಕಳಿಸಿದ್ದಾರೆ. ಆದರೆ ಈ ಬಿಜೆಪಿ ಸಂಸದರು, ನಾಯಕರು ಈಗ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಅವರಿಗೆಲ್ಲ ಫಜೀತಿಯಾಗಿದೆ. ಮೋದೀಜಿ ಬಿಗ್ ಬಾಸ್ ತರ ಈಗೊಂದು ಟಾಸ್ಕ್ ಕೊಟ್ಟಿದ್ದಾರೆ.

ಆದರೆ ಆ ಟಾಸ್ಕ್ ಮಾಡೋದು ಅದೆಷ್ಟು ಕಷ್ಟ ಅಂತ ಅವರಿಗೆ ಗೊತ್ತಾಗಲ್ಲ ಅಂತ ಪ್ರತಾಪ್ ಸಿಂಹ, ಸಿಟಿ ರವಿ, ಬೊಮ್ಮಾಯಿ, ಯತ್ನಾಳ್, ಯಶಪಾಲ್ ಸುವರ್ಣ ಅವರೆಲ್ಲ ಪರಿತಪಿಸ್ತಾ ಇದ್ದಾರೆ. ಮೊದಲು ಮೋದಿಜಿ ಭಾಷಣದಲ್ಲಿ " ಗಲಭೆ ಮಾಡುವವರನ್ನು ಅವರ ಉಡುಪಿನಿಂದಲೇ ಗುರುತಿಸಬಹುದು " ಅಂದ್ರು. ಆಗ ಬಿಜೆಪಿ ನಾಯಕರೆಲ್ಲ ಸೂಚನೆ ಸಿಕ್ಕಿತು ಎಂದು ಮುಸ್ಲಿಮರ ವಿರುದ್ಧ ಸಿಕ್ಕ ಸಿಕ್ಕಲ್ಲೆಲ್ಲ ಹರಿಹಾಯ್ದರು. ಅವರು ಹಾಗೆ, ಅವರು ಹೀಗೆ, ಅವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂದೆಲ್ಲ ಹೇಳಿದ್ರು. ಮೋದಿಜಿಗೆ ಖುಷಿ ಆಗಬೇಕು ಅಷ್ಟೇ ಅಂತ ಅದನ್ನೆಲ್ಲ ಚಾಚೂ ತಪ್ಪದೇ ಮಾಡಿದ್ರು. ಈಗ ನೋಡಿದ್ರೆ ಮೋದೀಜಿ ಮುಸ್ಲಿಂ ಮಹಿಳೆಯರಿಗೆ ರಾಕಿ ಕಟ್ಟಿ ಎಂದು ಹೇಳುತ್ತಿದ್ದಾರೆ.

ಅಯ್ಯೋ ಇದೆಂತಹ ಸಂಕಟಕ್ಕೆ ಸಿಲುಕಿ ಬಿಟ್ಟೆವಪ್ಪಾ ಅಂತ ಈಗ ಗಿರಿರಾಜ್ ಸಿಂಗ್, ಸಿಟಿ ರವಿ, ಪ್ರತಾಪ್ ಸಿಂಹ, ಯಶಪಾಲ್ ಸುವರ್ಣ ಅವರ ಗೋಳಾಟವೇ ಗೋಳಾಟ. ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಯಾವ ಮುಖ ಇಟ್ಕೊಂಡು ಮುಸ್ಲಿಂ ಮಹಿಳೆಯರ ಬಳಿ ರಾಕಿ ಕಟ್ಟಲು ಹೋಗ್ತಾರೆ ?. ನಿನ್ನೆ ಮೊನ್ನೆವರೆಗೆ ಮೋದಿಜಿಗೆ ಖುಷಿ ಆಗ್ಬೇಕು ಅಂತ ಇದೇ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುತ್ತಿದ್ದರು, ಪ್ರಚೋದನಾಕಾರಿ ಹೇಳಿಕೆ ಕೊಡುತ್ತಾ ವಾತಾವರಣ ಕದಡುತ್ತಿದ್ದರು, ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ತೀರಾ ಕೀಳು ಮಟ್ಟದಲ್ಲಿ ಮಾತಾಡುತ್ತಿದ್ದರು, ಅವರಿಗೆ ತಮ್ಮ ಆಡಳಿತವಿರುವಲ್ಲಿ ಒಂದಾದ ಮೇಲೊಂದು ಕಿರುಕುಳ ಕೊಡ್ತಾ ಇದ್ರು.

ಈಗ ಅದೇ ಬಿಜೆಪಿ ಮಂದಿ ಅದ್ಯಾವ ಮುಖ ಇಟ್ಕೊಂಡು ಮುಸ್ಲಿಂ ಮಹಿಳೆಯರ ಬಳಿ ಹೋಗಿ " ನಾನು ನಿಮ್ಮ ಅಣ್ಣ, ನನಗೆ ರಾಕಿ ಕಟ್ಟಿ " ಅಂತ ಹೇಳ್ತಾರೆ. ಪ್ರಧಾನಿ ಮೋದಿ ಸೂಚನೆಯಿಂದ ಇವರಿಗೆಲ್ಲ ಅದೆಂತಹ ಸಂಕಟ ಆಗಿರಬಹುದು ಎಂದು ಊಹಿಸಿದರೇ ಭಾರೀ ಬೇಜಾರಾಗುತ್ತೆ. ಮುಸ್ಲಿಂ ಹೆಣ್ಣುಮಕ್ಕಳ ​ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವ, ಅವರ ಶೈಕ್ಷಣಿಕ ಹಕ್ಕುಗಳನ್ನು ಕಸಿಯುವಂಥ ​ಧೋರಣೆ ತೋರಿಸುವ ಇದೇ ಬಿಜೆಪಿಯ ಮಂದಿ​ ಈಗ ಮೋದಿಜಿ ಹೇಳಿದ್ದಾರೆ ಅಂತ ಮುಸ್ಲಿಂ ಮಹಿಳೆಯರ ಮುಂದೆ ರಾಖಿ ಹಿಡಿದು ಕಾಣಿಸಿಕೊಳ್ಳಲಿದ್ದಾರೆ.

ಕಳೆದೊಂಬತ್ತು ವರ್ಷಗಳಲ್ಲಿ ಸತತವಾಗಿ ದ್ವೇಷದ ಬೆಂಕಿ ಹಚ್ಚುತ್ತಲೇ​ ಬಂದಿರುವ, ಮುಸ್ಲಿಂರನ್ನು ಮತ್ತು ಮುಸ್ಲಿಂ ಹೆಣ್ಣುಮಕ್ಕಳನ್ನು ಜರೆಯುತ್ತಲೇ ಬಂದಿದ್ದ , ಅವರ ಮೇಲೆ ದಾಳಿಯೆಸಗುವ ಸಣ್ಣ ಅವಕಾಶವನ್ನೂ ಬಿಡದೆ ಕಾಡುತ್ತಲೇ ​ಇದ್ದ ಬಿಜೆಪಿ ಮತ್ತು ಸಂಘಪರಿವಾರದ ಜನರು ​ಈಗ ಮೋದಿಜಿ ಹೇಳಿದ್ದಾರೆ ಅಂತ ಅದೇ ಮುಸ್ಲಿಮರ ಬಳಿ ಹೋಗಿ " ನಾನು ನಿಮ್ಮ ಸೋದರ, ರಾಕೀ ಕಟ್ಟಲು ಬಂದಿದ್ದೇನೆ " ಎಂದು ಹೇಳಬೇಕಾಗಿದೆ.

​ಗುಜರಾತ್ ನ ಗೋಧ್ರಾದಲ್ಲಿ ಬಿಜೆಪಿ MLA ಸಿ.ಕೆ ರಾವುಲ್ ಜಿ. ಈತ ಬಿಲ್ಕಿಸ್ ಬಾನುವನ್ನು ಸಾಮೂಹಿಕ ಅತ್ಯಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಹೇಳಿದ್ದ. ಈಗ ಈತ ಪ್ರಧಾನಿ ಮೋದಿಜಿಯ ಸೂಚನೆ ಪಾಲಿಸೋದು ಹೇಗೆ ?. ಅದೆಂತಹ ಸಂಕಟ ತಂದಿಟ್ಟು ಬಿಡುತ್ತಾರೆ ಮೋದಿಜಿ ಅಲ್ವಾ ?. ಆದರೆ ಇಲ್ಲೊಂದು ವಿಷಯವಿದೆ. ತಮ್ಮ ಸಂಸದರು, ನಾಯಕರು ರಾಕಿ ಕಟ್ಟುವಾಗ ಮೊದಲು ತಾವೇ ಮುಸ್ಲಿಂ ಮಹಿಳೆಗೆ ರಾಕಿ ಕಟ್ಟಬೇಕಲ್ವಾ ಮೋದಿಜಿ ?. ​ಅವರು ತಮ್ಮದೇ ತವರು ರಾಜ್ಯ ಗುಜರಾತ್ ಗೆ ಹೋಗಿ ಬಿಲ್ಕಿಸ್ ಬಾನು ಬಳಿ " ನಾನು ನಿನ್ನ ಸೋದರನಂತೆ, ನನಗೆ ರಾಕಿ ಕಟ್ಟು, ನಾನು ನಿನಗೆ ರಾಕಿ ಕಟ್ಟುತ್ತೇನೆ " ಎಂದು ಹೇಳಬಲ್ಲರೇ ?. ಆ ರಾಜ್ಯದಲ್ಲಿ ಆಕೆಗೆ ಆಗಿರುವ ಘೋರ ಅನ್ಯಾಯಗಳ ಬಳಿಕ ಅಂತಹ ನೈತಿಕ ಧೈರ್ಯ ಅವರಿಗಿದೆಯೇ?

ಈ ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ನಡೆದ ಅಷ್ಟೂ ಗುಂಪು ಹತ್ಯೆಗಳ ಸಂತ್ರಸ್ತ ಮುಸ್ಲಿಮರ ಮನೆಯ ಮಹಿಳೆಯರ ಬಳಿ ಆಯಾ ಊರಿನ ಬಿಜೆಪಿ ಮುಖಂಡರು ಹೋಗಿ " ನಾನು ನಿಮ್ಮ ಸೋದರ,ನನಗೆ ರಾಕಿ ಕಟ್ಟಿ " ಎಂದು ಹೇಳೋದು ಸಾಧ್ಯನಾ ? . "ನನಗೆ ಮುಸ್ಲಿಮರ ಓಟು ಬೇಡ, ಅವರು ನನ್ನ ಆಫೀಸ್ಗೆ ಬರೋದೇ ಬೇಡ " ಎಂದು ಹೇಳಿದ ಸಂಸದ ಅನಂತ್ ಕುಮಾರ್ ಹೆಗಡೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗ ಮೋದೀಜಿ ಸೂಚನೆ ಪಾಲಿಸೋದು ಹೇಗೆ ?

ಅಮಾಯಕರ ಜೀವನ ಮತ್ತು ಜೀವನೋಪಾಯವೆರಡನ್ನೂ ಕಸಿಯುತ್ತ, ​ಅವರನ್ನು ಪಾಕಿಸ್ತಾನಿಗಳು​ ಎಂದು ಜರೆಯುತ್ತಾ , ಪೂರ್ತಿ ಬೇರೆಯಾಗಿಯೇ ಕಾಣುವುದು ನಡೆದಿರುವಾಗಲೇ ಇನ್ನೊಂದು ಕಡೆಯಿಂದ ರಾಖಿ ಹಿಡಿದು ಬರಲು ಇವರಿಗೆ ಯಾವ ನೈತಿಕತೆ ಇದೆ?. ಶ್ವೇತಭವನದಲ್ಲಿ ನಿಂತಾಗ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತೆ​ಗೆ ಮುಸ್ಲಿಂ ಆಗಿದ್ದಕ್ಕೆ, ಆಕೆ ಮೋದಿಜಿಯನ್ನೇ ಪ್ರಶ್ನಿಸಿದ್ದಕ್ಕೆ ಮೋದಿಜಿ ಅವರ ಭಕ್ತಪಡೆ ​ಆಕೆಯನ್ನು ಅದೆಷ್ಟು ಟ್ರೊಲ್ ಮಾಡಿತು ? ಇದೇ ಭಕ್ತಪಡೆ ಮೋದಿಜಿಯನ್ನು ನಂಬಿ ಮಹಿಳೆಯರಿಗೆ ಸೋಷಿಯಲ್ ಮೀಡಿಯದಲ್ಲಿ ರೇಪ್ ಬೆದರಿಕೆ ಹಾಕುತ್ತಿತ್ತು. ಈಗ ರಕ್ಷಾ ಬಂಧನ ಕಟ್ಟಿಸಿಕೊಳ್ಳಿ ಎಂದು ಬರೆಯಬೇಕಾಗಿದೆ.

ಹೀಗಿರುವಾಗ ​ ರಾಖಿ ಹಿಡಿದುಕೊಂಡು ಅದೆಷ್ಟು ಶುದ್ಧ ಮನಸ್ಸಿನಿಂದ ಮುಸ್ಲಿಂ ಮಹಿಳೆಯರ ಎದುರು ಹೋಗುತ್ತಾರೆ ಇವರೆಲ್ಲ?. ಮೋದೀಜಿ , ನೀವು ನಿಮ್ಮ ಭಕ್ತಪಡೆಯನ್ನು ಹೀಗೆಲ್ಲ ಕಾಡೋದು ಸರೀನಾ ?. ನಾವು ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ ದಬ್ಬಾಳಿಕೆಯಿಂದ ಮುಕ್ತಗೊಳಿಸಿದ್ದೇವೆ. ನಮ್ಮ ಸರ್ಕಾರ ಮುಸ್ಲಿಂ ಮಹಿಳೆಯರೊಂದಿಗೆ ನಿಂತಿದೆ ಎಂದು ಕಳೆದ ಬಾರಿ ಉತ್ತರ ಪ್ರದೇಶ ಚುನಾವಣೆ ವೇಳೆ ಪ್ರಧಾನಿ ಮೋದಿ ಭಾಷಣ ಬಿಗಿಯುತ್ತಿದ್ದರೆ, ಕರ್ನಾಟಕದಲ್ಲಿ ಅವರದೇ ಸಂಘಪರಿವಾರದ ಜನ ಹಿಜಾಬ್ ವಿರುದ್ಧ ಬೊಬ್ಬೆ ಹೊಡೆ​ಯುತ್ತಿದ್ದರು.

ಮುಸ್ಲಿಂ ಹೆಣ್ಣುಮಕ್ಕಳು ​ತಲೆ ಮೇಲೊಂದು ಬಟ್ಟೆ ಹಾಕಿಕೊಂಡಿದ್ದಕ್ಕೆ ಅವರು ಶಾಲೆ​,​ ಕಾಲೇಜಿನೊಳಗೆ ಬರಕೂಡದು ಎಂದು ಬಿಜೆಪಿ, ಬಜರಂಗಿ ಪಡೆಗಳು ಪ್ರತಿಭಟನೆ ಶುರುಮಾಡಿದ್ದವು. ಶಾಲೆ ಇಲ್ಲವೆ ಹಿಜಾಬ್ ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳಿ ಎನ್ನುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕನ್ನು ಕಸಿಯುವ ಪ್ರಯತ್ನಗಳಾದವು.

ದೆಹಲಿಯ ಶಾಹೀನ್ ಬಾಗ್ನಲ್ಲಿ ಸಿಎಎ, ಎನ್ಆರ್ಸಿ, ಎನ್ಆರ್ಪಿ ವಿರುದ್ಧ ಪ್ರತಿಭಟನೆ ವೇಳೆ ಕೂಡ ಶಾಂತಿಯುತವಾಗಿ ಮಹಿಳೆಯರು ಪ್ರತಿಭಟನೆಯಲ್ಲಿ ತೊಡಗಿದ್ದರೆ ಹೇಗೆ ಅವರ ವಿರುದ್ಧ ಹಿಂಸಾಚಾರಕ್ಕೆ ಇದೇ ಬಿಜೆಪಿ ನಾಯಕರು ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ್ದರು ಎಂಬುದನ್ನೂ ನೋಡಿದ್ದೇವೆ.

​ಕೇಂದ್ರ ಸಚಿವ ಅನುರಾಗ್ ಠಾಕೂರ್ ​ ಅವರನ್ನು ದೇಶದ್ರೋಹಿಗಳು ಎಂದು ಕರೆದದ್ದು ಮಾತ್ರವಲ್ಲ, ಗುಂಡಿಕ್ಕಿ ಕೊಲ್ಲಬೇಕು ಎಂ​ದು ಹೇಳಿಸಿದ್ದರು. ಮಾತಿನಿಂದ ಅಲ್ಲ, ಅವರಿಗೆ ಬುಲೆಟ್ಟಿನಿಂದ ಪಾಠ ಕಲಿಸಬೇಕು ಎಂದು ಆದಿತ್ಯನಾಥ್ ​ ಹೇಳಿದ್ದ​ರು. ಪ್ರತಿಭಟನಾಕಾರರು ಕರೆಂಟ್ ಶಾಕ್ ಅನುಭವಿಸುವ ಹಾಗೆ ಬಿಜೆಪಿಗೆ ಮತ ಕೊಡಿ ಎಂದು ಕೇಂದ್ರ ಗೃಹಸಚಿವ ಅಮಿತ ಶಾ ಹೇಳಿದ್ದ​ರು.

​ಇದೆಲ್ಲವನ್ನೂ ಅವರು ಹೇಳಿದ್ದು ಮೋದಿಜಿಯನ್ನು ಮೆಚ್ಚಿಸಲು. ಈಗ ನೋಡಿದ್ರೆ ಮೋದಿಜಿ ಹೋಗಿ ಅವರಿಗೆ ರಾಕಿ ಕಟ್ಟಿ ಅಂತ ಹೇಳ್ತಾ ಇದ್ದಾರೆ.ಇಂಥವರೆಲ್ಲ ಈಗ ಹೇಗೆ ರಾಖಿ ಹಿಡಿದುಕೊಂಡು ಹೋಗಿ ಮುಸ್ಲಿಂ ಮಹಿಳೆಯರ ಎದುರು ನಿಲ್ಲುತ್ತಾರೆ?. ಹಿಜಾಬ್ ವಿವಾದವೆಬ್ಬಿಸಿ, ಮುಸ್ಲಿಂ ಬಾಲಕಿಯರ ವಿರುದ್ಧ ನಿಂತಿದ್ದವರು, ಮೊನ್ನೆ ಉಡುಪಿ ಕಾಲೇಜಿನ ವಿಚಾರದಲ್ಲಿ ​ ಮುಸ್ಲಿಂ ವಿದ್ಯಾರ್ಥಿನಿಯರಿದ್ದರು ಎಂಬ ಕಾರಣಕ್ಕಾಗಿಯೇ ದೊಡ್ಡದು ಮಾಡಿ, ತಾವೇ ​ಸುಳ್ಳುಗಳನ್ನು ಸೇರಿಸಿ ವಿವಾದವೆಬ್ಬಿಸಿದವರು ಇದೇ​ ಮೋದಿಜಿಯ ಬಿಜೆಪಿಯ ನಾಯಕರೇ ಅಲ್ಲವೆ?.

ಹೀಗಿರುವಾಗ, ತಮ್ಮನ್ನು ತಾವು​ ಮುಸ್ಲಿಂ ವಿರೋಧಿ ನಾಯಕರು ಎಂ​ದೇ ಬಣ್ಣಿಸಿ ಕೊಂಡಿರುವ​ ಸಿ.ಟಿ ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪ, ಯಶ್ಪಾಲ್ ಸುವರ್ಣ, ನಳಿನ್ ಕುಮಾರ್ ಕಟೀಲ್ ಇವರೆಲ್ಲ ಯಾವ ಮುಖ ಇಟ್ಟುಕೊಂಡು ಮುಸ್ಲಿಂ ಮಹಿಳೆಯರ ಬಳಿ ಹೋಗುತ್ತಾರೆ?. ಮುಸ್ಲಿಂರನ್ನು ಕ್ರಿಮಿನಲ್ಗಳು, ಭಯೋತ್ಪಾದಕರು ಎಂದೆಲ್ಲಾ ಹೇಳುತ್ತ, ಅವರ ರಕ್ಷಣೆಗೆ ನಿಂತಿದೆ ಎಂದು ಕಾಂಗ್ರೆಸನ್ನು ಜರೆಯುತ್ತ ಬಂದಿರುವ ಬಿಜೆಪಿ ಮಂದಿಗೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯಂಥ ನಾಯಕರಿಗೆ ​ಈಗ ಅದೇ ಮುಸ್ಲಿಂ ಮಹಿಳೆಯರ ಮುಂದೆ ಹೋಗಿ ನಿಲ್ಲುವಂತೆ ಮಾಡಿ ಬಿಟ್ಟರು ಮೋದಿಜಿ.

ಚುನಾವಣೆ ಇರಲಿ ಇಲ್ಲದಿರಲಿ, ಮುಸ್ಲಿಂರ ವಿರುದ್ಧ ದ್ವೇಷ ಕಾರುವುದನ್ನೇ ಅಜೆಂಡಾ ಮಾಡಿಕೊಂಡಿರುವ ಜನ ಈ ಸಲ ರಕ್ಷಾ ಬಂಧನದ ಹೊಸ ನಾಟಕಕ್ಕೆ ನಿಂತಿದ್ಧಾರೆ. ದೆಹಲಿಯ ಬಾಜೂವಿನಲ್ಲೇ ಇವರೇ ಹಚ್ಚಿದ ಕೋಮುಗಲಭೆಯ ಬೆಂಕಿ ಹೊತ್ತಿ ಉರಿಯುತ್ತಿದೆ. ಎಂಥ ವಿಪರ್ಯಾಸ ಅಲ್ಲವೆ​ ?.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News