ರಾಜ್ಯ ಸರಕಾರದ ವಿದ್ಯಮಾನಗಳಿಂದ ಹೈಕಮಾಂಡ್ ಸಿಡಿಮಿಡಿ

Update: 2023-08-04 14:05 GMT

ಆರ್. ಜೀವಿ

ರಾಜ್ಯದಲ್ಲಿ ಚುನಾವಣೆಯ ಅಭೂತಪೂರ್ವ ಗೆಲುವು, ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಿಂದ ಬೀಗುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಇದೀಗ, ರಾಜ್ಯದಲ್ಲಿ ಪಕ್ಷದ ಹಾಗು ಸರಕಾರದೊಳಗಿನ ವಿದ್ಯಮಾನಗಳಿಂದ ಸಿಡಿಮಿಡಿಗೊಂಡಿದೆ. ಅದಕ್ಕಾಗಿಯೇ ಸರಕಾರದ ಪ್ರಮುಖರಿಗೆ ದಿಲ್ಲಿಗೆ ಬರಲು ಬುಲಾವ್ ಬಂದಿದೆ. ಅಲ್ಲಿ ಮೀಟಿಂಗ್ ಆಗಿದೆ.

ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವಾಗ ಪಕ್ಷದ ಸರಕಾರದ ವರ್ಚಸ್ಸು ಮುಕ್ಕಾಗುವ, ಸದಾಭಿಪ್ರಾಯಕ್ಕೆ ಧಕ್ಕೆಯಾಗುವಂತಹ ವಿಚಾರಗಳು ಚರ್ಚೆಗೆ ಬಂದಿರುವುದು ವರಿಷ್ಠರ ಕೋಪಕ್ಕೆ ಕಾರಣವಾಗಿದೆ. ಕೂಡಲೇ ಸರಿಪಡಿಸಿಕೊಂಡು ಮುಂದೆ ಸಾಗುವಂತೆ ರಾಜ್ಯ ನಾಯಕರಿಗೆ ಅವರು ತಾಕೀತು ಮಾಡಿದ್ದಾರೆ.

ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಬುಧವಾರ ರಾಜ್ಯ ನಾಯಕರೊಂದಿಗೆ ನಡೆದ ವರಿಷ್ಠರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ, ಕೆ.ಎಚ್‌.ಮುನಿಯಪ್ಪ, ಕೃಷ್ಣಬೈರೇಗೌಡ, ಈಶ್ವರ ಖಂಡ್ರೆ, ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ್‌, ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಸಂಸದ ಡಿ.ಕೆ.ಸುರೇಶ್‌, ಜಿ.ಸಿ. ಚಂದ್ರಶೇಖರ್, ಹಿರಿಯ ನಾಯಕರಾದ ಜೈರಾಮ್ ರಮೇಶ್, ಆರ್.ವಿ. ದೇಶಪಾಂಡೆ, ಬಿ.ಎಲ್ ಶಂಕರ್, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಬಿ.ಕೆ.ಹರಿಪ್ರಸಾದ್, ಕೆ.ಆರ್. ರಮೇಶ್‌ ಕುಮಾರ್, ಸಲೀಂ ಅಹ್ಮದ್‌ ಮತ್ತಿತರರು ಭಾಗವಹಿಸಿದ್ದರು.

ವರ್ಗಾವಣೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅದರ ಬೆನ್ನಿಗೇ ಶಾಸಕರ ಪತ್ರ ಬಹಿರಂಗವಾಯಿತು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಕೆರಳಿದೆ. ಈ ರೀತಿ ಪಕ್ಷ ಹಾಗೂ ಸರಕಾರದ ವರ್ಚಸಿಗೆ ಭಂಗ ತರುವ ಯಾವುದೇ ಬೆಳವಣಿಗೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದ ಭರವಸೆ ಮಾಡಿ ಗೆದ್ದು ಬಂದಿರುವ ಪಕ್ಷವೇ ತನ್ನ ಸರಕಾರದಲ್ಲಿ ಇಂಥ ಆರೋಪಗಳಿಗೆ ಅವಕಾಶ ನೀಡಿದರೆ ಹೇಗೆ ? ಭ್ರಷ್ಟಾಚಾರವನ್ನು ಸಹಿಸಲಾಗದು. ಎಷ್ಟೇ ಪ್ರಭಾವಿಗಳಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಸಚಿವರ ಮೇಲೆ ಇಂಥ ಆರೋಪ ಬಂದರೆ ಸಂಪುಟದಿಂದಲೇ ವಜಾಗೊಳಿಸಬೇಕು. ಈ ವಿಷಯ ದಲ್ಲಿ ರಾಜೀ ಪ್ರಶ್ನೆಯೇ ಇಲ್ಲವೆಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ಹೇಳಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಸಿದ್ಧತೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಹಿರಿಯ ಮುಖಂಡರ ಸಭೆಯನ್ನು ದಿಲ್ಲಿಯಲ್ಲಿ ಬುಧವಾರ ನಡೆಸಲಾಯಿತು. ಪ್ರಮುಖರು ಭಾಗಿಯಾಗಿದ್ದ ಈ ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಮುಖಂಡರಿಗೆ ಚುರುಕು, ಮುಟ್ಟಿಸಲಾಗಿದೆ ಎಂದು ವರದಿಯಾಗಿದೆ.

'ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಕಳಂಕದ ಆರೋಪ ಹೊರಿಸಿ ಸ್ವಚ್ಛ, ಪಾರದರ್ಶಕ, ದಕ್ಷ ಹಾಗೂ ಉತ್ತರದಾಯಿ ಆಡಳಿತದ ಭರವಸೆ ನೀಡಿ ಅಧಿಕಾರ ಹಿಡಿದ ಪಕ್ಷದ ಸರಕಾರ ಯಾವ ದಾರಿಯಲ್ಲಿ ಸಾಗಿದೆ? ಭ್ರಷ್ಟಾಚಾರದ ವಿಚಾರದಲ್ಲಿ 'ಜೀರೋ ಟಾಲರೆನ್ಸ್' ಇರಬೇಕು. ಯಾವುದೇ ಸಚಿವರ ವಿರುದ್ಧ ಆರೋಪ ಬಂದರೂ ನಿರ್ದಾಕ್ಷಿಣ್ಯವಾಗಿ ವಜಾ ಮಾಡಿ,'' ಎಂದು ಸಭೆಯಲ್ಲಿ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

"ಪಕ್ಷದ ಶಾಸಕರನ್ನು ಬಿಟ್ಟು ಬಿಡಬೇಡಿ. ಅವರ ಎಲ್ಲಾ ಕೆಲಸಗಳನ್ನು ಮಾಡಲಾಗದಿರಬಹುದು. ಆದರೆ ಅವರ ಅಹವಾಲುಗಳಿಗೆ ಕಿವಿಯಾಗಿ. ಶಾಸಕರನ್ನು ಉಪೇಕ್ಷೆ ಮಾಡಿದರೆ, ಆಗ ಶಾಸಕರು ಅನಿವಾರ್ಯವಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಬೇಕಾಗುತ್ತದೆ. ಲೋಕಸಭಾ ಚುನಾವಣೆ ಹತ್ತಿರವಿರುವ ಈ ಸಂದರ್ಭದಲ್ಲಿ ಸಿಎಂ ಅವರು ಚುನಾವಣಾ ಗೆಲುವಿಗೆ ತಂತ್ರಗಾರಿಕೆ ರೂಪಿಸಬೇಕು. ಉತ್ತಮ ಆಡಳಿತ ನೀಡಬೇಕು. ಗ್ಯಾರಂಟಿಗಳ ಯಶಸ್ಸಿಗೆ ತಮ್ಮ ಸಮಯ ನೀಡಬೇಕು. ಹೀಗಿರುವಾಗ ಶಾಸಕರು ತಮ್ಮದೇ ಪಕ್ಷದ ಸಚಿವರ ಬಗ್ಗೆ ಅಸಮಾಧಾನಗೊಂಡು ಅದನ್ನು ಮುಖ್ಯಮಂತ್ರಿಗಳ ಮೇಲೆ ಹೇರುವುದು ಸರಿಯಲ್ಲ. ಇದರ ಹೊಣೆಗಾರಿಕೆಯನ್ನು ಸಚಿವರೇ ವಹಿಸಬೇಕು ಎಂದು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರ ವಿರುದ್ಧ ನಿರ್ದಿಷ್ಟ ಆರೋಪಗಳ ಕುರಿತಂತೆ ದೂರುಗಳು ನಮಗೆ ಬಂದಿವೆ. ಇದು ಮುಂದುವರಿಯಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿನ ಎಲ್ಲ ಬೆಳವಣಿಗೆ ಬಗ್ಗೆಯೂ ಹೈಕಮಾಂಡ್ ಗೆ ಕಣ್ಗಾವಲು ಇದೆ ಎಂಬ ಸ್ಪಷ್ಟ ಸಂದೇಶವನ್ನು ವೇಣುಗೋಪಾಲ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

''ಬಹುತೇಕ ಸಚಿವರು ಪಕ್ಕದ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಅಹವಾಲು ಗಳಿಗೆ ಸಂದಿಸುತ್ತಿಲ್ಲ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಸ್ವಂತ ಕಟ್ಟಡದಲ್ಲಿ ಕಚೇರಿ ಆರಂಭಿಸಲೂ ಸಂಬಂಧಪಟ್ಟ ಸಚಿವರುಗಳು ಕ್ರಮ ವಹಿಸಬೇಕು, ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿ,'' ಎಂದು ಅವರು ಸಿಎಂಗೆ ಹಾಗು ಡಿಸಿಎಂ ಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

"ಸರಕಾರ ಅಧಿಕಾರಕ್ಕೆ ಬಂದು 3 ತಿಂಗಳು ಸಮೀಪಿಸುವ ಮುನ್ನವೇ ಪಕ್ಷವೊಂದು ಕಡೆ, ಸರಕಾರ ಮತ್ತೊಂದು ದಿಕ್ಕಿನಲ್ಲಿ ಸಾಗಿದೆ ಎಂಬ ಅಭಿಪ್ರಾಯ ಗಟ್ಟಿಯಾಗುತ್ತಿದೆ. ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್, ಅನುದಾನ ಬಿಡುಗಡೆ ವಿಚಾರದಲ್ಲಿ ಊಹಾಪೋಹಗಳು ಕೇಳಿಬರುತ್ತಿವೆ. ಇದಕ್ಕೆ ಆಸ್ಪದ ಕೊಡಬೇಡಿ, ಅದಕ್ಕಾಗಿ ಕಾರ್ಯಕರ್ತರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ" ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರಕಾರ ರಚಿಸಿ ಇನ್ನೂ ಮೂರು ತಿಂಗಳಾಗಿಲ್ಲ. ಹನಿಮೂನ್ ಪೀರಿಯಡ್ ಈಗಷ್ಟೇ ಮುಗಿಯುತ್ತಿದೆ. ಆಗಲೇ ಅಲ್ಲಲ್ಲಿ ಅಪಸ್ವರ ಕೇಳಿ ಬರಲಾರಂಭಿಸಿರುವುದು ಪಕ್ಷದ ಪಾಲಿಗೆ ಒಳ್ಳೆಯ ಸುದ್ದಿಯಂತೂ ಅಲ್ಲ. ಕರ್ನಾಟಕ ಸರಕಾರ ಒಳ್ಳೆಯ ಹೆಸರು ಮಾಡಬೇಕು, ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಎಂಪಿ ಸೀಟು ಗೆಲ್ಲಬೇಕು, ದಕ್ಷಿಣದ ಇತರ ರಾಜ್ಯಗಳಲ್ಲೂ ಪಕ್ಷ ಲೋಕಸಭಾ ಸ್ಥಾನ ಗೆಲ್ಲಲು ಇಲ್ಲಿನ ವರ್ಚಸ್ಸು ನೆರವಾಗಬೇಕು ಎಂಬ ನಿರೀಕ್ಷೆ ವರಿಷ್ಟರಲ್ಲಿದೆ.

ಕಾಂಗ್ರೆಸ್ ಗೆಲುವಿನಿಂದ ಕಂಗೆಟ್ಟಿರುವ ಬಿಜೆಪಿ ಹಾಗು ಹತಾಶವಾಗಿರುವ ಜೆಡಿಎಸ್ ಈ ಸರಕಾರದ ಮೇಲೆ ಹದ್ದಿನ ಕಣ್ಣಿಟ್ಟಿವೆ. ಸರಕಾರದ ಒಂದೇ ಒಂದು ತಪ್ಪು ನಡೆ ಅದಕ್ಕೆ ಬಹಳ ದುಬಾರಿಯಾಗುವಂತೆ ಮಾಡಲು ಆ ಎರಡೂ ಪಕ್ಷಗಳು ಸಜ್ಜಾಗಿವೆ. ಹಾಗಾಗಿ ಸಿದ್ದರಾಮಯ್ಯ ಸರಕಾರ ಅದೆಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು.

ಗ್ಯಾರಂಟಿಗಳ ಅನುಷ್ಠಾನ, ಇತರ ಅಭಿವೃದ್ಧಿ ಕೆಲಸಗಳು, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ, ಸರಕಾರ ಜನಪರ ಎಂಬ ಛಾಪು ಮೂಡಿಸುವ ಕೆಲಸ ಜೊತೆಗೆ ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ ಇದೆಲ್ಲವೂ ಈಗ ಆಗಬೇಕಾಗಿವೆ. ಗ್ಯಾರಂಟಿಗಳಿಂದ ಬಂದಿರುವ ಜನಪ್ರಿಯತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಅದರ ನಡುವೆ ಯಾವುದೇ ಎಡವಟ್ಟಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕಾಂಗ್ರೆಸ್ ಸಚಿವರು ಹಾಗು ಒಟ್ಟು ಸರಕಾರದ ಆದ್ಯತೆಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News

ಬಯಲರಿವು