ಭಾರತೀಯರ ಮೇಲೆ ಕಣ್ಗಾವಲಿಗಾಗಿ ಮೋದಿ ಸರಕಾರವು ಇಸ್ರೇಲಿ ಕಂಪನಿಗಳ ಸಾಧನಗಳನ್ನು ಬಳಸುತ್ತಿದೆ:ಫೈನಾನ್ಶಿಯಲ್ ಟೈಮ್ಸ್ ವರದಿ
ಭಾರತವು ‘ಹಿಂಬಾಗಿಲ’ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ. ಇದು ದೇಶದ ೧.೪ ಶತಕೋಟಿ ಭಾರತೀಯರ ಮೇಲೆ ನಿಗಾ ಇರಿಸಲು ನರೇಂದ್ರ ಮೋದಿ ಸರಕಾರಕ್ಕೆ ಅವಕಾಶವನ್ನು ಒದಗಿಸಿದೆ ಎಂದು ಪ್ರಮುಖ ಆಂಗ್ಲ ದೈನಿಕ ಫೈನಾನ್ಶಿಯಲ್ ಟೈಮ್ಸ್ ತನ್ನ ವಿಶೇಷ ವರದಿಯಲ್ಲಿ ಹೇಳಿದೆ
ಹೊಸದಿಲ್ಲಿ,ಆ.೩೧: ಭಾರತವು ‘ಹಿಂಬಾಗಿಲ’ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ. ಇದು ದೇಶದ ೧.೪ ಶತಕೋಟಿ ಭಾರತೀಯರ ಮೇಲೆ ನಿಗಾ ಇರಿಸಲು ನರೇಂದ್ರ ಮೋದಿ ಸರಕಾರಕ್ಕೆ ಅವಕಾಶವನ್ನು ಒದಗಿಸಿದೆ ಎಂದು ಪ್ರಮುಖ ಆಂಗ್ಲ ದೈನಿಕ ಫೈನಾನ್ಶಿಯಲ್ ಟೈಮ್ಸ್ ತನ್ನ ವಿಶೇಷ ವರದಿಯಲ್ಲಿ ಹೇಳಿದೆ. ಅಲೆಕ್ಸಾಂಡರ್ ಹೀಲ್, ಅನ್ನಾ ಗ್ರಾಸ್, ಬೆಂಜಮೀನ್ ಪಾರ್ಕಿನ್, ಕ್ರಿಸ್ ಕುಕ್, ಮೆಹುಲ್ ಶ್ರೀವಸ್ತಾ ಅವರನ್ನೊಳಗೊಂಡ ತಂಡ ಈ ವರದಿ ಸಿದ್ಧ ಪಡಿಸಿದೆ.
ಭಾರತದಲ್ಲಿ ಪ್ರತಿ ದಿನ ವೈಯಕ್ತಿಕ ಡೇಟಾ ದೇಶದ ಸಮುದ್ರ ತೀರದಾದ್ಯಂತ ಸ್ಥಾಪಿಸಲ್ಪಟ್ಟಿರುವ ಮತ್ತು ಶೇಷ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವ ಸಾಗರದಡಿಯ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‌ಗಳ ಮೂಲಕ ಸಾಗುತ್ತದೆ. ಇವುಗಳಲ್ಲಿ ಪ್ರತಿಯೊಂದರಲ್ಲಿಯೂ ಹಾರ್ಡ್‌ವೇರ್‌ವೊಂದನ್ನು ಅಳವಡಿಸಲಾಗಿದ್ದು,ಇದು ಡೇಟಾವನ್ನು ಶೋಧಿಸುತ್ತದೆ, ಕಾಪಿ ಮಾಡಿಕೊಳ್ಳುತ್ತದೆ ಮತ್ತು ಅಗತ್ಯವಾದಾಗ ಅವುಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಅನಾಲಿಟಿಕ್ಸ್ ನೆರವು ಪಡೆದುಕೊಂಡು ದೇಶದ ಭದ್ರತಾ ಏಜೆನ್ಸಿಗಳಿಗೆ ರವಾನಿಸುತ್ತದೆ. ಇದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತಿರುವ ಕಣ್ಗಾವಲು ವ್ಯವಸ್ಥೆಯ ಭಾಗವಾಗಿದೆ.ಭಾರತದ ಸಂವಹನ ಮಾರುಕಟ್ಟೆಯು ವೇಗವಾಗಿ ಬೆಳೆಯತ್ತಿದ್ದು, ಕಣ್ಗಾವಲು ಸಾಧನಗಳನ್ನು ಮಾರಾಟ ಮಾಡಲು ಹಲವಾರು ಕಂಪನಿಗಳು ಪೈಪೋಟಿ ನಡೆಸುತ್ತಿವೆ. ವೆಹೆರ್‌ನಂತಹ ಸ್ವದೇಶಿ ಕಂಪನಿಗಳು ಮತ್ತು ಇಸ್ರೇಲ್‌ನ ಕಾಗ್ನೈಟ್ ಮತ್ತು ಸೆಪ್ಟಿಯರ್‌ನಂತಹ ಹೆಚ್ಚು ಪ್ರಸಿದ್ಧವಲ್ಲದ ಕಂಪನಿಗಳು ಇವುಗಳಲ್ಲಿ ಸೇರಿವೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
೨೦೨೧ರಲ್ಲಿ ಅಟ್ಲಾಂಟಿಕ್ ಕೌನ್ಸಿಲ್ ‘ಸಂಭಾವ್ಯ ಬೇಜವಾಬ್ದಾರಿಯುತ ಪ್ರಸರಣಕಾರ ’ಎಂದು ಪರಿಗಸಿದ್ದ ಡಝನ್ ಕಂಪನಿಗಳಲ್ಲಿ ಸೆಪ್ಟಿಯರ್ ಒಂದಾಗಿರುವುದರಿಂದ ಈ ಲಿಂಕ್‌ಗಳು ಕೆಲವು ಆತಂಕಗಳನ್ನು ಸೃಷ್ಟಿಸಿವೆ. ಈ ಕಂಪನಿಗಳು ಅಮೆರಿಕ/ನ್ಯಾಟೋ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಲು ಅಥವಾ ದುರ್ಬಲ ವರ್ಗದ ಜನಸಂಖ್ಯೆಗೆ ಹಾನಿಯನ್ನುಂಟು ಮಾಡಲು ಬಯಸುವ ಗ್ರಾಹಕ ಸರಕಾರಗಳ ಸಾಮರ್ಥ್ಯವನ್ನು ತಮ್ಮ ಉತ್ಪನ್ನಗಳು ಹೆಚ್ಚಿಸುವ ಅಪಾಯವನ್ನು ಒಪ್ಪಿಕೊಳ್ಳು ಅಥವಾ ಕಡೆಗಸಲು ಸಿದ್ಧವಾಗಿವೆ ಎಂದು ಅಮೆರಿಕ ಮೂಲದ ಚಿಂತನ ಚಾವಡಿಯು ಶಂಕಿಸಿತ್ತು. ಆದರೆ ಸೆಪ್ಟಿಯರ್ ಇದನ್ನು ಕೇವಲ ಊಹಾಪೋಹ ಎಂದು ತಳ್ಳಿ ಹಾಕಿತ್ತು.
ವರದಿಯನ್ನು ಪ್ರಕಟಿಸಿರುವ ಫೈನಾನ್ಶಿಯಲ್ ಟೈಮ್ಸ್ ವಿಶ್ವಾದ್ಯಂತ ಸಾಗರದಡಿಯ ಕೇಬಲ್ ಯೋಜನೆಗಳಲ್ಲಿ ಕೆಲಸ ಮಾಡಿದ ಜನರೊಂದಿಗೆ ಮಾತನಾಡಿದ್ದು ,ಭಾರತವು ಟೆಲಿಕಾಂ ಕಂಪನಿಗಳು ಸಾಗರದಡಿಯ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ಮತ್ತು ಡೇಟಾ ಸೆಂಟರ್‌ಗಳಲ್ಲಿ ಕಣ್ಗಾವಲು ತಂತ್ರಜ್ಞಾನವನ್ನು ಅಳವಡಿಸುವುದನ್ನು ಹೇಗೆ ಬಹಿರಂಗವಾಗಿಯೇ ಅಗತ್ಯಗೊಳಿಸಿದೆ ಎನ್ನುವುದನ್ನು ಅವರು ಬಹಿರಂಗಗೊಳಿಸಿದ್ದಾರೆ. ಭಾರತ ಸರಕಾರವು ಇವುಗಳನ್ನು ಕಾರ್ಯಾಚರಣೆಯ ಷರತ್ತನ್ನಾಗಿ ಅನುಮೋದಿಸಿದೆ ಎಂದು ವರದಿಯು ಹೇಳಿದೆ. ಈ ಕಣ್ಗಾವಲು ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ ಮತ್ತು ಎಲ್ಲ ನಿಗಾ ವಿನಂತಿಗಳನ್ನು ಗೃಹ ಕಾರ್ಯದರ್ಶಿಗಳು ಅನುಮೋದಿಸಿದ್ದಾರೆ ಎಂದು ಸರಕಾರವು ಸ್ಪಷ್ಟಪಡಿಸಿದೆ. ಆದರೆ,ಈ ರಕ್ಷಣೆಗಳು ‘ರಬ್ಬರ್ ಸ್ಟ್ಯಾಂಪಿಂಗ್’ಗೆ ಸಮಾನವಾಗಿವೆ ಮತ್ತು ದುರುಪಯೋಗವನ್ನು ತಡೆಯುವುದಿಲ್ಲ ಎಂದು ಟೀಕಾಕಾರರು ಹೇಳಿದ್ದಾರೆ.
ಗಮನಾರ್ಹವಾಗಿ ಮೋದಿ ಅಧಿಕಾರಕ್ಕೆ ಬರುವ ಮೊದಲೇ ಕಾನೂನುಬದ್ಧ ಪ್ರತಿಬಂಧಕ ನಿಯಮಗಳು ಅಸ್ತಿತ್ವದಲ್ಲಿದ್ದವು,ಆದರೆ ಅವರ ಸರಕಾರವು ಅವುಗಳ ಬಳಕೆಯನ್ನು ಹೆಚ್ಚಿಸಿದೆ ಎಂದು ವರದಿಯು ತಿಳಿಸಿದೆ. ಈಗಾಗಲೇ ಮೋದಿ ಸರಕಾರವು ೨೦೧೯ ಮತ್ತು ೨೦೨೧ರಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರ ಫೋನ್‌ಗಳಲ್ಲಿ ಪೆಗಾಸಸ್ ಬೇಹುಗಾರಿಕೆ ಸಾಧನ ಪತ್ತೆಯಾದಾಗ ಹಗರಣವನ್ನು ಎದುರಿಸಿತ್ತು. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ಉತ್ಪನ್ನವಾಗಿರುವ ಪೆಗಾಸಸ್ ಸ್ಪೈವೇರ್‌ನ್ನು ತಾನು ನಿಯೋಜಿಸಿದ್ದೆ ಎನ್ನುವುದನ್ನು ಭಾರತವು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಈಗ ಹೊಸ ದತ್ತಾಂಶ ಸಂರಕ್ಷಣಾ ಕಾನೂನಿನೊಂದಿಗೆ ಅಧಿಕಾರಿಗಳು ಗೋಪ್ಯತೆ ಸುರಕ್ಷತೆಗಳನ್ನು ಅತಿಕ್ರಮಿಸಲು ವ್ಯಾಪಕ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಈ ಕಾನೂನು ಸರಕಾರದ ಕಣ್ಗಾವಲಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎನ್ನುತ್ತಾರೆ ಟೀಕಾಕಾರರು.