ಎಚ್.ಡಿ.ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಪ್ರಕರಣ ದಾಖಲು
ಮೈಸೂರು, ಮೇ 3: ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೇ ಇವರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣರನ್ನು ಮೊದಲ ಆರೋಪಿ (ಎ1) ಎಂದು ಉಲ್ಲೇಖಿಸಲಾಗಿದೆ. ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಕೊಪ್ಪಲಿನ ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ.
ರೇವಣ್ಣರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಎಪ್ರಿಲ್ 29ರಂದು ಅಪಹರಿಸಲಾಗಿದೆ ಮಹಿಳೆಯ ಪುತ್ರ ರಾಜು ಕೆ.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
'ನನ್ನ ತಾಯಿ ಆರು ವರ್ಷದಿಂದ ಹೊಳೆನರಸೀಪುರದ ಚೆನ್ನಾಂಬಿಕ ಥಿಯೇಟರ್ ಬಳಿ ಇರುವ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅಲ್ಲಿ ಕೆಲಸ ಬಿಟ್ಟಿದ್ದು, ಊರಿನಲ್ಲಿ ಕೂಲಿ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಭವಾನಿ ಮತ್ತೆ ಕೆಲಸಕ್ಕೆ ಕರೆದಿದ್ದಾರೆಂದು ಹೇಳಿ ಹೆಬ್ಬಾಳಕೊಪ್ಪಲಿನ ಸತೀಶ್ ಬಾಬಣ್ಣ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದರು' ಎಂದು ದೂರಿನಲ್ಲಿ ತಿಳಿಸಿದ್ದಾರೆ.
'ಚುನಾವಣೆಯ ದಿನ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು. ನಂತರ ಎ.29ರಂದು ರಾತ್ರಿ ಮನೆಗೆ ಬಂದ ಬಾಬಣ್ಣ ನಿಮ್ಮ ತಾಯಿ ಪೊಲೀಸರಿಗೆ ಸಿಕ್ಕರೆ ಪ್ರಕರಣ ದಾಖಲಾಗುತ್ತದೆ. ಅವರನ್ನು ರೇವಣ್ಣ ಸಾಹೇಬರು ಕರೆದುಕೊಂಡು ಹೋಗಲು ತಿಳಿಸಿದ್ದಾರೆಂದು ಹೇಳಿ ಒತ್ತಾಯದಿಂದ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ' ಎಂದು ಆರೋಪಿಸಿದ್ದಾರೆ.
'ಎ.1ರಂದು ನನ್ನ ಸ್ನೇಹಿತರು ಕೆಲವರು ಮನೆಗೆ ಬಂದು, ನಿನ್ನ ತಾಯಿಯ ವೀಡಿಯೊ ಮೊಬೈಲ್ ಫೋನ್ನಲ್ಲಿ ಹರಿದಾಡುತ್ತಿದೆ. ನಿನ್ನ ತಾಯಿ ಕೈ ಮುಗಿದರೂ ಪ್ರಜ್ವಲ್ ಅಣ್ಣ ಬಲಾತ್ಕಾರ ಮಾಡಿರುವ ದೃಶ್ಯ ವೀಡಿಯೊದಲ್ಲಿದೆ. ಆ ಬಗ್ಗೆ ದೊಡ್ಡ ಪ್ರಕರಣವೂ ದಾಖಲಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾನು ಬಾಬಣ್ಣ ರಿಗೆ ಕರೆ ಮಾಡಿ ತಾಯಿಯನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದೆ. ಅವರು, ಈ ಹಿಂದೆ ರೇವಣ್ಣ ಸಾಹೇಬರ ಮಗ ಬೇರೆಯವರೊಂದಿಗೆ ಗಲಾಟೆ ಮಾಡಿದಾಗ ನಿಮ್ಮ ತಾಯಿಯೂ ದೊಣ್ಣೆ ಹಿಡಿದು ನಿಂತಿರುವ ಫೋಟೊ ಬಂದಿದೆ. ಹೀಗಾಗಿ ಅವರ ಮೇಲೂ ಎಫ್.ಐ.ಆರ್. ದಾಖಲಾಗಿದೆ. ಇನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕು' ಎಂದರು.
ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಸುಳ್ಳು ಹೇಳಿ ತಾಯಿಯನ್ನು ಒತ್ತಾಯದಿಂದ ಕರೆದೊಯ್ದು ನಮಗೆ ಗೊತ್ತಿಲ್ಲದ ಕಡೆ ಕೂಡಿಹಾಕಿದ್ದಾರೆ. ನನ್ನ ತಾಯಿಯ ಜೀವಕ್ಕೆ ತೊಂದರೆ ಇದೆ. ತಾಯಿಯನ್ನು ಕರೆದೊಯ್ಯಲು ಹೇಳಿದ ರೇವಣ್ಣ ಹಾಗೂ ಕರೆದೊಯ್ದ ಸತೀಶ್ ಬಾಬಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ರಾಜು ದೂರಿನಲ್ಲಿ ಒತ್ತಾಯಿಸಿದ್ದಾರೆ.