ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ಕ್ಕೆ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ನಗರದ ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಬೆಳಗ್ಗೆ 09:15ರಿಂದ 09.45ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನಾಡೋಜ, ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು.
ಇದಕ್ಕೂ ಮೊದಲು ದಟ್ಟ ಮಂಜು ಕವಿದ ವಾತಾವರಣದಲ್ಲಿ ನಾಡೋಜ ಹಂ.ಪ.ನಾಗರಾಜಯ್ಯರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಡೊಳ್ಳು, ವಾದ್ಯ ಸೇರಿದಂತೆ ಕಲಾ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಹಂ.ಪ.ನಾ ಬುಧವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಅವರನ್ನು ಗುರುವಾರ ಬೆಳಗ್ಗೆ ಪೊಲೀಸ್ ಬೆಂಗಾವಲಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಮೈಸೂರಿನಿಂದ ಕೆಎಸ್ಸಾರ್ಟಿಸಿ ಐರಾವತ ಬಸ್ ನಲ್ಲಿ ಆಗಮಿಸಿದರು. ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ತಂಡಕ್ಕೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ನಂತರ ನಾಡೋಜ ಹಂ.ಪ.ನಾಗರಾಜಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು. ದೇವಾಲಯದ ವತಿಯಿಂದ ಹಂ.ಪ.ನಾಗರಾಜಯ್ಯ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರಿಗೂ ಶಾಲು ಹಾರ, ಕುಂಕುಮ ಹಾಕಿ ಫಲ ತಾಂಬೂಲ ನೀಡಲಾಯಿತು.
ಮೈಸೂರಿನ ತಂಡ ಕಾರ್ಯಕ್ರಮ ಆರಂಭಕ್ಕೂ ಮುನ್ನ ಭಕ್ತಿ, ಧಾರ್ಮಿಕ ಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿದರು.
ದಸರಾ ಉದ್ಘಾಟನೆಯಾಗಿ ಮುಗಿಯುವವರೆಗೂ ಯಾವುದೇ ಸಾರ್ವಜನಿಕ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಅವಕಾಶ ನೀಡಲಿಲ್ಲ. ಕೆಎಸ್ಸಾರ್ಟಿಸಿ ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ , ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ, ಶಾಸಕರಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಡಿ.ರವಿ ಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.