ದಸರಾ ಸಿಎಂ‌ ಕಪ್ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-10-03 18:33 GMT

ಮೈಸೂರು: ಕ್ರೀಡಾಪಟುಗಳಲ್ಲಿ ಶ್ರಮ, ಏಕಾಗ್ರತೆ, ಗುರಿ, ಗುಣಮಟ್ಟದ ತರಬೇತಿ ಸಿಕ್ಕಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ದಸರಾ ವಿಶ್ವಖ್ಯಾತಿ ಪಡೆದಿರುವ ಉತ್ಸವ. ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ದಸರಾ ಉತ್ಸವದ ಅಂಗವಾಗಿ ಸಿಎಂ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡೆಯಲ್ಲಿ ಪದಕ ಗೆಲ್ಲುವುದು ಒಂದು ಭಾಗವಾದರೆ, ಕ್ರೀಡೆಯಲ್ಲಿ ಭಾಗವಹಿಸುವುದೂ ಮುಖ್ಯ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಪದಕ ಗೆಲ್ಲುವ ಪ್ರಯತ್ನ ಬಹಳ ಮುಖ್ಯ ಎಂದರು.

ಮುಂದಿನ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲು ಸಿಎಂ ಹಾರೈಕೆ:

ಯುವಜನತೆ ಕ್ರೀಡೆಯೊಂದಿಗೆ ಓದಿನ ಕಡೆಗೂ ಸೂಕ್ತ ಗಮನ ಹರಿಸಬೇಕು. ಎಲ್ಲ ಕ್ರೀಡಾಪಟುಗಳನ್ನು ಶುಭ ಹಾರೈಸುತ್ತೇನೆ ಎಂದರು.

ಹರ್ಮನ್‌ ಪ್ರೀತ್ ಸಿಂಗ್ ಅವರು ಭಾರತ ಹಾಕಿ ತಂಡದ ನಾಯಕರಾಗಿದ್ದು, ಭಾರತ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಹರ್ಮನ್‌ ಪ್ರೀತ್ ಸಿಂಗ್ ಅವರು 200 ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿರುವ ಕೀರ್ತಿ ಸಲ್ಲುತ್ತದೆ. ಕಳೆದ ಒಲಂಪಿಕ್ಸ್ ನಲ್ಲಿ ಇವರ ನಾಯಕತ್ವದಲ್ಲಿ ಭಾರತ ಕಂಚಿನ ಪದಕವನ್ನು ಗೆಲ್ಲಲು ಸಾಧ್ಯವಾಯಿತು. ಮುಂದಿನ ಒಲಂಪಿಕ್ಸ್ ನಲ್ಲಿ ಅವರು ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವಂತಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಹರ್ಮನ್‌ ಪ್ರೀತ್ ಸಿಂಗ್ ಅವರನ್ನು ಇಲ್ಲಿನ ಕ್ರೀಡಾಕೂಟಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರ ಕ್ರೀಡೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜ್ಯ ಒಲಂಪಿಕ್ಸ್ ಅಧ್ಯಕ್ಷ ಗೋವಿಂದರಾಜು, ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಯುವಜನ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಣದೀಪ್, ಆಯುಕ್ತ ಚೇತನ್, ಕ್ರೀಡಾ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News