ಕಬಿನಿ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ: ಮಲ್ಲನಮೂಲೆಯಲ್ಲಿ ರಾ.ಹೆದ್ದಾರಿ ಜಲಾವೃತ, ರಸ್ತೆ ಸಂಚಾರ ಬಂದ್
ಮೈಸೂರು, ಜು.19: ನಿರಂತರ ಮಳೆಯ ಆರ್ಭಟಕ್ಕೆ ತುಂಬಿ ತುಳುಕುತ್ತಿರುವ ಕಬಿನಿ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ 212 ಮಲ್ಲನಮೂಲೆ ಮಠದ ಬಳಿ ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಬಂದ್ ಮಾಡಲಾಗಿದೆ.
ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಮೈಸೂರು-ನಂಜನಗೂಡು ರಸ್ತೆಯ ಚಿಕ್ಕಯ್ಯನ ಚತ್ರ ಬಳಿ ಇರುವ ಶ್ರೀಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನದಿಂದ ಮಲ್ಲನಮೂಲೆ ಮಠದ ವರೆಗೆ ರಸ್ತೆಯಲ್ಲಿ 4 ಅಡಿ ನೀರು ತುಂಬಿದೆ. ಮಲ್ಲನಮೂಲೆ ಮಠ ಅರ್ಧಭಾಗ ಜಲಾವೃತಗೊಂಡಿದೆ.
ಪ್ರವಾಹ ಭೀತಿ ಎದುರಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮೈಸೂರು-ನಂಜನಗೂಡು ರಸ್ತೆಯನ್ನು ಶುಕ್ರವಾರ ಬೆಳಗ್ಗೆಯಿಂದಲೇ ಬಂದ್ ಮಾಡಿದೆ. ಇದರಿಂದ ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ತೆರಳುವ ಚಾಮರಾಜನಗರ, ಗುಂಡ್ಲುಪೇಟೆ, ಊಟಿ, ತಮಿಳುನಾಡು, ಕೇರಳ ಕಡೆಗಳಿಗೆ ಸಂಚರಿಸುವವರಿಗೆ ತೊಂದರೆಯುಂಟಾಗಿದೆ.
ಕಬಿನಿ ಹೊರ ಹರಿವು ಹೆಚ್ಚಾದಂತೆ ನದಿ ಪಾತ್ರದ ಅನೇಕ ಗ್ರಾಮಗಳಿಗೂ ನೀರು ನುಗ್ಗಿದೆ. ನಂಜನಗೂಡು ನಗರದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗಕ್ಕೂ ನೀರು ಹರಿದು ಬರುವ ಸಾಧ್ಯತೆ ಇದೆ. ಈ ಭಾಗದ ಅನೇಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸಂಚಾರಕ್ಕೆ ಬದಲಿ ಮಾರ್ಗ: ಮೈಸೂರು-ನಂಜನಗೂಡು ಮಾರ್ಗವಾಗಿ ತೆರಳುವವರಿಗೆ ಬದಲಿ ಮಾರ್ಗ ಕಲ್ಪಿಸಲಾಗಿದ್ದು, ಮೈಸೂರಿನಿಂದ ನಂಜನಗೂಡು ಕಡೆಗೆ ತೆರಳುವವರು ಕಡಕೊಳ ಬಳಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಮಾರ್ಗವಾಗಿ ತೆರಳಿ ಹರಜ್ಜಿಗರ ಸೇತುವೆ ಮುಖಾಂತರ ನಂಜನಗೂಡು ತಲುಪಬಹುದಾಗಿದೆ. ನಂಜನಗೂಡು ಮಾರ್ಗವಾಗಿ ಮೈಸೂರಿಗೆ ಹೋಗಬೇಕಿರುವವರು, ಬಸವನಪುರ, ಕೆಂಪಿಸಿದ್ಧನಹುಂಡಿ ಮಾರ್ಗವಾಗಿ ತಾಂಡ್ಯ ಕೈಗಾರಿಕಾ ಪ್ರದೇಶದಿಂದ ಚಿಕ್ಕಯ್ಯನಚತ್ರ ಹಾದು ಮೈಸೂರು ತಲುಪಬೇಕಿದೆ.
ರಸ್ತೆಯಲ್ಲೆ ವಾಹನಗಳನ್ನು ತೊಳೆಯುತ್ತಿರುವ ಜನತೆ: ಮೈಸೂರು-ನಂಜನಗೂಡು ರಾಷ್ಟ್ರೀಯ ಹದ್ದಾರಿಯ ಮಲ್ಲನಮೂಲೆ ಬಳಿ ರಸ್ತೆಗೆ ನೀರು ಬಂದಿದೆ ಎಂಬುದನ್ನು ತಿಳಿದ ಜನರು ನೀರನ್ನು ನೋಡಲು ಆಗಮಿಸುತ್ತಿದ್ದಾರೆ. ಕರಲವರು ರಸ್ತೆಯಲ್ಲಿ ನಿಂತಿರುವ ನೀರಿನಿಂದ ತಮ್ಮ ವಾಹನಗಳನ್ನು ಕ್ಲೀನ್ ಮಾಡಿದರೆ.ಇನ್ನು ಕೆಲವರು ಸೆಲ್ಫಿ ತೆಗೆಸಿಕೊಂಡು ಸಂತಸ ಪಡುತ್ತಿದ್ದಾರೆ.
ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಂಜನಗೂಡು ಡಿ.ದೇವರಾಜ ಅರಸು ಸೇತುವೆ ಬಳಿಯೇ ಬ್ಯಾರಿಕೇಡ್ ಹಾಕಿ ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳಹಿಸುತ್ತಿದ್ದಾರೆ. ಮೈಸೂರಿನಿಂದ ಬರುವವರಿಗೆ ಚಿಕ್ಕಯ್ಯನಚತ್ರ ದ ಬಳಿಯೇ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ತಡೆಯುತ್ತಿದ್ದಾರೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆಯನ್ನು ನೀಡುತ್ತಿದ್ದಾರೆ.