ಇನ್ನೊಬ್ಬರ ಬದುಕು ಹಾಳು ಮಾಡುವವರಿಗೆ ದೇವರು ಸದ್ಬುದ್ಧಿ ಕೊಡಲಿ: ಸಿದ್ದರಾಮಯ್ಯ
ಮೈಸೂರು: ದಸರಾ ದುಷ್ಟ ಶಕ್ತಿಗಳ ಸಂಹಾರ, ಶಿಷ್ಟರಿಗೆ ರಕ್ಷಣೆ ಕೊಡುವ ಹಬ್ಬ. ನಾಡಿನಲ್ಲಿ ಕೆಟ್ಟದಾಗಿ ಯೋಚನೆ ಮಾಡುವವರಿಗೆ ಇನ್ನೊಬ್ಬರ ಬದುಕನ್ನು ಹಾಳು ಮಾಡುವವರಿಗೆ ಸದ್ಬುದ್ಧಿ ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ದಸರಾ ಜಂಬೂ ಸವಾರಿ ಉದ್ಘಾಟನೆಗೂ ಮುನ್ನ ಶನಿವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಉಪಹಾರ ಸೇವಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮೈಸೂರು ದಸರಾ ಜಗದ್ವಿಖ್ಯಾತ ಗೊಂಡಿರುವ ದಸರಾ, ತಾಯಿ ಚಾಮುಂಡೇಶ್ವರಿ ದುಷ್ಟರಿಗೆ ಶಿಕ್ಷೆ ನೀಡಿ ಶಿಕ್ಷರಿಗೆ ರಕ್ಷಣೆಮಾಡಬೇಕಿದೆ. ನಾಡಿನಲ್ಲಿ ಕೆಟ್ಟದಾಗಿ ಯೋಚನೆ ಮಾಡಿ ಇನ್ನೊಬ್ಬರ ಬದುಕನ್ನು ಹಾಳು ಮಾಡುವವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿದರು.
ಈ ಬಾರಿ ದಸರಾ ಆಚರಣೆಯನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ಸಂತೋಷದ ವಿಚಾರ ಏನೆಂದರೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ, ಬೆಳೆಯಾಗಿದೆ. ರೈತರು ಸಂತೋಷದಿಂದ ಇದ್ದಾರೆ. ರೈತರು ಸಂತೋಷದಿಂದ್ದರೆ ಸರಕಾರ ಮತ್ತು ರಾಜ್ಯ ಸಂತೋಷವಾಗಿರುತ್ತದೆ ಎಂದು ಹೇಳಿದರು.
ಕಳೆದ ವರ್ಷ ಬರಗಾಲ ಇತ್ತು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿವೆ. ಜನ ಸುಭಿಕ್ಷವಾಗಿದ್ದಾರೆ. ಹಾಗಾಗಿ ದಸರಾ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಶಿಷ್ಟರ ರಕ್ಷಣೆಯಾಗಲಿ ಎಂದು ಹೇಳಿದರು.